ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅಂಗನವಾಡಿ ಮಕ್ಕಳಿಗೆ ಜೀವನಾಡಿ

ಶೈಕ್ಷಣಿಕ ಅಂಗಳ
Last Updated 12 ಸೆಪ್ಟೆಂಬರ್ 2015, 5:14 IST
ಅಕ್ಷರ ಗಾತ್ರ

ಹೊಳೆನರಸೀಪುರ: ಅಂಗನವಾಡಿ ಕೇಂದ್ರಗಳ ಕಾರ್ಯವೈಖರಿ ಬಗ್ಗೆ ಕೆಲವು ಕಡೆ ಸಾಕಷ್ಟು ದೂರುಗಳಿವೆ. ಆದರೆ ಕೆಲವು ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಜೀವನಾಡಿಯೂ ಆಗಿವೆ. ಬೆಳಿಗ್ಗೆ ಆಗುತ್ತಿದಂತೆ ಏಳುವ ಮಕ್ಕಳು ಅಪ್ಪ ಅಮ್ಮನನ್ನು ಪೀಡಿಸಿ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ ಎಂದರೆ, ಆ ಅಂಗನವಾಡಿ ಕೇಂದ್ರದ ಬಗ್ಗೆ ಮಕ್ಕಳಿಗೆ ಇರುವ ಪ್ರೀತಿ ಎಷ್ಟೆಂಬುದು ತಿಳಿಯುತ್ತದೆ.

ತಾಲ್ಲೂಕಿನ ಕಡುವಿನಹೊಸಹಳ್ಳಿಯ ‘ಎ’ ಅಂಗನವಾಡಿ ಕೇಂದ್ರ ಈ ಸಾಲಿಗೆ ಸೇರಿದೆ. ಈ ಕೇಂದ್ರ 1984ರಲ್ಲಿ ಪ್ರಾರಂಭವಾಗಿದ್ದು, ಎಚ್.ಎನ್. ಮಂಜುಳಾ ಇಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ವಿಶೇಷ ಆಸಕ್ತಿಯಿಂದ ಈ ಕೇಂದ್ರವನ್ನು ಮಕ್ಕಳ ಶ್ರದ್ದಾಭಕ್ತಿಯ, ಗುರುಕುಲದಂತೆ ಮಾಡಿದ್ದಾರೆ. ಈ ಗುರುಕುಲದಲ್ಲಿ ಈಕೆ ತಾಯಿಯ ಹಾಗೆ ಮಕ್ಕಳನ್ನು ಸಲಹುತ್ತಾ, ವೈದ್ಯರಂತೆ ಆರೋಗ್ಯದ ಬಗ್ಗೆ ಗಮನಿಸುತ್ತಾ, ಶಿಕ್ಷಕಿಯಂತೆ ಕಲಿಸುತ್ತಾ, ಗೆಳೆತಿಯಂತೆ ಮಕ್ಕಳ ಜೊತೆ ಆಟವಾಡುತ್ತಾ ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಸಹಕಾರ ನೀಡುತ್ತಾ ಮಕ್ಕಳ, ಪೋಷಕರ, ಗ್ರಾಮಸ್ಥರ ನೆಚ್ಚಿನ ಮೇಡಂ ಆಗಿದ್ದಾರೆ.

ಮಕ್ಕಳಿಗೆ ಗಿಡ, ಮರ, ಬಳ್ಳಿ, ಬಣ್ಣ, ನೀರು, ಪ್ರಾಣಿ, ಪಕ್ಷಿ, ಬಸ್ಸು, ರೈಲು, ನೀತಿ ಕಥೆ, ಆಟ, ಹಾಡು, ಅಭಿನಯ ಗೀತೆ, ಅಭಿನಯ ಕಲೆ ಹೀಗೆ ಎಲ್ಲ ವಿಧದಲ್ಲಿ ಕಲಿಸುತ್ತಾ ಇರುವುದರಿಂದ ಇದು ಮಾದರಿ ಅಂಗನವಾಡಿ ಕೇಂದ್ರ ಎನಿಸಿದೆ.

ಮಕ್ಕಳು ಆಸಕ್ತಿಯಿಂದ ನೋಡುವ, ಆಡುವ ಆಟಿಕೆಗಳನ್ನು ಈ ಕೇಂದ್ರದಲ್ಲಿ ತಂದಿಟ್ಟು ಮಕ್ಕಳು ನಲಿಯುತ್ತಾ ಕಲಿಯುವಂತೆ ಮಾಡಿದ್ದಾರೆ. ಮಕ್ಕಳಿಗೆ  ಆಟಿಕೆಗಳನ್ನು ತೋರಿಸುತ್ತಾ ಅವರ ಆಸಕ್ತಿಯನ್ನು ನಿರಂತರವಾಗಿಸಿದ್ದಾರೆ. ಈ ಕೇಂದ್ರದಲ್ಲಿ ಓದಿದ ಅನೇಕ ಮಕ್ಕಳು ಇಂದು ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ, ವಕೀಲರಾಗಿ ದೊಡ್ಡ, ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ ಎನ್ನುವುದು ಈ ಕೇಂದ್ರದ ಹೆಗ್ಗಳಿಕೆ.

ಕೇಂದ್ರದಲ್ಲಿ  ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಹಾಕಿಸುತ್ತಾ, ಮೇಲಿಂದ ಮೇಲೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸುತ್ತಾ ಪೌಷ್ಟಿಕ ಆಹಾರ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು ನೀಡುತ್ತಾ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ಪ್ರೋತ್ಸಾಹ ನೀಡುತ್ತಾ ಮಹಿಳೆಯರೆಲ್ಲರ ಮಾರ್ಗದರ್ಶಿಯಾಗಿದ್ದಾರೆ. ಅಂಗನವಾಡಿ ಪರಿಸರವನ್ನೂ ಉತ್ತಮವಾಗಿರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT