ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಜೇಬಿಗೆ ₹ 18 ಲಕ್ಷ ಕೋಟಿ ಕನ್ನ: ರಣದೀಪಸಿಂಗ್ ಸುರ್ಜೆವಾಲ್‌

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲ್‌
Last Updated 20 ಅಕ್ಟೋಬರ್ 2021, 17:12 IST
ಅಕ್ಷರ ಗಾತ್ರ

ಹಾನಗಲ್: ಕಳೆದ 7 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಪೆಟ್ರೋಲ್, ಡೀಸೆಲ್ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿ ₹ 18 ಲಕ್ಷ ಕೋಟಿ ಹಣ ಸಂಪಾದಿಸಿದೆ. ರಾಜ್ಯ ಸರ್ಕಾರ ಕಳೆದ 20 ತಿಂಗಳಲ್ಲಿ ₹ 7 ಸಾವಿರ ಕೋಟಿ ಸುಲಿಗೆ ಮಾಡಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಜನಸಾಮಾನ್ಯರ ಪಾಡೇನು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲ್‌ ಆಕ್ರೋಶ ವ್ಯಕ್ತಪಡಿಸಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ಕೈಗೊಳ್ಳಲು ಬುಧವಾರ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಪೆಟ್ರೋಲ್ ಬೆಲೆ ₹ 100, ಡೀಸೆಲ್ ಬೆಲೆ ₹ 101, ಸಿಲಿಂಡರ್ ಬೆಲೆ ₹ 925 ಆಗಿದೆ. ಕಬ್ಬಿಣ, ಸಿಮೆಂಟ್, ಮರಳು, ಅಡುಗೆ ಎಣ್ಣೆ, ಬೇಳೆ, ಯೂರಿಯಾ ಗೊಬ್ಬ ಹೀಗೆ ಎಲ್ಲವೂ ದುಬಾರಿಯಾಗಿವೆ. ಸ್ವಾತಂತ್ರ್ಯ ಭಾರತದ 75 ವರ್ಷಗಳ ಇತಿಹಾಸದಲ್ಲಿ ಇದೇ ಗರಿಷ್ಠ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಮಾತೆತ್ತಿದರೆ 75 ವರ್ಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕ ಸೇರಿ ಇಡೀ ದೇಶ ಬೆಲೆ ಏರಿಕೆಯಿಂದ ತತ್ತರಿಸಿದೆ. ಬಿಜೆಪಿಗೆ ಏಕೆ ಮತ ಹಾಕಬೇಕು? ಬೆಲೆ ಏರಿಕೆ ಮಾಡಿದ್ದಕ್ಕಾ? ಬೊಮ್ಮಾಯಿ ಅವರಾಗಲಿ, ಮೋದಿ ಅವರಾಗಲಿ, ಜೆ.ಪಿ.ನಡ್ಡಾ ಅವರಾಗಲಿ ದಿನಸಿ ತರಲು ಅಂಗಡಿಗೆ ತೆರಳುತ್ತಾರಾ? ಒಂದು ವೇಳೆ ಅವರು ಹೋಗಿದ್ದರೆ ಜನಸಾಮಾನ್ಯರ ಕಷ್ಟ ಏನು ಎನ್ನುವುದು ಅರ್ಥವಾಗುತ್ತಿತ್ತು. ಹೀಗಾಗಿ ಮೋದಿ ಹಾಗೂ ಬೆಲೆ ಏರಿಕೆ ಎರಡೂ ದೇಶಕ್ಕೆ ಹಾನಿಕಾರಕ ಎಂದರು.

ಆಪತ್ಭಾಂದವ ಶ್ರೀನಿವಾಸ್ ಮಾನೆ:

ಕೊರೊನಾ ಸಂದರ್ಭದಲ್ಲಿ ಸರ್ಕಾರ ಎಲ್ಲ ಜವಾಬ್ದಾರಿಗಳನ್ನು ಜನರ ಮೇಲೆ ಹಾಕಿ ನುಣುಚಿಕೊಂಡಿತು. ಜನರನ್ನು ರಕ್ಷಿಸಲಾಗದೇ ಕೂತಿತ್ತು. ಯಾವುದೇ ಬಿಜೆಪಿ ನಾಯಕರು ಸಹಾಯಕ್ಕೆ ಬರಲಿಲ್ಲ. ಆದರೆ ಶ್ರೀನಿವಾಸ್ ಮಾನೆ ಆ ಸಮಯದಲ್ಲಿ ಜನಸಂಕಷ್ಟಕ್ಕೆ ಧಾವಿಸಿದರು. ಬಡವರಿಗೆ ಆರ್ಥಿಕ ನೆರವು ನೀಡಿ ಅವರ ಬೆನ್ನಿಗೆ ನಿಂತರು. ಆಕ್ಸಿಜನ್ ಕೊರತೆಯಿಂದ ಜನ ಉಸಿರುಗಟ್ಟಿ ಸಾಯುವಾಗ ಸಂಸದರಾಗಲಿ, ಇದೀಗ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯಾಗಲಿ ಯಾರೂ ನೆರವಿಗೆ ಬರಲಿಲ್ಲ. ಶ್ರೀನಿವಾಸ್ ಮಾನೆ ತಮ್ಮ ಯುವ ಕಾರ್ಯಕರ್ತರ ಜತೆ ಸೇರಿಕೊಂಡು ಆಕ್ಸಿಜನ್, ಆಕ್ಸಿಜನ್ ಸಾಂದ್ರಕ ಯಂತ್ರದ ವ್ಯವಸ್ಥೆ ಮಾಡಿದರು. ಹೀಗಾಗಿ ಅವರಿಗೆ ಆಪತ್ಭಾಂದವ ಎಂಬ ಬಿರುದನ್ನು ಜನರೇ ಕೊಟ್ಟಿದ್ದಾರೆ ಎಂದರು.

ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೇ ಕಾರಣಕ್ಕೆ ಬಿಜೆಪಿಯನ್ನು ಸುಳ್ಳು ಹಾಗೂ ಭ್ರಷ್ಟಾಚಾರದ ಪಕ್ಷ ಎಂದು ಕರೆಯಲಾಗುತ್ತಿದೆ. ಹೀಗಾಗಿ ಜನರಿಗೆ ಬದಲಾವಣೆ ತರಲು ಈಗ ಒಂದು ಅಮೂಲ್ಯ ಅವಕಾಶ ಸಿಕ್ಕಿದೆ. ನಮ್ಮ ಯುವ ನಾಯಕ ಶ್ರೀನಿವಾಸ್ ಮಾನೆ ನಿಮ್ಮ ಪರವಾಗಿ ಧ್ವನಿ ಎತ್ತಿ ಕ್ಷೇತ್ರದ ಪರಿಸ್ಥಿತಿ ಬದಲಾಯಿಸುವ ಶಕ್ತಿ ಹೊಂದಿದ್ದಾರೆ. ಬಿಜೆಪಿಯುವರು ಎಷ್ಟೇ ಗೂಗ್ಲಿ ಬೌಲಿಂಗ್ ಹಾಕಿದರೂ ಮಹೇಂದ್ರಸಿಂಗ್ ಧೋನಿ ರೀತಿ ಸಿಕ್ಸರ್ ಸಿಡಿಸುವುದು ಅವರಿಗೆ ಗೊತ್ತು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಬಿಜೆಪಿ ನಾಯಕರು ಅನ್ಯ ಪಕ್ಷಗಳ ನಾಯಕರ ಬಗ್ಗೆ ಏಕೆ ಅವಹೇಳನ ಮಾಡುತ್ತಿದ್ದಾರೆ ಎನ್ನುವುದನ್ನು ನೀವು ವಿಮರ್ಶೆ ಮಾಡಬೇಕು. ಜನರ ಬಳಿ ಮತ ಕೇಳಲು ಅವರಿಗೆ ಯಾವುದೇ ಸಾಧನೆ, ಅದನ್ನು ಹೇಳುವ ಶಬ್ದಗಳಿಲ್ಲ. ಹೀಗಾಗಿ ಅವರು ಜನರ ನೋವು ಮರೆಸಲು ಮಾಧ್ಯಮಗಳ ಮೂಲಕ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಅಭ್ಯರ್ಥಿ ಶ್ರೀನಿವಾಸ್ ಮಾನೆ, ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಮನೋಹರ ತಹಶೀಲ್ದಾರ್, ಅಲ್ಲಂ ವೀರಭದ್ರಪ್ಪ, ಎಚ್.ಆಂಜನೇಯ, ಕುಲದೀಪರಾಜ್ ಶರ್ಮಾ, ಕೆ.ಬಿ.ಕೋಳಿವಾಡ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT