ಮಂಗಳವಾರ, ನವೆಂಬರ್ 24, 2020
22 °C
ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ: ಉಸ್ತುವಾರಿ ಸಚಿವ ಗೋಪಾಲಯ್ಯ ಮನವಿ

ಆಹ್ವಾನಿತ ಜನಪ್ರತಿನಿಧಿಗಳಿಗೆ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಣಗೊಂಡಿರುವ ಜಿಲ್ಲೆಯ ಜನಪ್ರತಿನಿಧಿಗಳು ನ.16 ರವರೆಗೆ ಯಾವತ್ತಾದರೂ ಒಮ್ಮೆ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಮಾಡಲು ಅವಕಾಶ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಗಣ್ಯರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹೊರ ಜಿಲ್ಲೆಯಿಂದ ಬರುವವರಿಗೆ ದರ್ಶನ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ಕೈಗೊಳ್ಳುವರು. ಮೊದಲೇ ತಿಳಿಸಿದಂತೆ ಮೊದಲ ದಿನ, ಕೊನೆ ದಿನ ಅವರು ದರ್ಶನ ಮಾಡಬಹುದು’ ಎಂದರು.

ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದರಿಂದ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿದೆ. ಹಬ್ಬ, ಸಾರ್ವಜನಿಕ
ಉತ್ಸವಗಳನ್ನು ಯಾವ ರೀತಿ ಆಚರಿಸಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಹಾಗಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಭಕ್ತರು ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ದೇವಿಯ ದರ್ಶನವನ್ನು ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ಗಳ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ದೇಗುಲದ ಮುಂಭಾಗ ಮತ್ತು ನಗರದ ಹಲವು ವೃತ್ತಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ, ದೇವಿಯ ಪೂಜಾ ಕೈಂಕರ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂದರು.

ಶಾಸಕ ಪ್ರೀತಂ ಗೌಡ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ನ.16ರೊಳಗೆ ಒಂದು ಬಾರಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಇದಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಜೆ.ಸಿ.ಮಾಧುಸ್ವಾಮಿ, ದೇವಿ ಆಶೀರ್ವಾದದಿಂದ ದೇಶ ಕೊರೊನಾ ಸೋಂಕಿನಿಂದ ಮುಕ್ತವಾಗಲಿ ಎಂದು ಸಂಕಲ್ಪ ಮಾಡಿದ್ದೇನೆ. ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲದಿರುವ ಬಗ್ಗೆ ನೋವಿದೆ. ಆದರೆ ಅದು ಅನಿವಾರ್ಯ. ಹಾಗಾಗಿ ಭಕ್ತರು ನೇರ ಪ್ರಸಾದ ಮೂಲಕವೇ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್,  ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.