ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹದಲ್ಲೇ ಗುಡಿ ಕೈಗಾರಿಕೆ!

Last Updated 26 ಆಗಸ್ಟ್ 2013, 6:10 IST
ಅಕ್ಷರ ಗಾತ್ರ

ಹಾಸನ: ಗಾಂಜಾ ಹೊಗೆ, ಮದ್ಯದ ವಾಸನೆ ತುಂಬಿರುತ್ತಿದ್ದ ಹಾಸನದ ಉಪ ಕಾರಾಗೃಹದ ಆವರಣ ಕಳೆದ ಕೆಲವು ತಿಂಗಳಿಂದ ಘಮ್ಮನೆ ಸುವಾಸನೆ ಬೀರುತ್ತಿದೆ. ಕಾರಾಗೃಹದೊಳಗೆ ಸದ್ದಿಲ್ಲದೆ ಸಣ್ಣ ಗುಡಿ ಕೈಗಾರಿಕೆ ಆರಂಭವಾಗಿದ್ದೇ ಇದಕ್ಕೆ ಕಾರಣ.

ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಹಾಸನದ ಉಪ ಕಾರಾಗೃಹ ತುಂಬಿ ತುಳುಕುತ್ತಿದ್ದು, ಇದನ್ನು ಸ್ಥಳಾಂತರಿಸುವ ಪ್ರಯತ್ನ ಹಲವು ವರ್ಷಗಳಿಂದ ಆಗುತ್ತಿದ್ದರೂ ಜಾಗದ ಅಲಭ್ಯತೆಯಿಂದ ಅದು ಸಾಧ್ಯವಾಗಲಿಲ್ಲ. ಇರುವ ಜೈಲಿನ ಸುತ್ತ ಈಗ ಬಡಾವಣೆಗಳು ಬೆಳೆದುಕೊಂಡಿವೆ.

ಹಿಂಭಾಗದಲ್ಲಿ ಕೊಳಚೆ ಪ್ರದೇಶವೂ ಇದೆ. ಇಲ್ಲಿಂದ ಕೈದಿಗಳಿಗೆ ಮದ್ಯ, ಜಾಂಗಾ ಸರಬರಾಜಾಗುತ್ತಿದೆ ಎಂಬ ದೂರು ದಶಕಗಳಷ್ಟು ಹಳೆಯದು. ಅನೇಕ ಬಾರಿ ಇಂಥ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಪೊಲೀಸರು ಈ ದೂರಿನಲ್ಲಿ ಹುರುಳಿದೆ ಎಂಬುದನ್ನೂ ಸಾಬೀತು ಮಾಡಿದ್ದಾರೆ.ಯಾವ್ಯಾವುದೋ ಅಪರಾಧ ಎಸಗಿ ಬಂದ ಕೈದಿಗಳು ದಿನವಿಡೀ ಸಮಯ ವ್ಯರ್ಥ ಮಾಡುವ ಬದಲು ಅವರಿಗೆ ಒಂದಿಷ್ಟು ಕೆಲಸ ಜತೆಗೆ ಸ್ವಲ್ಪ ಆದಾಯವೂ ಬರುವಂಥ ವ್ಯವಸ್ಥೆಯನ್ನು ಈಗ ಜೈಲಿನಲ್ಲಿ ಮಾಡಲಾಗಿದೆ. ಕೆಲವು ತಿಂಗಳಿಂದ ಕೆಲವು ಕೈದಿಗಳು ಅಗರಬತ್ತಿ ಪ್ಯಾಕಿಂಗ್ ಮಾಡುತ್ತಿದ್ದಾರೆ.

ಮೈಸೂರಿನ ಸೈಕಲ್  ಬ್ರ್ಯಾಂಡ್ ಅಗರಬತ್ತಿ ಸಂಸ್ಥೆಯವರು ಇಲ್ಲಿಯ ಕೈದಿಗಳಿಗೆ ಅಗರಬತ್ತಿ ತಂದು ಕೊಡುತ್ತಾರೆ. ಅದನ್ನು ಪ್ಯಾಕಿಂಗ್  ಮಾಡಿಕೊಡುವ ಕೆಲಸ ಕೈದಿಗಳದ್ದು. ಒಂದು ಬಾಕ್ಸ್ ಅಗರಬತ್ತಿ ಪ್ಯಾಕ್ ಮಾಡಿಕೊಟ್ಟರೆ 50 ರೂಪಾಯಿ ಕೊಡುತ್ತಾರೆ. ಕೈದಿಗಳು ದಿನಕ್ಕೆ ಎರಡು, ಮೂರು ಬಾಕ್ಸ್ ಅಗರಬತ್ತಿ ಪ್ಯಾಕ್ ಮಾಡುತ್ತಿದ್ದಾರೆ.

ಆರಂಭದಲ್ಲಿ ಕೆಲ ಕೈದಿಗಳು ಮಾತ್ರ ಈ ಕೆಲಸಕ್ಕೆ ಸಾಥ್ ನೀಡಿದ್ದರು. ಈಗ ಅವರ ಸಂಖ್ಯೆ ಮೂರು ಪಟ್ಟಾಗಿದೆ. ಆವರಣದಲ್ಲಿ ಸ್ಥಳಾವಕಾಶ ಇಲ್ಲದೆ ಎಲ್ಲರಿಗೂ ಅನುಕೂಲ ಕಲ್ಪಿಸಲು ಆಗುತ್ತಿಲ್ಲ ಎನ್ನುತ್ತಾರೆ ಬಂದೀಖಾನೆ ಅಧೀಕ್ಷಕ ಕೃಷ್ಣಮೂರ್ತಿ.

ಮಾಡಿರುವ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡುತ್ತಿರುವ ಕೆಲವು ಕೈದಿಗಳು ಈ ಹೊಸ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. `ಜೈಲಲ್ಲಿ ತುಂಬ ಬೇಜಾರಾಗುತ್ತಿತ್ತು. ಸಮಯ ಕಳೆಯುವುದೇ ಕಷ್ಟವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕೆಲಸದಲ್ಲಿ ತೊಡಗಿರುವುದರಿಂದ ಕೆಟ್ಟ ಯೋಚನೆಗಳು ಬರುತ್ತಿಲ್ಲ. ಬಿಡುಗಡೆ ಹೊಂದಿದ ಮೇಲೂ ಇಂಥದ್ದೇ ಯಾವುದಾದರೂ ವೃತ್ತಿ ಆರಂಭಿಸಿ ಜೀವನ ನಡೆಸಬಹುದು ಎಂಬ ಭರವಸೆ ಬಂದಿದೆ' ಎಂದು ಮಂಜುನಾಥ್ ನುಡಿಯುತ್ತಾರೆ.

ಜಾಗ ಸಾಕಾಗುತ್ತಿಲ್ಲ
ಒಂದು ಶತಮಾನಕ್ಕೂ ಹಿಂದೆ ನಿರ್ಮಿಸಿದ್ದ ಜೈಲು ಈಗ ತುಂಬಿ ತುಳುಕುತ್ತಿದೆ. ಜೈಲನ್ನು ಸ್ಥಳಾಂತರಿಸಿದರೆ ಇಂಥ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ಕೃಷ್ಣಮೂರ್ತಿ ನುಡಿಯುತ್ತಾರೆ.

`ಮಾರ್ಗಗಳು ಸಾಕಷ್ಟಿವೆ. ಕನಿಷ್ಠ 50 ಎಕರೆ ಜಾಗವಾದರೂ ಸಿಕ್ಕರೆ ಕೈದಿಗಳಿಗಾಗಿ ಕೈಮಗ್ಗ ಆರಂಭಿಸಬಹುದು, ಜೈಲಲ್ಲಿ ನರ್ಸರಿ ಆರಂಭಿಸಬಹುದು. ಪಾರ್ಕ್ ಮಾಡಬಹುದು, ಇನ್ನೂ ನೂರಾರು ಯೋಜನೆಗಳಿವೆ.

ಇಲ್ಲಿ ಜಾಗದ ಕೊರತೆ ಇದೆ. ಹಿಂದೆ ಕೈದಿಗಳ ಸಂಬಂಧಿಕರು ಗೋಡೆಯ ಆಚೆಯಿಂದ ಗಾಂಜಾ, ಸಿಗರೇಟು. ಮದ್ಯ ಮುಂತಾದವುಗಳನ್ನು ಸರಬರಾಜು ಮಾಡುತ್ತಿದ್ದರು. ಈಗ ಅದನ್ನು ನಿಯಂತ್ರಿಸಿದ್ದೇವೆ. ಕೈದಿಗಳ ಸುಧಾರಣೆಗೆ ಇಂಥ ಮಾರ್ಗ ಅನುಸರಿಸಬೇಕು' ಎಂದು ಅವರು ನುಡಿಯುತ್ತಾರೆ.

ಒಟ್ಟಿನಲ್ಲಿ ಇರುವ ಸ್ವಲ್ಪ ಜಾಗದಲ್ಲೇ ಕೈದಿಗಳನ್ನು ಸುಧಾರಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT