ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 13 ಕಡೆ ಶೀತಲೀಕರಣ ಘಟಕ: ಸಚಿವ ಶಿವರಾಮ ಹೆಬ್ಬಾರ್‌

ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಹೇಳಿಕೆ
Last Updated 20 ಜುಲೈ 2022, 14:16 IST
ಅಕ್ಷರ ಗಾತ್ರ

ಕೋಡ (ಹಂಸಭಾವಿ): ‘ಹೊಸ ಹೊಸ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ನಮ್ಮ ಸರ್ಕಾರ ದೇಶದಲ್ಲೇ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಕೃಷಿ ಕಾರ್ಮಿಕರಿಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಡ್‍ಗಳನ್ನು ವಿತರಿಸಿ ಸೌಲಭ್ಯ ನೀಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ’ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.

ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ, ಅಮೃತ ಸ್ವಸಹಾಯ ಕಿರು ಉದ್ಯಮಿ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ₹1 ಲಕ್ಷ ಮೊತ್ತದ ಚೆಕ್ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಲಾ ₹10 ಲಕ್ಷ ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 13 ಶೀತಲೀಕರಣ ಘಟಕ ನಿರ್ಮಾಣ ಮಾಡಲಾಗುತ್ತದೆ. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವಿ, ಕೋಡ, ಹಿರೇಕೆರೂರಿನಲ್ಲಿ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ರೈತರು ತರಕಾರಿ, ಹಣ್ಣು, ಹೂ ಹಾಗೂ ದವಸ ಧಾನ್ಯಗಳನ್ನು ದಾಸ್ತಾನು ಮಾಡಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿ ಲಾಭ ಗಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ ರೂಪಿಸಿರುವ ಕಾರ್ಯಕ್ರಮ ಇದಾಗಿದೆ ಎಂದರು.

‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಮೂಲಕ ಇಡೀ ದಿನ ರೈತರೊಂದಿಗೆ ಉಳಿದು ಅವರೊಂದಿಗೆ ಸಂವಾದ ನಡೆಸಿ, ಅವರ ಬೇಕು, ಬೇಡಗಳನ್ನು ಅರಿತು ಇಲಾಖೆಯಲ್ಲಿ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ.ಕಳೆದ ಎರಡು ಮೂರು ವರ್ಷದಲ್ಲಿ ತಾಲೂಕಿನ ಅಭಿವೃದ್ಧಿಗೆ ನೂರಾರು ಕೋಟಿ ಹಣ ತಂದಿದ್ದಾರೆ. ಕೃಷಿಯ ಜೊತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲ್ಲೂಕಿನ 60 ಮಹಿಳಾ ಸಂಘಗಳಿಗೆ ತಲಾ ₹1 ಲಕ್ಷ ಸಹಾಯಧನ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ ಎಂದರು.

1.1 ಕೋಟಿ ಕಾರ್ಮಿಕರಿಗೆ ‘ಇ–ಶ್ರಮ’ ಕಾರ್ಡ್‌ ವಿತರಣೆ

ಕೃಷಿ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ಒಳ್ಳೆಯ ನಂಟು ಇದೆ. ಈ ಕಾರಣಕ್ಕಾಗಿ ಕಾರ್ಮಿಕ ಇಲಾಖೆಯಿಂದಲೂ ಕೃಷಿ ಕಾರ್ಮಿಕರಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಮಾಡಲಾಗಿದೆ. ಹಿರೇಕೆರೂರು ಮತ್ತು ರಟ್ಟೀಹಳ್ಳಿಯಲ್ಲಿ ತಲಾ ₹4 ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

ರಾಜ್ಯದ ಕೃಷಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ದೇಶದ 135 ಕೋಟಿ ಜನರಲ್ಲಿ 44.15 ಕೋಟಿ ಕಾರ್ಮಿಕರಿದ್ದಾರೆ. ರಾಜ್ಯದ ಆರು ಕೋಟಿ ಜನಸಂಖ್ಯೆಯಲ್ಲಿ 2.1 ಕೋಟಿ ಕಾರ್ಮಿಕರಿದ್ದಾರೆ. ಈ ಪೈಕಿ ಈಗಾಗಲೇ 1.1 ಕೋಟಿ ಕಾರ್ಮಿಕರಿಗೆ ‘ಇ-ಶ್ರಮ’ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರಂತೆಯೇ ಕೃಷಿ ಕಾರ್ಮಿಕರಿಗೂ ನೆರವು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ,ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌..ಪಾಟೀಲ, ಗ್ರಾಪಂ ಅಧ್ಯಕ್ಷೆ ಹಾಲಮ್ಮ ಹರಿಜನ, ಉಪಾಧ್ಯಕ್ಷ ಮಾಲತೇಶ ಮ್ಯಾಗೇರಿ ಇದ್ದರು.

***

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನದ 24 ತಾಸು ಕೆಲಸ ಮಾಡುತ್ತಿದ್ದಾರೆ. ಎಲ್ಲ ವರ್ಗಗಳ ಜನರ ಕಲ್ಯಾಣಕ್ಕಾಗಿ ವಿಶಿಷ್ಟವಾದ ಕೊಡುಗೆ ನೀಡುತ್ತಿದ್ದಾರೆ
– ಬಿ.ಸಿ.ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT