ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಫಿಜಿಷಿಯನ್‌, ಅರಿವಳಿಕೆ ತಜ್ಞರಿಲ್ಲ

ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ; ಹೆಚ್ಚುತ್ತಿರುವ ಕೊರೊನಾ ಸೋಂಕಿತರು
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ನೂರರ ಗಡಿ ದಾಟುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆದಂತೆಲ್ಲಾ ಅವರ ಆರೈಕೆಗೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಇರುವ 40 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ 32 ಮಂದಿ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ಫಿಜಿಷಿಯನ್‌ ಹಾಗೂ ಅರಿವಳಿಕೆ ತಜ್ಞರು ಇಲ್ಲ. ಹೆಚ್ಚುವರಿಯಾಗಿ ಶುಶ್ರೂಷಕರು, ಡಿ ದರ್ಜೆ ನೌಕರರ ಅಗತ್ಯವಿದೆ. ಆಸ್ಪತ್ರೆಯಲ್ಲಿ ಆಮ್ಲಜನಕದ 36 ಸಿಲಿಂಡರ್‌ಗಳಿವೆ. ನಿತ್ಯ 8 ರಿಂದ 10 ಸಿಲಿಂಡರ್‌ಗಳು ಖಾಲಿ ಆಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿ ಸಿಲಿಂಡರ್‌ಗಳ ಅಗತ್ಯವಿದೆ. ಇನ್ನೂ 10 ಹಾಸಿಗೆಗಳ ಸೌಲಭ್ಯ ಒದಗಿಸಲು ಹೆಚ್ಚುವರಿ ಕೊಠಡಿಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕೆಲ ಕೊರತೆಗಳ ನಡುವೆಯೂ ಕೋವಿಡ್‌ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಆರ್‌. ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆ ಅಷ್ಟೇ ಇದೆ. ಕೆಲ ವೈದ್ಯರು 24X7 ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಳೆ ತಜ್ಞ ಡಾ. ರತ್ನಾಕರ ಕಿಣಿ ತಿಳಿಸಿದರು.

‘ನನಗೆ ಕೋವಿಡ್‌ ಬಂತು. ಸುಸ್ತು, ಉಸಿರಾಟದ ಸಮಸ್ಯೆ ಆಗಿತ್ತು. ಕ್ರಾಫರ್ಡ್‌ ಆಸ್ಪತ್ರೆಗೆ ದಾಖಲಾದೆ. ಆದರೆ, ಅಲ್ಲಿ ಫಿಜಿಷಿಯನ್‌ ಇಲ್ಲದ ಕಾರಣ ಹಾಸನದ ಹಿಮ್ಸ್‌ಗೆ ಕಳುಹಿಸಿದರು. ಅಲ್ಲಿ ಹಾಸಿಗೆ ಇಲ್ಲದೆ ಸಮಸ್ಯೆ ಆಯ್ತು. ಡಾ. ಎಂ.ಆರ್‌. ಮಧುಸೂದನ್‌ ಅವರು ಹಾಸನದಿಂದ ಪುನಃ ಕ್ರಾಫರ್ಡ್‌ ಆಸ್ಪತ್ರೆಗೆ ಕರೆಸಿಕೊಂಡು ಆಮ್ಲಜನಕದ ವ್ಯವಸ್ಥೆ ಇರುವ ಹಾಸಿಗೆ ಒದಗಿಸಿಕೊಟ್ಟರು. ಈಗ ಗುಣಮುಖನಾಗಿ ಮನೆಗೆ ಬಂದಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ ಕೌಡಹಳ್ಳಿ ತಮ್ಮ ಅನುಭವ ಹಂಚಿಕೊಂಡರು.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಟ್ಟಣದ ಎಪಿಎಂಸಿ ಸಮೀಪದ ಸರ್ಕಾರಿ ವಸತಿ ನಿಲಯ, ಬ್ಯಾಕರವಳ್ಳಿ ಹಾಗೂ ಹೆತ್ತೂರು ಮೊರಾರ್ಜಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲು ತಾಲ್ಲೂಕು ಆಡಳಿತ ನಿರ್ಧರಿಸಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಎಸ್‌. ಮಹೇಶ್‌ ತಿಳಿಸಿದರು.

***

ಮೂರನೇ ಅಲೆ ಬಂದರೆ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಎಚ್ಚರಿಕೆ ವಹಿಸಬೇಕು.

–ಡಾ. ಹೇಮಂತ್‌ ‍ಪ್ರಭು, ವೈದ್ಯ

***

ಶುಕ್ರವಾರಸಂತೆ ಆಸ್ಪತ್ರೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಏರಿಕೆ ಆಗುತ್ತಿದೆ. ರೋಗಿಗಳಿಗೆ ಚಿಕಿತ್ಸೆ ಜತೆಗೆ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ.

–ಡಾ.ರಂಜಿತಾ, ವೈದ್ಯಾಧಿಕಾರಿ, ಶುಕ್ರವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT