ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ರಸ್ತೆಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ

35 ಕ್ಕೂ ಹೆಚ್ಚು ಕಾಡಾನೆ ಕಂಡು ಗಾಬರಿಯಾದ ವಾಹನ ಸವಾರರು
Published 13 ಡಿಸೆಂಬರ್ 2023, 13:15 IST
Last Updated 13 ಡಿಸೆಂಬರ್ 2023, 13:15 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬುಧವಾರ ಬೆಳಿಗ್ಗೆ ಕಾಡಾನೆಗಳ ಹಿಂಡು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ದಾಟಿ ಹೋಗಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೇರೆಯಾಗಿವೆ.

ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದ ಬಳಿ ಮೂವತ್ತೈದಕ್ಕೂ ಹೆಚ್ಚು ಕಾಡಾನೆಗಳು ರಸ್ತೆಯಲ್ಲಿ ನಿಧಾನವಾಗಿ ಹಾದು ಹೋಗಿವೆ. ಕಾಡಾನೆಗಳ ಹಿಂಡನ್ನು ಕಂಡ ವಾಹನ ಸವಾರರು ಕೆಲಕಾಲ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿಕೊಂಡಿದ್ದು, ಕಾಡಾನೆಗಳ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಈ ಹಿಂಡಿನಲ್ಲಿ ಮರಿಗಳೇ ಹೆಚ್ಚಾಗಿವೆ. ಮತ್ತೊಂದೆಡೆ ಕಾಫಿ ತೋಟ ದಾಟಲಾರದೇ ಕಾಡಾನೆಗಳು ಪರದಾಡಿವೆ. ಸೌರ ಬೇಲಿ ಹಾಕಿದ್ದರಿಂದ ಕಾಫಿ ತೋಟ ದಾಟಿ ಬೇರೆಡೆಗೆ ಹೋಗಲಾಗದೇ ಬೇಲಿ ಬಳಿ ಬಂದು ನಿಂತಿದ್ದವು.

ಸಕಲೇಶಪುರ ತಾಲ್ಲೂಕಿನ ಮಠಸಾಗರ ದೀಣೆ ಬಳಿ ಎರಡು ದಿನದ ಮರಿಯೊಂದಿಗೆ ತಾಯಿ ಆನೆ ಹಾಗೂ ಇತರೆ ಆನೆಗಳು ಪರದಾಡಿದ್ದು, ರಾತ್ರಿ ವೇಳೆ ಬೀಟ್ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಾನೆಗಳು ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ಜೀಪ್ ಬರುತ್ತಿದ್ದಂತೆ ತಾಯಿ ಆನೆ ಘೀಳಿಟ್ಟಿತ್ತು.

ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಸಮೀಪ ಬೆಳಿಗ್ಗೆ ಕಾಫಿ ತೋಟದಲ್ಲಿ ಭೀಮ ಕಾಣಿಸಿಕೊಂಡಿದ್ದು, ಸ್ಥಳೀಯರು ಕಾಡಾನೆಯ ವಿಡಿಯೊ ಮಾಡುತ್ತಾ ನಿಂತಿದ್ದಾರೆ. ಸಕಲೇಶಪುರ ತಾಲ್ಲೂಕಿನ, ಯಸಳೂರು ಭಾಗದಲ್ಲೂ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಆನೆ ಕಾರ್ಯಪಡೆಗೆ ಶಿವನಹಳ್ಳಿ ಕೂಡಿಗೆ ಬಳಿ ಕಾಡಾನೆಗಳು ಕಂಡುಬಂದಿವೆ.

ಸಾರ್ವಜನಿಕರು ಹಾಗೂ ರೈತರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಆನೆ ಕಾರ್ಯಪಡೆಯ ಸಿಬ್ಬಂದಿ ವಾಹನದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟಗಳಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಉಪಟಳಕ್ಕೆ ಮಲೆನಾಡು ಭಾಗದ ಜನ ಹೈರಾಣಾರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕೂದಲೆಳೆ ಅಂತರದಲ್ಲಿ ಪಾರಾದ ರೈತ

ಹೆತ್ತೂರು: ಯಸಳೂರು ಹೋಬಳಿ ಮತ್ತೂರು ಬಳಿ ಕಾಡಾನೆಯೊಂದು ಮಂಗಳವಾರ ಸಂಜೆ 6.35 ಸುಮಾರಿಗೆ ರುದ್ರೇಗೌಡ ಎಂಬುವವರ ಮೇಲೆ ದಾಳಿ ಮಾಡಿದೆ. ರುದ್ರೇಗೌಡರು ಸಂಜೆ ಹಾಲು ತೆಗೆದುಕೊಂಡು ಚಂಗಡಹಳ್ಳಿ ಡೇರಿಗೆ ಹೋಗುತ್ತಿರುವ ಸಂದರ್ಭದಲ್ಲಿ ಎದುರಾದ ಆನೆ ಸ್ಕೂಟರ್‌ ಮೇಲೆ ದಾಳಿ ಮಾಡಿದೆ. ಅವರು ಸ್ಕೂಟರ್‌ ಬಿಟ್ಟು ಓಡುವ ಸಂದರ್ಭದಲ್ಲಿ ಆನೆ ಕೂಡಾ ಕೆಲ ದೂರ ಬೆನ್ನಟ್ಟಿದೆ. ಇದರಿಂದ ರುದ್ರೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT