ಗುರುವಾರ , ಆಗಸ್ಟ್ 11, 2022
21 °C
ಡಿಸಿ ಕಚೇರಿ ಎದುರು ವಿಶೇಷ ಶಿಕ್ಷಕರ ಧರಣಿ

ಗೌರವಧನ ಹೆಚ್ಚಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ವಿಶೇಷ ಶಿಕ್ಷಕರ ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ವಿಶೇಷ ಶಾಲೆಗಳಿಗೆ ಶಾಶ್ವತ ಅನುದಾನ ಕೊಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಿಬ್ಬಂದಿ ಸೇವೆ ಪರಿಗಣಿಸಬೇಕು, ಸಾಮಾನ್ಯ ಶಾಲೆಯ ಶಿಕ್ಷಕರಿಗೆ ನೀಡುವ ಸವಲತ್ತು ನೀಡಬೇಕೆಂದು ಆಗ್ರಹಿಸಿದರು.

ನಿರಂತರ ಹೋರಾಟದಿಂದ 2010-11ನೇ ಸಾಲಿನಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯದ ವಿಶೇಷ ಶಾಲೆಗಳಿಗೆ ಅನುದಾನ ನೀಡಲು ಆದೇಶ ಹೊರಡಿಸಿತು. ಆ ಆದೇಶದಂತೆ ಇಲಾಖೆ ಅಧಿಕಾರಿಗಳು ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ ಎಂಬ ಮತ್ತೊಂದು ನೀತಿ ಜಾರಿಗೆ ತಂದು ವಿಶೇಷ ಶಾಲೆಗಳಲ್ಲಿರುವ ಅಂಗವಿಕಲ ಮಕ್ಕಳ ಸಂಖ್ಯೆ ಆಧಾರದ ಮೇಲೆ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿಶೇಷ ಶಿಕ್ಷಕರಿಗೆ ₹6,500 ಹಾಗೂ ಸಿಬ್ಬಂದಿಗೆ ₹4 ರಿಂದ ₹5 ಸಾವಿರ ಗೌರವಧನ ದೊರೆಯುತ್ತಿತ್ತು. ಬಳಿಕ ಮುಖ್ಯ
ಮಂತ್ರಿಯಾದ ಸಿದ್ದರಾಮಯ್ಯ ಅವರು 2013-14ರ ಬಜೆಟ್‌ನಲ್ಲಿ ವಿಶೇಷ ಶಿಕ್ಷಕಕರ ಗೌರವಧನವನ್ನು ₹13,500,
ಸಿಬ್ಬಂದಿಗೆ ₹8 ರಿಂದ ₹9 ಸಾವಿರ ವರೆಗೆ ಏರಿಕೆ ಮಾಡಿದ್ದರು. ಆದರೆ, 2014ರಿಂದ ಈ ವರೆಗೂ ಗೌರವಧನ ಏರಿಕೆ ಮಾಡಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವಷ್ಟು ಕನಿಷ್ಟ ವೇತನ ದೊರಕದೇ ಶಿಕ್ಷಕರು ಹಾಗೂ ಸಿಬ್ಬಂದಿಗೆ ಜೀವನ ನಿರ್ವಹಣೆ
ದುಸ್ತರವಾಗಿದೆ. ಈ ಸಂಬಂಧ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿದಾಗ, ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಸಭೆ ಕರೆದಿಲ್ಲ ಎಂದರು.

25 ವರ್ಷ ಮೀರಿದ ಅಂಗವಿಕಲರಿಗೆ ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಯಿಂದ ಯಾವುದೇ ತರಬೇತಿಯಾಗಲಿ,
ಪುನರ್ವಸತಿ ಕಾರ್ಯಕ್ರಮವಾಗಲಿ ಇಲ್ಲ. 2016ರಲ್ಲಿ ಜಾರಿಗೆ ಬಂದಿರುವ ನೂತನ ಅಂಗವಿಕಲರ ಅಧಿನಿಯಮ ಕೇವಲ ಕಡತಕ್ಕೆ ಸೀಮಿತವಾಗಿದೆ ಸಂಘದ ಸಂಘಟನಾ ಕಾರ್ಯದರ್ಶಿ ಸ್ವಾಮಿ ಬೇಸರ ಬೇಸರ ವ್ಯಕ್ತಪಡಿಸಿದರು.

2020ರ ನವೆಂಬರ್‌ ಅಂತ್ಯದ ಒಳಗೆ ಗೌರವಧನವನ್ನು ಹೆಚ್ಚಿಸುವಂತೆ ಆಗ್ರಹಿಸಿ ಸಿ.ಎಂ, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲಾಖೆ ಅಥವಾ ಸರ್ಕಾರರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷ ಬಿ. ಉಮೇಶ್‌, ಕಾರ್ಯದರ್ಶಿ ಲೋಕೇಶ್‌, ಖಜಾಂಚಿ ವಿನೋದ್‌ ಪ್ರಸಾದ್‌, ಜಿಲ್ಲಾ ಸಂಚಾಲಕ ಈಶ್ವರಪ್ಪ ಹಕಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.