ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಸ್ ಅಭಿವೃದ್ಧಿಗೆ ₹ 171 ಕೋಟಿ

ಜಿಲ್ಲಾ ಆಸ್ಪತ್ರೆಗೆ ಸಚಿವ ಎಚ್.ಡಿ.ರೇವಣ್ಣ ಭೇಟಿ, ಪರಿಶೀಲನೆ
Last Updated 25 ಜೂನ್ 2018, 16:16 IST
ಅಕ್ಷರ ಗಾತ್ರ

ಹಾಸನ: ‘ಹಾಸನಾಂಬ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ₹ 171 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದು, ಅನುಮೋದನೆ ಪಡೆದು ಶೀಘ್ರವೇ ಅನುದಾನ ಒದಗಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಹಿಮ್ಸ್ ನಿರ್ದೇಶಕ ಕಚೇರಿಯಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಹಾಲಿ ಕಟ್ಟಡವನ್ನು 7 ಅಂತಸ್ತಿಗೇರಿಸುವ ಯೋಜನೆಗೆ ₹ 135 ಕೋಟಿ, ವೈದ್ಯಕೀಯ ಹಾಗೂ ಸ್ನಾತ್ತಕೋತ್ತರ ವಿಧ್ಯಾರ್ಥಿಗಳ ವಸತಿನಿಲಯ ಕಟ್ಟಡಗಳಿಗೆ ₹ 24 ಕೋಟಿ ಮತ್ತು ನರ್ಸ್‍ಗಳ ವಸತಿ ನಿಲಯಕ್ಕೆ ₹ 12 ಕೋಟಿ ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಖಾಲಿ ಇರುವ ಬೋಧಕ, ಬೋಧಕೇತರ ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಸುಸಜ್ಜಿತ ಹೆರಿಗೆ ಹಾಗೂ ನವಜಾತ ಶಿಶುಗಳ ವಾರ್ಡ್ ಘಟಕ ಸ್ಥಾಪಿಸುವ ಚಿಂತನೆ ಕೂಡ ಇದೆ ಎಂದು ಹೇಳಿದರು.

’ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಸಕಾರಣ ಇಲ್ಲದೆ ಸುಳ್ಳು ನೆಪ ಹೇಳಿ ಚಿಕಿತ್ಸೆ ನೀಡದೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಹಾಸನ ಜಿಲ್ಲಾಸ್ಪತ್ರೆಯನ್ನು ರಾಜ್ಯಕ್ಕೆ ಮಾದರಿ ಆಗಿಸಬೇಕು. ಇದಕ್ಕೆ ನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರ ಪ್ರಯತ್ನ, ವೈದ್ಯಾಧಿಕಾರಿಗಳ ಸಹಕಾರ ಅಗತ್ಯ ಎಂದು ಹೇಳಿದರು.

‘ಜಿಲ್ಲಾಸ್ಪತ್ರೆ ಮೇಲ್ದರ್ಜೇಗೇರಿಸುವ ಕುರಿತು ಆಗಲೇ ಬೆಂಗಳೂರಿನಲ್ಲಿ ಒಂದು ಸುತ್ತಿನ ಸಭೆ ನಡೆದಿದೆ. ಮುಖ್ಯಮಂತ್ರಿಗೂ ಮನವಿ ಮಾಡಲಾಗಿದೆ. ಹೃದಯ ಚಿಕಿತ್ಸಾ ಕೇಂದ್ರ ಈ ವರ್ಷವೇ ಆರಂಭವಾಗಲಿದೆ. ನರ್ಸ್‌ಗಳ ವಸತಿ ನಿಲಯವನ್ನು 48ಕ್ಕೆ ಏರಿಸಲಾಗುವುದು’ ಎಂದು ಸಚಿವರು ವಿವರಿಸಿದರು.

108 ಆಂಬುಲೆನ್ಸ್‌ಗಳು ಖಾಸಗಿ ಆಸ್ಪತ್ರೆಗಳ ಪರ ಕೆಲಸ ಮಾಡುವುದು ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಆಡಳಿತಾಧಿಕಾರಿ ಚಿದಾನಂದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ಇದ್ದರು.

ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್


ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವುದಾಗಿ ರೇವಣ್ಣ ಹೇಳಿದರು. ಮಂಗಳವಾರದಿಂದಲೇ ಎಲ್ಲ ತಾಲ್ಲೂಕು ಕೇಂದ್ರಗಳಿಂದ ಶಾಲಾ ಕಾಲೇಜು ಅವಧಿಯಲ್ಲಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಂತನೆ
‘ಹಿಂದೆ ನಾನು ಸಚಿವನಾಗಿದ್ದಾಗ ಬೂವನಹಳ್ಳಿ ಸಮೀಪ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿ ಸ್ವಾಧೀನ ಪಡೆಯಲಾಗಿತ್ತು. ಬಳಿಕ ಅದು ನನೆಗುದಿಗೆ ಬಿದ್ದಿತ್ತು. ಅಧಿಕಾರಿಗಳ ಜೊತೆಗೆ ಈ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಆರ್‌ಟಿಒ ವಿರುದ್ಧ ಕ್ರಮ
‘ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೂವರು ಏಜೆಂಟರು ಜನರಿಂದ ಹಣ ವಸೂಲಿ ಮಾಡುತ್ತಿರುವ ಮಾಹಿತಿ ಇದೆ. ಇದು ಸಾಬೀತಾದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ರೇವಣ್ಣ ಹೇಳಿದರು.

‘ಜಿಲ್ಲೆಯಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಿದೆ. ಭ್ರಷ್ಟಾಚಾರ ಮಟ್ಟ ಹಾಕಿ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಬೇಕು.’
- ಎಚ್‌.ಡಿ.ರೇವಣ್ಣ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT