ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಬೆಳೆ ಪದ್ಧತಿಯಲ್ಲಿ ಖುಷಿ ಕಂಡ ರೈತ

ಮಿಶ್ರ ಪದ್ಧತಿಯಲ್ಲಿ ಥರಹೇವಾರಿ ಬೆಳೆ ಬೆಳೆದ ಗದಿಗಯ್ಯ ಹಿರೇಮಠ
Last Updated 9 ಫೆಬ್ರುವರಿ 2023, 20:30 IST
ಅಕ್ಷರ ಗಾತ್ರ

ಶಿಗ್ಗಾವಿ: 20 ಎಕರೆಗಳಷ್ಟು ವಿಶಾಲ ಜಮೀನು. ಆರು ಎಕರೆಯಲ್ಲಿ 2,500 ಏಲಕ್ಕಿಬಾಳೆ ಗಿಡ, 2,500 ಅಡಕೆ ಗಿಡ, 100 ತೆಂಗಿನ ಮರ, 25 ಸಾಗವಾಣಿ ಗಿಡ, ತಲಾ 25 ಹೆಬ್ಬವು–ಸಿಲ್ವರ್ ಗಿಡಗಳು... ಪಕ್ಕದಲ್ಲೇ ನಳನಳಿಸುತ್ತಿರುವ ಕೋತಂಬ್ರಿ ಸೊಪ್ಪು. ಅದರ ಪಕ್ಕವೇ ಗೇಣುದ್ದ ಮೂಲಂಗಿಯ ಕಟ್ಟೆ..., ಇನ್ನೊಂದೆಡೆ ಪಾಲಕ್, ರಾಜಗಿರಿ, ಸಬ್ಬಸಗಿ ಸೊಪ್ಪುಗಳು...

ತಾಲ್ಲೂಕಿನ ಮುನವಳ್ಳಿ ಗ್ರಾಮದ ರೈತ ಗದಿಗಯ್ಯ ಶೇಖಯ್ಯ ಹಿರೇಮಠ ಅವರ ತೋಟದ ಪುಟಾಣಿ ಪರಿಚಯವಿದು. ಬಾಳೆಯಲ್ಲಿ ಲಕ್ಷಾಂತರದ ಆದಾಯ ಪಡೆಯುತ್ತಿರುವ ಗದಿಗಯ್ಯ ಪ್ರಗತಿಪರ ರೈತ. ಕೃಷಿ ಸಾಧನೆ ಅವರನ್ನು ನಾರಾಯಣಪುರ ಗ್ರಾಮ ಪಂಚಾಯ್ತಿಗೆ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದೆ. ಇದೀಗ ಅವರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರೂ ಹೌದು.

ಆರು ಎಕರೆಯಲ್ಲಿ ಬಾಳೆ, ಅಡಕೆ, ತೆಂಗು ಬೆಳೆದರೆ, ಇನ್ನುಳಿದ ಸುಮಾರು 14 ಎಕರೆ ಜಮೀನಿನಲ್ಲಿ ಮೂಲಂಗಿ, ಪಾಲಕ್, ಕೋತಂಬ್ರಿ, ಸಬ್ಬಸಗಿ, ಹರವಿ, ಕಿರಕಸಾಲಿ, ರಾಜಗಿರಿ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಕೃಷಿಯಲ್ಲಿ ಮಿಶ್ರ ಬೆಳೆ ಅಳವಡಿಸಿಕೊಂಡಿರುವ ಗದಿಗಯ್ಯ, ಇರುವ ಎರಡು ಕೊಳವೆ ಬಾವಿಗಳ ನೀರನ್ನು ಬಳಸಿ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಾರೆ. ‘ಈ ನೀರಾವರಿ ಯೋಜನೆಗೆ ಸರ್ಕಾರದ ಎನ್‌ಆರ್‌ಜಿ ಯೋಜನೆಯಡಿ ₹2 ಲಕ್ಷ ಹಣ ಪಡೆದಿದ್ದೇನೆ. ₹1 ಲಕ್ಷ ಸ್ವಂತ ವೆಚ್ಚ ಮಾಡಿದ್ದಾನೆ. ಸುಮಾರು ₹2.5 ಲಕ್ಷ ಹಣ ಸಾವಯವ ಗೊಬ್ಬರಕ್ಕಾಗಿ ಮತ್ತು ಕಾರ್ಮಿಕರ ಕೂಲಿಗಾಗಿ ಹಣ ಖರ್ಚು ಮಾಡಿದ್ದಾನೆ’ ಎಂದು ಗದಿಗಯ್ಯ ಹೇಳುತ್ತಾರೆ.

‘ಬಾಳೆಯಿಂದ ತಿಂಗಳಿಗೆ ಖರ್ಚು, ವೆಚ್ಚ ತೆಗೆದು ಕನಿಷ್ಠ ₹60–₹70 ಸಾವಿರ ಲಾಭ ಬರುತ್ತಿದೆ. ಕಳೆದ 8 ತಿಂಗಳಿಂದ ₹4ಲಕ್ಷಕ್ಕೂ ಹೆಚ್ಚು ಲಾಭ ಬಂದಿದೆ. ಇನ್ನೂ ₹5 ಲಕ್ಷಕ್ಕೂ ಲಾಭ ನಿರೀಕ್ಷೆ ಮಾಡಿರುವೆ. ಬಾಳೆಯಿಂದ ವರ್ಷಕ್ಕೆ ಕನಿಷ್ಠ ₹10 ಲಕ್ಷಕ್ಕೂ ಹೆಚ್ಚು ಗಳಿಸುತ್ತಿರುವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಅದರಂತೆ ತೆಂಗಿನಿಂದ ವಾರಕ್ಕೆ ಕನಿಷ್ಠ ₹4 ಸಾವಿರ, ತರಕಾರಿ ಬೆಳೆಯಿಂದ ವಾರಕ್ಕೆ ಕನಿಷ್ಠ ₹25 ಸಾವಿರಕ್ಕೂ ಹೆಚ್ಚಿನ ಆದಾಯ ಸಿಗುತ್ತಿದೆ’ ಎಂದು ಅವರು ವಿವರಿಸಿದರು.

ಅರಸಿಬಂದ ಪ್ರಶಸ್ತಿ: ರೈತ ಗದಿಗಯ್ಯ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ ಅವರು ರಾಜ್ಯಮಟ್ಟದ ಕೃಷಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ‘ಅಬಕಾರಿ ಮಿತ್ರ ಅನರ್ಘ್ಯ ರತ್ನ’ ಪ್ರಶಸ್ತಿ, ಧಾರವಾಡ ಕೃಷಿ ವಿವಿಯಿಂದ ಕೃಷಿ ಸಾಧಕ ಪ್ರಶಸ್ತಿ, ರೈತ ವಿಜ್ಞಾನಿ ಪ್ರಶಸ್ತಿ, ಡಾ.ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ, ರಾಜ್ಯಮಟ್ಟದ ಬಸವಜ್ಯೋತಿ ಪ್ರಶಸ್ತಿ, ರಾಜೀವಗಾಂಧಿ ಸದ್ಭಾವನಾ ಪ್ರಶಸ್ತಿ, ಡಾ.ಪುಟ್ಟರಾಜ ಕವಿ ಗವಾಯಿಗಳ ಪ್ರಮಾಣ ಪತ್ರ, ಸಲಿಲ ಸಂಯೋಜಕ ಪ್ರಶಸ್ತಿ, ಕೇಂದ್ರ ಕೃಷಿ ಸಚಿವಾಲಯದ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

***

ರೈತ ಗದಿಗಯ್ಯ ಕೃಷಿ ತಜ್ಞರು, ಅಧಿಕಾರಿಗಳಿಂದ ಮಾಹಿತಿ ಪಡೆದು ಏಲಕ್ಕಿ ಬಾಳೆ, ಅಡಕೆ, ತೆಂಗು ಸೇರಿದಂತೆ ಹಲವು ಬೆಳೆಗಳನ್ನು ಮಿಶ್ರ ಪದ್ಧತಿಯಲ್ಲಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ

– ಸುರೇಶಬಾಬು ದೀಕ್ಷಿತ್‌, ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT