ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಪಿ ವ್ಯಾಪ್ತಿಗೆ ಮೆಣಸಿನಕಾಯಿ: ಕೇಂದ್ರಕ್ಕೆ ಪ್ತಸ್ತಾವ

ಬ್ಯಾಡಗಿ ಮಾರುಕಟ್ಟೆ ವಿಸ್ತರಣೆಗೆ 40 ಎಕರೆ ಜಮೀನು ಖರೀದಿ: ಸಚಿವ ಶಿವಾನಂದ ಪಾಟೀಲ
Published 14 ಮಾರ್ಚ್ 2024, 0:09 IST
Last Updated 14 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಹಾವೇರಿ: ‘ದರ ಕುಸಿತದಿಂದ ರೈತರಿಗೆ ಆಗುವ ನಷ್ಟ ತಪ್ಪಿಸಲು ಮೆಣಸಿನಕಾಯಿಯನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೃಷಿ ಮಾರುಕಟ್ಟೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.  

ರೈತರ ಗಲಭೆಯಿಂದ ಹಾನಿಗೊಳಗಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಮರ್ಥ್ಯವಿದೆ’ ಎಂದರು.

‘ಮೆಣಸಿನಕಾಯಿ ದಾಸ್ತಾನು ಮಾಡಲು ಜಾಗದ ಕೊರತೆ ಇದೆ. 40 ಎಕರೆ ಜಮೀನು ಕೊಡಲು ಸಿದ್ಧ ಎಂದು ವರ್ತಕರು ತಿಳಿಸಿದ್ದಾರೆ. ಜಮೀನು ಖರೀದಿಸಿ, ಮಾರುಕಟ್ಟೆ ವಿಸ್ತರಿಸಿ ವಹಿವಾಟು ನಡೆಸಲು ಅನುಕೂಲ ಕಲ್ಪಿಸುತ್ತೇವೆ’ ಎಂದರು. 

ಶೈತ್ಯಾಗಾರ ಮಂಜೂರು:

‘ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಉಪ ಮಾರುಕಟ್ಟೆಗೆ ಸರ್ಕಾರಿ ಶೈತ್ಯಾಗಾರ ಮಂಜೂರಾಗಿದೆ. ಮಾರುಕಟ್ಟೆಗೆ ಮೆಣಸಿನಕಾಯಿ ಹೆಚ್ಚು ಆವಕವಾದಾಗ,‌‌ ಯಾವ್ಯಾವ ರಾಜ್ಯಗಳಲ್ಲಿ ಬೇಡಿಕೆಯಿದೆ ಎಂಬುದನ್ನು ಗುರುತಿಸುವ ಕೆಲಸ ನಡೆದಿದೆ. ರಫ್ತುದಾರರು ಮತ್ತು ಉತ್ಪಾದಕರ ನಡುವೆ ನಮ್ಮ ಅಭಿವೃದ್ಧಿ ಆಯುಕ್ತರು ಈಗಾಗಲೇ ಎರಡು ಸಭೆ ಮಾಡಿದ್ದು, ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಾರೆ’ ಎಂದು ಅವರು ತಿಳಿಸಿದರು.

ಆವಕ ಜಾಸ್ತಿಯಾಗಿ ದರ ಕುಸಿತ:

‘ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಹೊರತುಪಡಿಸಿ ಹೊಸ ತಳಿಯಾದ ಸಿಜೆಂಟಾ ಕಂಪನಿಯ ಮೆಣಸಿನಕಾಯಿ ಆವಕ ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚಾಗಿದ್ದರಿಂದ ದರ ಕಡಿಮೆಯಾಗಿದೆ. ಬ್ಯಾಡಗಿಯ ಡಬ್ಬಿ-ಕಡ್ಡಿಗೆ ಸಿಗುವ ದರ ಇತರ ತಳಿಯ ಮೆಣಸಿನಕಾಯಿಗೆ ಸಿಗುವುದಿಲ್ಲ. ಇಲ್ಲಿನ ಮಾರುಕಟ್ಟೆ ದರ ಹಾಗೂ ಹುಬ್ಬಳ್ಳಿ ಮತ್ತು ರಾಯಚೂರು ಮಾರುಕಟ್ಟೆ ದರ ತರಿಸಿ ಪರಿಶೀಲಿಸಲಾಗುತ್ತಿದೆ’ ಎಂದರು.

ನಿರ್ದಾಕ್ಷಿಣ್ಯ ಕ್ರಮ:

ಬ್ಯಾಡಗಿ ಗಲಭೆಗೆ ಸಂಬಂಧಿಸಿದಂತೆ 81 ಮಂದಿಯನ್ನು ಬಂಧಿಸಲಾಗಿದೆ. ಸಂಪೂರ್ಣ ತನಿಖೆ ನಂತರ ಘಟನೆಯ ಸತ್ಯಾಸತ್ಯತೆ ಗೊತ್ತಾಗಲಿದೆ. ನಿರಪರಾಧಿಗಳನ್ನು ಬಿಡುಗಡೆಗೊಳಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಾಥಮಿಕವಾಗಿ ₹4.50 ಕೋಟಿ ಹಾನಿಯಾಗಿರುವ ಅಂದಾಜಿದೆ. ತುರ್ತಾಗಿ ಇಲಾಖೆಯಿಂದ ಅನುದಾನ ಭರಿಸಲಾಗುವುದು’ ಎಂದರು.

ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಮುಖಂಡರಾದ ಎಸ್.ಆರ್. ಪಾಟೀಲ, ಸುರೇಶಗೌಡ್ರ ಪಾಟೀಲ, ವರ್ತಕರು ಪಾಲ್ಗೊಂಡಿದ್ದರು. 

ಬ್ಯಾಡಗಿ ಮಾರುಕಟ್ಟೆಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ಆರಂಭಿಸಲಾಗುವುದು. ಎಪಿಎಂಸಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು
– ಶಿವಾನಂದ ಪಾಟೀಲ ಕೃಷಿ ಮಾರುಕಟ್ಟೆ ಸಚಿವ
ಬ್ಯಾಡಗಿ ಮೆಣಸಿನಕಾಯಿ ಪ್ರಾಧಿಕಾರ ರಚಿಸಬೇಕು ಮತ್ತು ಬ್ಯಾಡಗಿಯ ಮುಖ್ಯರಸ್ತೆ ವಿಸ್ತರಿಸಿ ಮೆಣಸಿನಕಾಯಿ ಸಾಗಿಸಲು ಅನುಕೂಲ ಕಲ್ಪಿಸಬೇಕು 
– ಸುರೇಶಗೌಡ್ರ ಪಾಟೀಲ ಅಧ್ಯಕ್ಷ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘ
ಬ್ಯಾಡಗಿ ಎಪಿಎಂಸಿ ಅವರಣದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂ ಸ್ಥಾಪಿಸುತ್ತೇವೆ. ಇಬ್ಬರು ಇನ್‌ಸ್ಪೆಕ್ಟರ್‌ ನಾಲ್ವರು ಪಿಎಸ್‌ಐ ಮತ್ತು 12 ಕಾನ್‌ಸ್ಟೆಬಲ್‌ ನಿಯೋಜಿಸಿದ್ದೇವೆ
– ಅಂಶುಕುಮಾರ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ
ವಾರದಲ್ಲಿ 2 ದಿನ ವಹಿವಾಟು: ಸಚಿವರ ಸೂಚನೆ
ಹಾವೇರಿ: ‘ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ವಹಿವಾಟು ನಡೆಸುವುದರಿಂದ ಒತ್ತಡ ಹೆಚ್ಚಾಗಲಿದ್ದು ಇದು ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಸೋಮವಾರ ಮತ್ತು ಗುರುವಾರ ವಹಿವಾಟು ನಡೆಸಿ ವರ್ತಕರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ‘ಬಳ್ಳಾರಿ ಮತ್ತು ಮೈಸೂರಿನಲ್ಲಿ ವರ್ತಕರ ಸಂಘದಿಂದಲೇ ರಿಯಾಯಿತಿ ದರದಲ್ಲಿ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬ್ಯಾಡಗಿ ಎಪಿಎಂಸಿಯಲ್ಲೂ ರೈತರಿಗೆ ಊಟದ ವ್ಯವಸ್ಥೆ ಮಾಡಿ’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT