ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಕ, ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಿ

ವನ್ಯಜೀವಿ– ಮಾನವ ಸಂಘರ್ಷ ತಡೆಗೆ ಇಚ್ಛಾಶಕ್ತಿ ಅಗತ್ಯ: ಕೃಷ್ಣಪ್ರಸಾದ್
Last Updated 1 ಮಾರ್ಚ್ 2023, 5:18 IST
ಅಕ್ಷರ ಗಾತ್ರ

ಸಕಲೇಶಪುರ: ಮನುಷ್ಯ ಮತ್ತು ಅರಣ್ಯವನ್ನು ಬೇರ್ಪಡಿಸಬೇಕು. ಕಾಡುಪ್ರಾಣಿಗಳು, ಜನವಸತಿ ಪ್ರದೇಶ ಗುರುತಿಸಬೇಕು. ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತರಿ ಯೋಜನೆಯಲ್ಲಿ ಕಂದಕ, 12 ಅಡಿ ಎತ್ತರದ ಬೇಲಿ ನಿರ್ಮಿಸುವಂತಹ ಪ್ರಮುಖ ಯೋಜನೆ ರಾಜಕೀಯ ಇಚ್ಛಾಶಕ್ತಿಯಿಂದ ಕಾರ್ಯಗತಗೊಳಿಸಬೇಕು ಎಂದು ಕಾಫಿ ಫಾರ್ಮರ್ಸ್ ಫೆಡರೇಷನ್ ಆಫ್ ಇಂಡಿಯಾ (ಸಿಎಫ್‌ಎಫ್‌ಐ) ಪ್ರಧಾನ ಕಾರ್ಯದರ್ಶಿ ನವದೆಹಲಿಯ ಪಿ. ಕೃಷ್ಣಪ್ರಸಾದ್ ಹೇಳಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ನಡೆದ ಆನೆ ಮತ್ತು ಮಾನವ ಸಂಘರ್ಷ, ಭೂಮಿ ಪ್ರಶ್ನೆ (ಬಗರ್ ಹುಕುಂ ಸಾಗುವಳಿ), ಸಣ್ಣ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಕಾಫಿ ಬೆಳೆಯುವ ರೈತರು ಮತ್ತು ಕಾಫಿ ಬೆಳೆಗಾರರ ನಡುವೆ ಕೆಲಸ ಮಾಡುತ್ತಿರುವ ರೈತ ಮುಖಂಡರು, ಕಾಫಿ ರೈತರ ಸಮಾವೇಶದ ಉದ್ಘಾಟಿಸಿ ಅವರು ಮಾತನಾಡಿದರು.

ಕಾಡು, ಜನವಸತಿ ಪ್ರದೇಶ ಬೇರ್ಪಡಿಸದಿದ್ದರೆ, ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷದ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದರು.

ಕಾಡು ಪ್ರಾಣಿಗಳು ಮಾನವ ವಸತಿ ಪ್ರದೇಶಕ್ಕೆ ಯಾವ ಭಾಗದಿಂದ ಪ್ರವೇಶಿಸುತ್ತವೆ ಎಂಬುದನ್ನು ಗುರುತಿಸುವ ಕೆಲಸ ಗ್ರಾಮ ಪಂಚಾಯಿತಿಗೆ ವಹಿಸಬೇಕು. ಈ ಯೋಜನೆಗಳ ವೆಚ್ಚ ಒಂದು ಕಿ.ಮೀ.ಗೆ ಸುಮಾರು ₹ 45 ಲಕ್ಷ ತಗಲುತ್ತದೆ. ಉದ್ಯೋಗ ಖಾತರಿ ಯೋಜನೆ ಮೂಲಕ ಕಾರ್ಯಗತಗೊಳಿಸಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಭಾರತದ ಕಾಫಿ ಉತ್ಪಾದನೆಯಲ್ಲಿ ಅತಿಹೆಚ್ಚು ಕೊಡುಗೆಯನ್ನು ನೀಡುತ್ತಿರುವುದು ಕರ್ನಾಟಕ. ಅದರಲ್ಲೂ ಶೇ 90 ರಷ್ಟು ಸಣ್ಣ ರೈತರು ಕಾಫಿ ಉತ್ಪಾದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.

ಸಿಐಟಿಯು ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ ಮಾತನಾಡಿ, ದೊಡ್ಡ ಪ್ರಮಾಣದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ಸಮಸ್ಯೆಗಳು ಚರ್ಚೆಯಾಗದೇ, ಬೆಳೆಗಾರರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿ. ಅದರಲ್ಲೂ ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಮತ್ತು ಮಾನವ ಸಂಘರ್ಷಕ್ಕೆ 70 ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ರಂಗಕರ್ಮಿ ಪ್ರಸಾದ್‌ ರಕ್ಷದಿ ಮಾತನಾಡಿ, ಬೆಳೆದ ಬೆಳೆಗೆ ಸರಿಯಾಗಿ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಮಾಡಿದ ಸಾಲವನ್ನು ತೀರಿಸಲಾಗದೆ ರೈತರು ಭೂಮಿಗಳನ್ನು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳ ಪರಿಣಾಮವಾಗಿ ಕೃಷಿಯು ಬಿಕ್ಕಟ್ಟಿಗೆ ಸಿಲುಕಿದೆ ಎಂದರು.
ದೇಶದ ಕಾಫಿ ಬೆಳೆಗಾರರ ಸಮಸ್ಯೆಗಳು, ಅದರ ಪರಿಹಾರಕ್ಕಾಗಿ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಚರ್ಚಿಸಲಾಯಿತು.

ಸಿಎಫ್‌ಎಫ್‌ಐ ಅಧ್ಯಕ್ಷ ಪಿ.ಕೆ. ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ಲಾಂಟೇಷನ್‌ ವರ್ಕರ್ ಫೆಡರೇಷನ್ ಅಧ್ಯಕ್ಷ ವಿ.ಸುಕುಮಾರ್, ಕೊಡಗು ಜಿಲ್ಲೆಯ ವಿಷಯ ತಜ್ಞ ಡಾ.ದುರ್ಗಾ ಪ್ರಸಾದ್, ದಲಿತ ಮುಖಂಡ ಎಸ್.ಎನ್. ಮಲ್ಲಪ್ಪ, ಪತ್ರಕರ್ತ ಮಲ್ನಾಡ್ ಮೆಹಬೂಬ್, ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಯದರ್ಶಿ ಗಿಡ್ಡೇಗೌಡ, ಕೆ.ಪಿ.ಲಕ್ಷ್ಮಣಗೌಡ, ಡಿ.ಎಸ್‌.ಕಸ್ತೂರಿಗೌಡ, ಸಿ.ಎಸ್.ಮಂಜುನಾಥ್, ಸೋಮೇಶ್‌, ರುದ್ರೇಶ್‌ ಗೌಡ, ವೀರೇಶ್, ಕೆ.ಎಲ್‌.ಶಂಕರ, ಸೌಮ್ಯಾ, ಸುಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT