ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಕ್ಕಿಂತ ದೊಡ್ಡ ದೇವರಿಲ್ಲ: ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿ

Published 23 ಮೇ 2023, 14:28 IST
Last Updated 23 ಮೇ 2023, 14:28 IST
ಅಕ್ಷರ ಗಾತ್ರ

ಸಕಲೇಶಪುರ: ‘ಅನ್ನದೇವರ ಮುಂದೆ ಯಾವುದೇ ದೊಡ್ಡ ದೇವರು ಇಲ್ಲ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿ ಹೇಳಿದರು.

ತಾಲ್ಲೂಕಿನ ಬೊಮ್ಮನಕೆರೆ–ಹರಗರಹಳ್ಳಿಯಲ್ಲಿ ಮಂಗಳವಾರ ಮಲ್ಲಿಕಾರ್ಜುನ ಸ್ವಾಮಿ ಟ್ರಸ್ಟ್‌‌‌‌ನಿಂದ ನಡೆದ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.

‘ಊಟ ಮಾಡುವಾಗ ಒಂದು ಅಗುಳು ಅನ್ನವನ್ನೂ ಸಹ ಚೆಲ್ಲಾಡದೆ, ವ್ಯರ್ಥ ಮಾಡದೆ ತಿನ್ನಬೇಕು. ಬಿಸಿಲು, ಮಳೆ, ಚಳಿಯ ನಡುವೆ ರೈತ ತನ್ನ ಇಡೀ ಬದುಕನ್ನು ಕೃಷಿಗಾಗಿ ಮುಡಿಪು ಇಟ್ಟು, ಅವರ ಬೆವರಿನ ಹನಿಯಿಂದ ಬೆಳೆದ ಅನ್ನ ನಿಜವಾದ ದೇವರು’ ಎಂದರು.

‘ಪ್ರತಿಯೊಂದು ದಾಸೋಹದಲ್ಲಿಯೂ ಬಹುತೇಕರು ಪೂರ್ತಿಯಾಗಿ ತಿನ್ನದೆ, ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ. ಈ ಒಂದು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಭಕ್ತರಿಗೆಲ್ಲಾ ಪುನೀತ್‌ ಬನ್ನಳ್ಳಿ ಅನ್ನದಾಸೋಹ ಏರ್ಪಡಿಸಿದ್ದಾರೆ. ಇಂತಹ ದಾನಿಗಳ ದುಡಿಮೆಯ ಆದಾಯದಿಂದ ನೀಡುವ ಅನ್ನವನ್ನು ಎಸೆಯಬೇಡಿ’ ಎಂದು ಕಿವಿ ಮಾತು ಹೇಳಿದರು.

‘ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆಯುವುದರ ಜೊತೆಗೆ ಕಡ್ಡಾಯವಾಗಿ ಸಂಸ್ಕಾರ ಕಲಿಯಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಕಲಿಸುವ ಮೊದಲು ದೊಡ್ಡವರೂ ಕೂಡ ತಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

‘ಮಲೆನಾಡಿನ ಈ ಭಾಗದಲ್ಲಿ ಮಲೆನಾಡು ವೀರಶೈವ ಸಮಾಜ, ಸಾಗರ್‌ ಜಾನೇಕೆರೆ ಮುಂತಾದವರು ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಜನ್ಮದಿನದಂದು ಸಾವಿರಾರ ಜನರಿಗೆ ಅನ್ನಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಕಲ್ಮಠದ ಮಹಾಂತಸ್ವಾಮಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ, ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಮಾಜಿ ಶಾಸಕ ಬಿ.ಆರ್‌. ಗುರುದೇವ್‌, ಮಲ್ಲಿಕಾರ್ಜುನಸ್ವಾಮಿ ಸೇವಾ ಟ್ರಸ್ಟ್‌ ಅಧ್ಯಕ್ಷ ಜಯಪ್ರಕಾಶ್‌, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್‌.ಎನ್‌. ದೇವರಾಜ್‌, ಬಿಜೆಪಿ ಮುಖಂಡ ಅರೆಕೆರೆ ನರೇಶ್‌, ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷ ಸಾಗರ್ ಜಾನೇಕೆರೆ, ವಳಲಹಳ್ಳಿ ಗ್ರಾ.ಪಂ. ಅಧ್ಯಕ್ಷ ರೇಣುಕಾ, ಹರಗರಹಳ್ಳಿ ರೋಷನ್‌ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT