ಬುಧವಾರ, ಮಾರ್ಚ್ 29, 2023
32 °C
ಜಾನಪದ ಕುರಿತು 40ಕ್ಕೂ ಹೆಚ್ಚು ಕೃತಿ ರಚನೆ

ಹಾಸನ: ಜಾನಪದ ಸಾಹಿತ್ಯಕ್ಕೆ ಹಂಪನಹಳ್ಳಿ ತಿಮ್ಮೇಗೌಡರಿಂದ ಅನನ್ಯ ಕೊಡುಗೆ

ಜೆ.ಎಸ್.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಾಹಿತಿ, ಜಾನಪದ ವಿದ್ವಾಂಸ, ಸಂಶೋಧಕ, ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಹಂಪನಹಳ್ಳಿ ತಿಮ್ಮೇಗೌಡ ಅವರು ಜಾನಪದ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ನಾಲ್ಕು ದಶಕಗಳಿಂದ ಜಾನಪದ, ಸಾಹಿತ್ಯ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಅವರು, ಜಾನಪದ ಕುರಿತು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ. ಸುಮಾರು 200 ಲೇಖನಗಳು ಪ್ರಕಟವಾಗಿವೆ. ಕಳೆದ ವರ್ಷ ಜಾನಪದ ವಿಭಾಗದಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಹ ಬಂದಿದೆ.

2012ರಲ್ಲಿ ಬೆಳಗಾವಿ ಜಿಲ್ಲೆಯ ಹುಗರ್‌ ಬದರ್‌ನಲ್ಲಿ ನಡೆದಿದ್ದ ರಾಜ್ಯ ಮಟ್ಟದ ಮೂರನೇ ಜನಪದ ಕಲಾವಿದರ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಹತ್ತು ವರ್ಷಗಳಿಂದ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷರಾಗಿದ್ದಾರೆ. ಜಿಲ್ಲೆಯ ಜಾನಪದದ ಬಗ್ಗೆ ಅಧ್ಯಯನ ಮಾಡಿರುವ ಅವರು, ಜಾನಪದ ಕುರಿತು 500 ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಜನಪದ ಕಲಾವಿದರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರಮುಖ ಕೃತಿಗಳು: ಜನಪದ ಸಂಶೋಧನೆ ‘ಗುರುಮುಖ’, ‘ಹಿರಿಮೆಯ ಹಾಸನ’, ‘ಹಾಸನ ಸೀಮೆಯ ಒಕ್ಕಲಿಗರು’. ಜಾನಪದ ಮತ್ತು ವಿಮರ್ಶೆ; ‘ಮನನ’, ‘ಹಾಸನ ಜಿಲ್ಲೆಯ ಜನಪದ ಕಲಾವಿದರು’, ‘ಹೊನ್ನ ಹೊಲ’, ‘ಕದಿರು’, ‘ಜಾನಪದ ಸಮಾಚಾರ’, ‘ಜಾನಪರ ತಲೆಮಾರು-4’, ‘ವಜ್ರಮುಖಿ’, ‘ಜನಪದ ಅಡುಗೆ ಉದ್ಯಮೀಕರಣ’, ‘ಜನಪದ ಜೀವನಾವರ್ತನ ಗೀತೆಗಳು’, ‘ಹೊಯ್ಸಳ ನಾಡಿನ ಜನಪದ ಕಲೆಗಳು’, ‘ನೆಲದೊಡಲ ಜನಪ ಸಂಕಥನ’, ‘ಹಾಸನ ಜಿಲ್ಲೆಯ ಗ್ರಾಮಚರಿತ್ರೆ ಕೋಶ-2 ಸಂಪುಟಗಳು’ ಹಾಗೂ ಇತ್ಯಾದಿ.

ತಮ್ಮ ಬದುಕಿನ ಬಹುಭಾಗವನ್ನು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಜಾನಪದ ಸಾಹಿತ್ಯ ಸಂಗ್ರಹ, ಸಂಶೋಧನೆಗೆ ಶ್ರಮಿಸುತ್ತಿರುವ ಅವರು, ಇತ್ತೀಚೆಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಯೋಜನೆ ಅಡಿ ತಲಾ 750 ಪುಟದ ‘ಕರ್ನಾಟಕ ಗ್ರಾಮ ಚರಿತ್ರೆ ಕೋಶ ಹಾಸನ ಜಿಲ್ಲೆ’ ಎಂಬ ಎರಡು ಸಂಪುಟ ಹೊರ ತಂದಿದ್ದಾರೆ.

ಹಂಪನಹಳ್ಳಿ ತಿಮ್ಮೇಗೌಡ ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 35 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಾಸನ ತಾಲ್ಲೂಕಿನ ಹಂಪನಹಳ್ಳಿ ಗ್ರಾಮದಲ್ಲಿ 1957ರಲ್ಲಿ ಜನಿಸಿರುವ ಇವರು, ಮೈಸೂರು ವಿವಿ ಯಿಂದ ಎಂ.ಎ, ಪಿ.ಎಚ್‌ಡಿ. ಪಿ.ಜಿ.ಡಿ.ಎಲ್‌ ಪದವಿ ಪಡೆದಿದ್ದಾರೆ. ‘ಕರ್ನಾಟಕ ಜಾನಪದ ಅಧ್ಯಯನಕ್ಕೆ ಹಾಸನ ಜಿಲ್ಲೆಯ ಕೊಡುಗೆ’ ಎಂಬುದು ಇವರ ಪಿಎಚ್‌.ಡಿಯ ಮಹಾಪ್ರಬಂಧವಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನಪದ ಕಲಾವಿದರ ನೆರವಿಗೆ ನಿಂತು ಆಹಾರ ಪದಾರ್ಥಗಳ ಕಿಟ್‌
ಕೊಡಿಸಿದ್ದಾರೆ. ಅನೇಕ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು