ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಜಲಾಶಯ ಇದ್ದರೂ ಕುಡಿಯುವ ನೀರಿಗೆ ಬರ

ಬೇಲೂರು ತಾಲ್ಲೂಕಿನ ಬಯಲುಸೀಮೆ, ಮಲೆನಾಡು ಭಾಗದ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ
Last Updated 19 ಮೇ 2019, 10:38 IST
ಅಕ್ಷರ ಗಾತ್ರ

ಬೇಲೂರು: ಅರೆಮಲೆನಾಡು ಪ್ರದೇಶ ಹೊಂದಿರುವ ತಾಲ್ಲೂಕಿನಲ್ಲಿ ಎರಡು ಪ್ರಮುಖ ಜಲಾಶಯಗಳಿದ್ದರೂ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ.

ಸತತ ಬರಗಾಲಕ್ಕೆ ತುತ್ತಾಗಿರುವ ಬೇಲೂರು ತಾಲ್ಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ‘ಘಟ್ಟದಲ್ಲಿ ಉಪ್ಪಿಗೆ ಬಡತನ’ ಎಂಬ ಮಾತು ತಾಲ್ಲೂಕಿಗೆ ಅನ್ವಯಿಸುತ್ತದೆ.

ಯಗಚಿ ಮತ್ತು ವಾಟೇಹೊಳೆ ಜಲಾಶಯಗಳು ಇದ್ದರೂ ಜನರಿಗೆ ಸಮರ್ಪಕವಾಗಿ ನೀರು ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ. ವಾಟೇಹೊಳೆ ಜಲಾಶಯ ಮಲೆನಾಡು ಭಾಗದಲ್ಲಿದ್ದರೂ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರಿಲ್ಲ. ಯಗಚಿ ಜಲಾಶಯ ದಿಂದ ಹಳೇಬೀಡು–ಮಾದಿಹಳ್ಳಿ ಹೋಬಳಿ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ.

ಬಯಲುಸೀಮೆ ಪ್ರದೇಶಗಳಾದ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಪೊನ್ನಾಥಪುರ ಮತ್ತು ಕಟ್ಟೇಸೋಮನಹಳ್ಳಿ ಗ್ರಾಮ ಗಳಲ್ಲಿ ನೀರಿಗಾಗಿ ಜನರು ಪರದಾಡುತ್ತಿ ದ್ದಾರೆ. ತಾಲ್ಲೂಕು ಆಡಳಿತವು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಆದರೂ ಜನರ ಅಗತ್ಯಗೆ ತಕ್ಕಂತೆ ನೀರು ದೊರಕುತ್ತಿಲ್ಲ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ಜಲಮೂಲಗಳು ಬತ್ತಿ ಹೋಗಿವೆ.

ಶಿವನೇನಹಳ್ಳಿ, ದೊಂಬರಹಟ್ಟಿ, ಮಾರೇನಹಳ್ಳಿ, ಇಬ್ಬೀಡು ಕಾಲೊನಿ, ಶಿವಪುರ ಕಾವಲು, ದೊಡ್ಡ ಬ್ಯಾಡಿಗೆರೆ, ವೀರದೇವನಹಳ್ಳಿ, ಆಂದಲೆ ಮತ್ತು ಬೈರಗೊಂಡನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಇದೆ. ಈ ಗ್ರಾಮಗಳ ಜನರಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷದ ಹಣವನ್ನೇ ಇನ್ನೂ ಪಾವತಿ ಮಾಡದ ಕಾರಣ ಕೆಲ ಖಾಸಗಿ ಕೊಳವೆಬಾವಿ ಮಾಲೀಕರು ನೀರನ್ನು ಕೊಡುತ್ತಿಲ್ಲ. ಕಸಬಾ ಹೋಬಳಿಯ ಹನಿಕೆ ಗ್ರಾಮದಲ್ಲೂ ನೀರಿನ ಸಮಸ್ಯೆ ತಲೆದೂರಿದ್ದು, ಜನರು 1 ಕಿ.ಮೀ. ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಇದೆ.

ಹನಿಕೆ ಗ್ರಾಮದ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸೇದುವ ಬಾವಿಯಿಂದ ನೀರು ತರುವ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಹನಿಕೆ ಸಂತೆಗೆ ದನಗಳ ವ್ಯಾಪಾರಕ್ಕೆ ಬರುವವರು ಹಣ ಕೊಟ್ಟು ಜಾನುವಾರುಗಳಿಗೆ ನೀರು ಖರೀದಿಸುತ್ತಿದ್ದಾರೆ ಎಂದು ಗ್ರಾಮದ ರಘು ಹೇಳಿದರು.

ಈ ಬಾರಿಯ ಬಿಸಿಲಿನ ತಾಪ ಬಯಲುಸೀಮೆ ಪ್ರದೇಶವಲ್ಲದೆ, ಮಲೆನಾಡು ಪ್ರದೇಶಗಳಿಗೂ ತಟ್ಟಿದೆ. ಮಲೆನಾಡು ಭಾಗಗಳಾದ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ವ್ಯಾಪ್ತಿಯ ಕೆರಲೂರು, ಇಂಟಿತೊಳಲು, ಬಿಕ್ಕೋಡು, ಮಲಸಾವರ, ದಬ್ಬೆ ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮ ಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ನೀರು ಪೂರೈಕೆಗೆ ಕ್ರಮ: ಜನ ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಾನುವಾರು ಗಳಿಗೆ ಕುಡಿಯುವ ನೀರು ಒದಗಿಸಲು ಪ್ರತಿ ಹಳ್ಳಿಯಲ್ಲಿ ತೊಟ್ಟಿಗಳನ್ನು ನಿರ್ಮಿಸ ಲಾಗಿದ್ದು, ಸಂಜೆ ವೇಳೆ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ತಾಲ್ಲೂಕು ಇಒ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಉದ್ಧಟತನದ ವರ್ತನೆ: ಆರೋಪ

ಬೇಲೂರು ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿ ತಾಂಡವವಾಡುತ್ತಿದೆ. ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಜಾನುವಾರುಗಳು ಮೇವಿಲ್ಲದೆ ತೊಂದರೆಗೀಡಾಗಿವೆ. ತಾಲ್ಲೂಕಿನಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಕಳೆದ ವರ್ಷ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದ್ದ ಮಾಲೀಕರಿಗೆ ₹25 ಲಕ್ಷ ಇನ್ನೂ ಪಾವತಿ ಮಾಡಿಲ್ಲ. ತಾಲ್ಲೂಕಿನಲ್ಲಿ ಏನೇ ಸಮಸ್ಯೆಯಾದರೂ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಎಚ್ಚರಿಸಿದರು.

ಮೇವು ಬ್ಯಾಂಕ್‌ ಸ್ಥಾಪನೆ ಇಲ್ಲ

ಬರಗಾಲ ಪರಿಸ್ಥಿತಿ ನಿರ್ವಹಣೆಗೆ ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ. ಕುಡಿಯುವ ನೀರು ಪೂರೈಕೆ ಮಾಡಲು ಹಣದ ಕೊರತೆಯಿಲ್ಲ. ಎರಡು ವಾರಗಳವರೆಗೆ ಜಾನುವಾರುಗಳ ಮೇವಿಗೆ ಸಮಸ್ಯೆಯಿಲ್ಲ ಎಂದುಪಶು ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಸದ್ಯಕ್ಕೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡುವುದಿಲ್ಲ. 8 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ಮತ್ತು 2 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದವರಿಗೆ ಹಣ ನೀಡುವ ಸಂಬಂಧ ಲೆಕ್ಕಪರಿಶೋಧನೆಗೆ ಆಕ್ಷೇಪಣೆ ಬಂದಿದ್ದರಿಂದ ಹಣ ಪಾವತಿಸಿಲ್ಲ. ಅದು ಸರಿಯಾದ ಬಳಿಕ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಜಿ. ಮೇಘನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT