ಬುಡಕಟ್ಟು ಸಮುದಾಯದ ಸಮೀಕ್ಷೆ ಶುರು

7
ವಸತಿ, ಜಮೀನು ನೀಡಲು ನಿವಾಸಿಗಳ ಒತ್ತಾಯ; ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಯಿಂದ ವಿವರ ಸಂಗ್ರಹ

ಬುಡಕಟ್ಟು ಸಮುದಾಯದ ಸಮೀಕ್ಷೆ ಶುರು

Published:
Updated:
Deccan Herald

ಹಾಸನ: ಜಿಲ್ಲೆಯಲ್ಲಿ ವಾಸವಿರುವ ಬುಡಕಟ್ಟು ಸಮುದಾಯಗಳ ಸಮೀಕ್ಷೆ ಆರಂಭಗೊಂಡಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದ ಮೇರೆಗೆ ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್‌ ಅವರು ಮಾನವ ಹಕ್ಕು ವೇದಿಕೆ ಸಂಚಾಲಕ ಆರ್‌.ಮರಿಜೋಸೆಫ್‌, ಆದಿವಾಸಿ ಹಸಲ ಸಮುದಾಯದ ನವೀನ್‌ ಸದಾ, ಹಕ್ಕಿಪಿಕ್ಕಿ ಸಮುದಾಯದ ಹೂರಾಜ್‌, ಶಿಳ್ಳೆಕ್ಯಾತ ಬುಡುಬುಡಿಕೆ ಸಮುದಾಯದ ಅಣ್ಣಪ್ಪ ಜೊತೆಗೂಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು.

ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಹೇಮಾವತಿ ಜಲಾಶಯದ ಹಿನ್ನೀರಿನ ಮುಳುಗಡೆ ಪ್ರದೇಶದಲ್ಲಿ ವಾಸವಿರುವ ಶಿಳ್ಳೆಕ್ಯಾತ ಸಮುದಾಯದ ಜನರನ್ನು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಾಯಿತು.

ಈ ಪ್ರದೇಶದಲ್ಲಿ ಮೂರು ದಶಕದಿಂದ 60 ಕುಟುಂಬಗಳು ಮೀನುಗಾರಿಕೆ ವೃತ್ತಿ ಮಾಡಿಕೊಂಡು ಗುಡಿಸಿಲಿನಲ್ಲಿ ಜೀವನ ನಡೆಸುತ್ತಿವೆ.

‘ನಿವೇಶನ, ಮನೆ, ಯಾವುದೇ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸು ತ್ತಿದ್ದೇವೆ’ ಎಂದು ನಿವಾಸಿಗಳು ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಅಲವತ್ತುಕೊಂಡರು.

ಬಳಿಕ ಸಕಲೇಶಪುರ ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಆದಿವಾಸಿ ಸಮುದಾಯದ ಜನರನ್ನು ಭೇಟಿ ಮಾಡಲಾಯಿತು. ನಾಲ್ಕು
ದಶಕಗಳಿಂದ ಸರ್ಕಾರಿ ಜಾಗ ಸರ್ವೆ ನಂ. 16 ರಲ್ಲಿ 28 ಕುಟುಂಬಗಳು ಟೆಂಟ್‌ನಲ್ಲಿಯೇ ವಾಸ ಮಾಡುತ್ತಿವೆ.

‘ನಿವೇಶನ, ವಸತಿ, ಪಡಿತರ ಸೌಲಭ್ಯ ಕೊಡಿಸುವಂತೆ’ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿದರು. 

ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ತಂಡ, ಶಿಳ್ಳೆಕ್ಯಾತ ಬುಡುಬುಡಿಕೆ ಸಮುದಾಯದ 143 ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಇದೇ ಗ್ರಾಮದಲ್ಲಿ ಅಕ್ಕಿಪಿಕ್ಕಿ ಸಮುದಾಯದ 280 ಕುಟುಂಬಗಳು ವಾಸ ಮಾಡುತ್ತಿರುವ ಬಗ್ಗೆ ಹೂರಾಜ್‌ ಮಾಹಿತಿ ನೀಡಿದರು.

‘ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಕುರಿತು ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಶೋಷಿತ ಕುಟುಂಬಕ್ಕೆ ವಸತಿ, ನಿವೇಶನ, ಪೌಷ್ಟಿಕ ಆಹಾರ, ಲಭ್ಯ ಇರುವ ಕಡೆ ಭೂಮಿ ಕೊಡಿಸುವ ಬಗ್ಗೆ ಪ್ರಯತ್ನಿಸಲಾವುದು’ ಎಂದು ಶ್ರೀಧರ್‌ ಹೇಳಿದರು.

‘ಈ ಸಮುದಾಯಗಳು ವಾಸ ಇರುವ ಜಾಗ ಕಂದಾಯ ಇಲಾಖೆ ಅಥವಾ ಅರಣ್ಯ ಇಲಾಖೆಗೆ ಸೇರಿದೆಯೇ ಎಂಬುದನ್ನು ಪರಿಶೀಲಿಸಿ, ಸೌಲಭ್ಯ ಒದಗಿಸಲಾಗುವುದು’ ಎಂದು ಅವರೂ ಭರವಸೆ ನೀಡಿದರು.

‘ಅರಣ್ಯ ಹಕ್ಕು ಕಾಯ್ದೆ ಅಡಿ ಮೂಲ ಸೌಲಭ್ಯಗಳಾದ ವಸತಿ, ಪೌಷ್ಟಿಕ ಆಹಾರ, 94 ಸಿಸಿ ಅಡಿ ನಿವೇಶನ ಮತ್ತು ಸರ್ಕಾರಿ ಜಾಗ ನೀಡಬೇಕು. ಸರ್ಕಾರಿ ಆದೇಶ ಪ್ರಕಾರ ಅಲೆಮಾರಿ ಸಮುದಾಯಕ್ಕೆ ಖಾಸಗಿಯವರಿಂದ ಭೂಮಿ ಖರೀದಿಸಿ ವಸತಿ, ನಿವೇಶನ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿದರು.

ಮನೆ ಕಟ್ಟಿಸಿಕೊಡುವವರೆಗೆ ತಾತ್ಕಾಲಿಕ ಟೆಂಟ್‌ ಸೌಲಭ್ಯ ಕಲ್ಪಿಸಬೇಕು. ಮೀನುಗಾರಿಕೆ ವೃತ್ತಿ ಮಾಡುವವರಿಗೆ ದೋಣಿ, ಬಲೆಗಳನ್ನು ಕೊಡಬೇಕು. ಸಮೀಕ್ಷೆ ಬಳಿಕವಾದರೂ ಸಮುದಾಯಗಳಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಮರಿಜೋಸೆಫ್‌ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !