ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಕನಿಷ್ಠ ದರ ರೂ. 20: ಎಸ್‌ಪಿ

Last Updated 7 ಸೆಪ್ಟೆಂಬರ್ 2013, 8:10 IST
ಅಕ್ಷರ ಗಾತ್ರ

ಹಾಸನ: ನೆರೆಯ ಜಿಲ್ಲೆಗಳಾದ ಉಡುಪಿ ಹಾಗೂ ಮಂಗಳೂರಿನ ಮಾದರಿಯಲ್ಲಿ ಹಾಸನದಲ್ಲೂ ಆಟೋ ಕನಿಷ್ಠ ದರವನ್ನು ಪರಿಷ್ಕರಿಸಿ 20 ರೂಪಾಯಿ ನಿಗದಿ ಮಾಡಲಾಗಿದೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದರ ಪರಿಷ್ಕರಣೆ ಜತೆಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದೂ ಸೂಚಿಸಲಾಗಿದೆ. ಇದಕ್ಕೆ ಆಟೋ ಚಾಲಕರ ಸಂಘದವರೂ ಒಪ್ಪಿಕೊಂಡಿದ್ದಾರೆ.

ಇದರ ಜತೆಯಲ್ಲೇ ಹೊಸ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರೋಟರಿ ಸಂಸ್ಥೆಯ ನೆರವಿನೊಂದಿಗೆ ಪ್ರಿ ಪೇಯ್ಡ ಆಟೋ ವ್ಯವಸ್ಥೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೀಟರ್ ಕಡ್ಡಾಯ
ಆಟೋಗಳಿಗೆ ಮೀಟರ್ ಕಡ್ಡಾಯ ಮಾಡುವ ವಚಾರ ಹಿಂದೆ ಹಲವು ಬಾರಿ ಚರ್ಚೆ ಯಾಗಿದ್ದರೂ ಅದು ಜಾರಿಗೆ ಬಂದಿಲ್ಲ. ಈ ಬಾರಿಯೂ ಅದೇ ಸ್ಥಿತಿ ಬರಬಾರದು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಇದರ ಜಾರಿಗೆ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ಸಬೂಬು ಹೇಳುತ್ತ ತಿಂಗಳಿಗೊಮ್ಮೆ ತಪಾಸಣೆ ನಡಸಿದರೆ ಆಗುವುದಿಲ್ಲ. ಪ್ರತಿ ವಾರ ತಪಾಸಣೆ ಮಾಡಬೇಕು. ಮೀಟರ್ ಅಳವಡಿಸದ ಆಟೊಗಳ ಪರ್ಮಿಟನ್ನೇ ರದ್ದು ಮಾಡಬೇಕು ಮಾಡಬೇಕು ಎಂದರು.

ಆಟೋ ಕನಿಷ್ಠ ಬಾಡಿಗೆಯನ್ನು 25ರೂಪಾಯಿ ನಿಗದಿ ಮಾಡಬೇಕು ಎಂದು ಆಟೋ ಚಾಲಕರ ಸಂಘದವರು ಒತ್ತಾಯಿಸಿದರು. ಆದರೆ ನಮ್ಮ ನೆರೆಯ ಜಿಲ್ಲೆಗಳಾದ ಉಡುಪಿ ಹಾಗೂ ಮಂಗಳೂರಿನಲ್ಲಿ 20ರೂಪಾಯಿ ಕನಿಷ್ಠ ಬಾಡಿಗೆ ಇದೆ. ಇಲ್ಲಿ ಅದಕ್ಕಿಂತ ಬೇರೆಯಾದ ವಾತಾವರಣವೇನೂ ಇಲ್ಲ. ಆದ್ದರಿಂದ ಇಲ್ಲೂ ಅದೇ ದರ ನಿಗದಿ ಮಾಡಬೇಕು ಎಂದರು. ಮೊದಲ ಒಂದೂ ವರೆ ಕಿ.ಮೀ.ಗೆ 20 ರೂಪಾಯಿ ಹಾಗೂ ನಂತರದ ಪ್ರತಿ ಕಿ.ಮೀ.ಗೆ 10ರೂಪಾಯಿ ಬಾಡಿಗೆ ನಿಗದಿ ಮಾಡಲಾಯಿತು.

ಏಕಮುಖ ಸಂಚಾರ ತೆರವು
ಆರ್‌ಸಿ ರಸ್ತೆಯಲ್ಲಿ ಚರ್ಚ್ ಬಳಿಯಿಂದ ಬಿ.ಎಂ. ರಸ್ತೆ ವರೆಗೆ ಪ್ರಸಕ್ತ ಏಕಮುಖ ಸಂಚಾರವಿದ್ದು, ಈ ತಿಂಗಳ ಅಂತ್ಯದವರೆಗೆ ಪ್ರಾಯೋಗಿಕವಾಗಿ ಇಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು.

ಗಂಧದ ಕೋಟಿಯಲ್ಲಿ ಕೆಲವು ನ್ಯಾಯಾಲಯಗಳು ಆರಂಭವಾಗಿರುವುದರಿಂದ ಅಲ್ಲಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ವಕೀಲರ ಸಂಘದವರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಈ ಪ್ರಯೋಗ ಮಾಡಬಹುದೇ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಪ್ರಾಯೋಗಿಕವಾಗಿ ಈ ಮಾಸಾಂತ್ಯದವರೆಗೆ ಅದನ್ನು ಜಾರಿ ಮಾಡಿ ಸಮಸ್ಯೆ ಉಂಟಾದರೆ ಮುಂದಿನ ತಿಂಗಳಿಂದ ಮತ್ತೆ ಏಕಮುಖ ಸಂಚಾರ ಮಾಡಲು ತೀರ್ಮಾನಿಸಲಾಯಿತು.

ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಲಾರಿಗಳು ನಗರದೊಳಗೆ ಪ್ರವೇಶಿಸದಂತೆ ತಡೆಯಲು ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆನಡೆದರೂ ಯಾವುದೇ ತೀರ್ಮಾನವಾಗಿಲ್ಲ. ಮುಂದಿನ ಸಭೆಯೊಳಗೆ ಸರ್ವ ಸಮ್ಮತ ಒಂದು ವ್ಯವಸ್ಥೆ ರೂಪಿಸಲು ತೀರ್ಮಾನಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ಹೆಚ್ಚುವರಿ ಪೊಲೀಸ್ ಅಧಿಕಾರಿ ರಶ್ಮಿ, ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ರಾಮಚಂದ್ರ ವೃತ್ತ ನಿರೀಕ್ಷಕ ಸಂಜೀವೇ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಡಿ.ಅಲ್ಮೇಡ್,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಮೂರ್ತಿ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಲಾರಿ ಮಲೀಕರ ಸಂಘದ ಅಧ್ಯಕ್ಷ ಅಣ್ಣಾಜಿ, ಆಟೋ ಚಾಲಕರ ಮತ್ತು ಮಲೀಕರ ಸಂಘದ ಅಧ್ಯಕ್ಷರು, ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘದ ಅಧ್ಯಕ್ಷರು ಇದ್ದರು.
 

ಅನುಮತಿ ಇಲ್ಲದೇ ಬಸ್ ಮಾರ್ಗ ಬದಲಿಲ್ಲ
ಜಿಲ್ಲಾಧಿಕಾರಿಗೆ ಮಾಹಿತಿ ನೀಡದೆ ಯಾವುದೇ ಬಸ್ ರೂಟನ್ನು ಬದಲಿಸುವ ಅಧಿಕಾರ ನಿಮಗಿಲ್ಲ. ಬದಲಾವಣೆ ಮಾಡಿರುವ ಮಾರ್ಗಗಳನ್ನು ಕೂಡಲೇ ಸರಿಪಡಿಸಿ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದುದ್ದ ರಸ್ತೆಯಲ್ಲಿ ಹಾಸನಕ್ಕೆ ಬರುತ್ತಿದ್ದ ಎಲ್ಲ ಬಸ್ಸುಗಳ ಮಾರ್ಗ ಬದಲಿಸಿರುವ ಬಗ್ಗೆ ಕಚೇರಿ ಮುಂದೆ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ ಅವರು ಈ ಸೂಚನೆ ನೀಡಿದರು.

ಅನಿವಾರ್ಯ ಪ್ರಸಂಗದಲ್ಲಿ ಒಂದೆರಡು ಮಾರ್ಗಗಳನ್ನು ಬದಲಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬಹುದು. ಆದರೆ ಎಲ್ಲ ಮಾರ್ಗ ಬದಲಿಸುವಂತಿಲ್ಲ. ಮೊದಲು ಸಮಸ್ಯೆಯನ್ನು ಬಗೆಹರಿಸಿ. ಇನ್ನುಮುಂದೆ ಯಾವುದೇ ಬದಲಾವಣೆ ಮಾಡುವುದಕ್ಕೂ ಮೊದಲು ನನ್ನ ಗಮನಕ್ಕೆ ತನ್ನಿ' ಎಂದು ಸೂಚನೆ ನೀಡಿದರು.

ಏಕಮುಖ ಸಂಚಾರ
ನಗರದ ಹೊಸಲೈನ್ ರಸ್ತೆ, ವಲ್ಲಬಾಯಿ ರಸ್ತೆ, ಆಜಾದ್ ರಸ್ತೆ ಮತ್ತು ನೆಹರು ರಸ್ತೆಗಳು ಏಕಮುಖ ಸಂಚಾರ ರಸ್ತೆಗಳಾಗಿದ್ದರೂ ಅದು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ.

ಸಂಚಾರ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ಭಾನುವಾರ (ಸೆ.8)ದಿಂದ ಈ ರಸ್ತೆಗಳಲ್ಲಿ ಕಟ್ಟುನಿಟ್ಟಾಗಿ ಏಕಮುಖ ಸಂಚಾರ ಜಾರಿಗೊಳಿಸಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದನ್ನು ಉಲ್ಲಂಘಿ ಸಿದವರಿಗೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT