ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಶಾಸಕ ಎಚ್.ಡಿ. ರೇವಣ್ಣ ಆರೋಪ

Published 16 ನವೆಂಬರ್ 2023, 13:30 IST
Last Updated 16 ನವೆಂಬರ್ 2023, 13:30 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಸರ್ಕಾರ ಬರ ಪರಿಹಾರ ವಿತರಣೆಯಲ್ಲಿ ಲೋಪ ಎಸಗುತ್ತಿದ್ದು, ಇದೀಗ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆ ಮಾಡಿರುವ ಪರಿಹಾರದ ಹಣವನ್ನು ಖರ್ಚು ಮಾಡಲು ಕೆಲ ಮಾರ್ಗಸೂಚಿ ಹೊರಡಿಸಿರುವ ಕಾರಣ ನಯಾ ಪೈಸೆ ಕೂಡ ಬಳಕೆಯಾಗುತ್ತಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಖಾತೆಗೆ ₹12 ಕೋಟಿಯನ್ನು ಸರ್ಕಾರ ಜಮೆ ಮಾಡಿದೆ. ಇದರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಲಕ್ಷದಂತೆ ₹4 ಕೋಟಿಯನ್ನು ಹಂಚಿಕೆ ಮಾಡಲಾಗಿದೆ ಎಂದರು.

ಆದರೆ ಹಂಚಿಕೆ ಮಾಡಿರುವ ಹಣವನ್ನು ಬರ ಪರಿಸ್ಥಿತಿ ಸಂದರ್ಭದಲ್ಲಿ ಕೊಳವೆಬಾವಿ ಕೊರೆಸಲು, ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಬಳಸುವಂತಿಲ್ಲ ಎಂದು ನಿಬಂಧನೆಗಳನ್ನು ಹಾಕಲಾಗಿದೆ. ಇದರಿಂದ ಬರ ಪರಿಸ್ಥಿತಿ ನಿಭಾಯಿಸಲು ಹಾಗೂ ಪರಿಹಾರ ವಿತರಣೆಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಬರ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಜನರು ಪರಿತಪಿಸುವಂತಾಗಿದೆ. ಕೇವಲ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಕಾಲ ಕಳೆಯುತ್ತಿರುವ ಇವರಿಂದ ಜನರ ಕಷ್ಟಗಳು ಪರಿಹಾರ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ಬಲದಂಡ ನಾಲೆ, ಶ್ರೀರಾಮದೇವರ ಕಟ್ಟೆ ಸೇರಿದಂತೆ ಅನೇಕ ನೀರು ಸರಬರಾಜು ನಾಲೆಗಳಲ್ಲಿ ಗಿಡಗಂಟಿ ಬೆಳೆದು ಹೂಳು ತುಂಬಿದ್ದು, ಇದರ ದುರಸ್ತಿಗೂ ಸಹ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಬಹುತೇಕ ವಿತರಣೆ ನಾಲೆಗಳಲ್ಲಿ ಮಣ್ಣು ತುಂಬಿದ್ದು, ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಸಚಿವರಿಗೆ, ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

₹12 ಕೋಟಿಯಲ್ಲಿ ₹4 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ ₹8 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿಯೇ ಉಳಿದಿದೆ. ಬರಗಾಲದಲ್ಲಿ ಈ ಹಣವನ್ನು ಬಳಕೆ ಮಾಡಲು ಸರ್ಕಾರದ ಮಾರ್ಗಸೂಚಿ ಅಡ್ಡಿಯಾಗಿದೆ
ಎಚ್‌.ಡಿ. ರೇವಣ್ಣ ಶಾಸಕ
ಕುಡಿಯುವ ನೀರು ಮೇವು ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಹಣ ಖರ್ಚಾದ ನಂತರ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಸಿ.ಸತ್ಯಭಾಮಾ ಜಿಲ್ಲಾಧಿಕಾರಿ
ನಿಗಮದ ಆಸ್ತಿ ಜಪ್ತಿಗೆ ಆದೇಶ
ಕಾವೇರಿ ನೀರಾವರಿ ನಿಗಮದ ಕಚೇರಿ ಜಪ್ತಿಗೆ ನ್ಯಾಯಾಲಯದಿಂದ ಆದೇಶವಾಗಿದ್ದು ಹರದನಹಳ್ಳಿ ರೈತರಾದ ರವಿಕುಮಾರ್ ಶಿವೇಗೌಡ ರಂಗಮ್ಮ ಕಾಳೇಗೌಡ ಸೇರಿದಂತೆ ಅನೇಕ ರೈತರಿಗೆ ಭೂ ಪರಿಹಾರವಾಗಿ ₹6.53 ಕೋಟಿ ಪರಿಹಾರ ಬರಬೇಕಾಗಿದೆ. ಸೆ.16ರಂದು ಜಪ್ತಿ ಮಾಡಲು ಆದೇಶ ಹೊರಡಿಸಲಾಗಿದ್ದು ನ.18 ರೊಳಗೆ ಆದೇಶ ಪಾಲನೆಗೆ ಕೋರ್ಟ್‌ ನಿರ್ದೇಶನ ನೀಡಿದೆ ಎಂದು ರೇವಣ್ಣ ಹೇಳಿದರು. ಕಾಂಗ್ರೆಸ್ ಪಕ್ಷದ ಇಂತಹ ಕೆಟ್ಟ ಆಡಳಿತದಿಂದ ಇಂದು ಸರ್ಕಾರಿ ಕಚೇರಿಗಳು ಜಪ್ತಿಯಾಗುವ ಮಟ್ಟಕ್ಕೆ ಬಂದಿವೆ. ರೈತರಿಗೆ ಭೂ ಪರಿಹಾರ ಹಣವನ್ನು ಸಹ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಇಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ಆರೋಪಿಸಿದರು. ಒಂದೆಡೆ ಸರ್ಕಾರಿ ಕಚೇರಿಗಳು ಜಪ್ತಿಯಾಗುತ್ತಿದ್ದರೆ ಮತ್ತೊಂದೆಡೆ ಬರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದ್ದರೂ ವಿನಿಯೋಗಿಸಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT