ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಸಲು ತಾಂತ್ರಿಕ ಅಡಚಣೆ

Last Updated 9 ಅಕ್ಟೋಬರ್ 2017, 6:29 IST
ಅಕ್ಷರ ಗಾತ್ರ

ಹಾಸನ: ರಣಘಟ್ಟ ಚೆಕ್ ಡ್ಯಾಂ ಮೂಲಕ ಕೆರೆಗಳಿಗೆ ನೀರು ಹರಿಸಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಪಶುಸಂಗೋಪನೆ ಸಚಿವ ಎ.ಮಂಜು ಹೇಳಿದರು. ಬೇಲೂರು ತಾಲ್ಲೂಕಿನ ಮಾದಿಹಳ್ಳಿ, ಜಾವಗಲ್ ಮತ್ತು ಹಳೆಬೀಡು ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ಯೋಜನೆ ಕಾರ್ಯಸಾಧುವೇ ಎಂಬುದರ ಬಗ್ಗೆ ಎಂಜಿನಿಯರ್‌ಗಳ ಜತೆ ಚರ್ಚಿಸಲಾಗಿದ್ದು, ಅದು ತಾಂತ್ರಿಕವಾಗಿ ಸಾಧ್ಯವಿಲ್ಲ. ಕಾಲುವೆ ಎತ್ತರದಲ್ಲಿದ್ದು, ಡ್ಯಾಂ ಕೆಳಮಟ್ಟದಲ್ಲಿ ಇರುವುದರಿಂದ ಆಗುವುದಿಲ್ಲ.  

ನಾಲೆಗೆ ನೀರು ಹರಿಯ ಬೇಕಾದರೆ, ಒಂದೆಡೆ ಶೇಖರಣೆ ಮಾಡಿ ಪಂಪ್‌ ಮಾಡಬೇಕು. ಅದು ಯಗಚಿ ಜಲಾಶಯಕ್ಕೆ ನೀರು ಬಂದರೆ ಮಾತ್ರ ಸಾಧ್ಯ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಒಪ್ಪಿಗೆ ನೀಡಿದೆ. ಬೇಲೂರು ತಾಲ್ಲೂಕಿನ 40 ಕೆರೆಗಳಿಗೆ ನೀರು ತುಂಬಿಸಲು 0.1 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ₹ 3 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಜನವರಿ ಅಂತ್ಯಕ್ಕೆ ಕೆರೆಗಳಿಗೆ ನಿರು ತುಂಬಿಸಲಾಗುವುದು ಎಂದು ಹೇಳಿದರು.

ಬಾಹುಬಲಿ ಮಹಾಮಸ್ತಕಾಭಿ ಷೇಕದ ಎಲ್ಲಾ ಕಾಮಗಾರಿಗಳೂ ಜ.15 ರೊಳಗೆ ಪೂರ್ಣಗೊಳ್ಳಲಿವೆ. ಕೆಎಸ್‌ಆರ್‌ಟಿಸಿ, 12 ಉಪನಗರ, ಆಸ್ಪತ್ರೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದರ ಜತೆ ರಸ್ತೆ ಅಭಿವೃದ್ಧಿಗೆ ₹ 89 ಕೋಟಿ ಅನುದಾನ ಬಿಡುಗಡೆ ಆಗಿದೆ.

ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ₹ 175 ಕೋಟಿ ಹಣದಲ್ಲಿ ಸುಮಾರು ₹ 15 ಕೋಟಿ ಜಿಎಸ್‌ಟಿಗೆ ಹೋಗಲಿದೆ. ಆದ್ದರಿಂದ ಹೆಚ್ಚುವರಿಯಾಗಿ ₹ 30 ಕೋಟಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಸಕಲೇಶಪುರ ಹಾಗೂ ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಆನೆ ಕಾರಿಡಾರ್ ನಿರ್ಮಿಸಲು ಮತ್ತು ಮಸ್ತಕಾಭಿಷೇಕಕ್ಕೆ ಕೇಂದ್ರದ ಅನುದಾನ ಕೋರಲು ಅ.15ರ ನಂತರ ದೆಹಲಿಗೆ ನಿಯೋಗ ತೆರಳಲಿದೆ ಎಂದು ತಿಳಿಸಿದರು.

ಹಾಸನದ ಕೋರವಂಗಲ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಯಾದಗಿರಿ ಜಿಲ್ಲೆಯ ಡೋರನಹಳ್ಳಿಯಲ್ಲಿ ಅ.9 ರಂದು ಪಶುವೈದ್ಯಕೀಯ ಡಿಪ್ಲೊಮಾ ಕಾಲೇಜುಗಳ ಉದ್ಘಾಟನೆ ಮಾಡಲಾಗುವುದು. ಕೋರವಂಗಲದಲ್ಲಿ ಮಾಂಸ ತಯಾರಿಕಾ ತಂತ್ರಜ್ಞಾನ ‘ಡಿಪ್ಲೊಮಾ ಇನ್‌ ಮೀಟ್’ ಕೊರ್ಸ್ ಪ್ರಾರಂಭಿಸಲಾಗುತ್ತಿದೆ. ಹಾಸನ ತಳಿಯ ಕುರಿ ಅಭಿವೃದ್ಧಿ ಪಡಿಸಲು ಕೋರವಂಗಲದ 33 ಎಕರೆ ಪ್ರದೇಶವನ್ನು ಕುರಿ ಸಂವರ್ಧನ ಕೇಂದ್ರವಾಗಿ ಬಳಸಲಾಗುವುದು.ಇದನ್ನು ಪಶು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ವಿವರಿಸಿದರು.

ಕೆಆರ್ಎಸ್‌ ಮಾದರಿಯಲ್ಲಿ ಹೇಮಾವತಿ ಜಲಾಶಯದಲ್ಲಿ ಬೃಂದಾವನ ನಿರ್ಮಿಸಲು ಖಾಸಗಿಯವರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಗೂರೂರು, ಹಾರಂಗಿ, ಕಬಿನಿಯಲ್ಲಿ ಬೃಂದಾವನ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅವರು ಕಾಂಗ್ರೆಸ್‌ ಸೇರುವ ಬಗ್ಗೆ ಮಾಹಿತಿ ಇಲ್ಲ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು. ಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ಎಚ್‌.ಆರ್‌. ಕೃಷ್ಣಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT