ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದು ಶಾಲೆ ಕನ್ನಡ ಶಿಕ್ಷಕರ ವರ್ಗ ಬೇಡ

ಖಾಸಗಿ ಶಾಲೆ ತೆರೆಯಲು ಅನುಮತಿ ನೀಡದಿರಿ: ಸಿದ್ದರಾಮಯ್ಯ
Last Updated 17 ಜನವರಿ 2019, 13:47 IST
ಅಕ್ಷರ ಗಾತ್ರ

ಹಾಸನ: ರಾಜ್ಯದ ಉರ್ದು ಶಾಲೆಗಳಲ್ಲಿರುವ ಕನ್ನಡ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಬೇರೆ ಶಾಲೆಗೆ ವರ್ಗಾವಣೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದರು.

ಶಿಕ್ಷಕರನ್ನು ವರ್ಗ ಮಾಡುವುದರಿಂದ ಉರ್ದು ಶಾಲೆ ಮಕ್ಕಳು ಕನ್ನಡ ಕಲಿಕೆಯಿಂದ ವಂಚಿತರಾಗುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೂ ಪತ್ರ ಬರೆದು ಮುಂದುವರೆಸುವಂತೆ ಸೂಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ತೆರೆಯುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಹಿತಿಗಳು, ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ದೇಶದಲ್ಲಿ 22 ಭಾಷೆಗಳು ಇವೆ. ಇಂಗ್ಲಿಷ್‌ ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಲಿ. ಆದರೆ ಆಂಗ್ಲ ಮಾಧ್ಯಮ ಶಾಲೆ ತೆರೆದು ಕನ್ನಡ ಶಾಲೆ ಮುಚ್ಚುವ ಕೆಲಸ ಮಾಡಬಾರದು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತದೆಂಬ ಅರಿವು ಇರಬೇಕು. ಸರ್ಕಾರಿ ಶಾಲೆ ಸಮೀಪವೇ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಬಾರದು. ಸರ್ಕಾರಿ ಶಾಲಾ ಸಬಲೀಕರಣ ಕುರಿತು ನೀಡಿರುವ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ಬ್ಯಾಂಕ್‌ಗಳಲ್ಲಿ ಕನ್ನಡೇತರ ಅಧಿಕಾರಿಗಳು ಬಂದು ಅನಾನೂಕೂಲವಾಗಿದೆ ಎಂಬ ಆರೋಪ ಇದೆ. 2015 ನೇಮಕಾತಿ ನಿಯಮ ಬದಲಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಕಾನೂನು ತರಬೇಕು ಎಂದು ಕೇಂದ್ರ ಸಚಿವರ ಮೇಲೆ ಒತ್ತಡ ಹೇರುವಂತೆ ರಾಜ್ಯದ ಸಂಸದವರಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳಿಗೆ ಕನ್ನಡ ಕಲಿಯಲು ಆರು ತಿಂಗಳು ಅವಕಾಶ ನೀಡಲಾಗುತ್ತದೆ. ಕಲಿಯದಿದ್ದರೆ ಆರು ತಿಂಗಳೊಳಗೆ ವಾಪಸ್‌ ಕಳುಹಿಸುವ ಅವಕಾಶ ಇದೆ. ಇದನ್ನು ಲೀಡ್‌ ಬ್ಯಾಂಕ್‌ ಮುಖ್ಯಸ್ಥರು ನೋಡಿಕೊಳ್ಳಬೇಕು. ಕನ್ನಡದಲ್ಲಿ ವ್ಯವಹರಿಸದ ಬ್ಯಾಂಕ್‌ಗಳಲ್ಲಿ ತಮ್ಮ ಖಾತೆಯನ್ನು ರದ್ದುಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಆಡಳಿತದಲ್ಲಿ ಕನ್ನಡ ಅನುಷ್ಠಾನವಾಗಿದೆಯೇ ಎಂಬುದನ್ನು ಪರಿಶೀಲಿಸಲು ಕನ್ನಡ ಅನುಷ್ಟಾನ ಘಟಕ ರಚಿಸಲಾಗಿದೆ. ಆದರೆ ಇದು ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಲ್ಲಿ ಆಡಳಿತದಲ್ಲಿ ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿಗೆ ಅವರಿಗೆ 15 ದಿನ ಗಡುವು ನೀಡಲಾಗಿದೆ.ಜಿಲ್ಲೆಯ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಕನ್ನಡ ಬೋಧನೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಸಭೆಗೆ ಗೈರು ಹಾಜರಾಗಿರುವ ಪ್ರಾಂಶುಪಾಲರಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿಗೆ ಹೇಳಲಾಗಿದೆ. ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಳಿಸಿದ್ದಾರೆ ಎಂದರು.

ಬೆಂಗಳೂರು, ಮಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಕನ್ನಡ ಜಾಲ ತಾಣ ಬಳಕೆ ಮಾಡಲಾಗುತ್ತದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕನ್ನಡ ಬಳಕೆ ಮಾಡಲಾಗುತ್ತಿದೆ. ಅದೇ ರೀತಿ ವೆಬ್‌ಸೈಟ್‌ನಲ್ಲೂ ಕನ್ನಡ ಸಾರ ಒಳಗೊಂಡಿರುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದು ನುಡಿದರು. ಹಿಮ್ಸ್‌ ನಿರ್ದೇಶಕ ಡಾ.ರವಿಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT