ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

Last Updated 12 ಏಪ್ರಿಲ್ 2022, 13:35 IST
ಅಕ್ಷರ ಗಾತ್ರ

ಹಾವೇರಿ: ಧಾರವಾಡದ ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ಮತಾಂಧರ ದಾಳಿಯನ್ನು ಖಂಡಿಸಿ ಹಾಗೂ ಕೋಮು ಸೌಹಾರ್ದ ಕದಡುವ ಶಕ್ತಿಗಳನ್ನು ನಿಯಂತ್ರಿಸಲು ಒತ್ತಾಯಿಸಿ, ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ಧಾರವಾಡದ ಘಟನೆಯಲ್ಲಿ ಈ ಮೊದಲೇ ಮುಸ್ಲಿಂ ವ್ಯಾಪಾರಿಗಳಿಗೆ ಶ್ರೀರಾಮಸೇನೆಯ ಕಾರ್ಯಕರ್ತರು ಬೆದರಿಕೆ ಹಾಕಿರುವ ವಿಷಯ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ಗೊತ್ತಿದ್ದರೂ ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ನಿರ್ಲಕ್ಷ್ಯ ವಹಿಸಿರುವುದು ಮತ್ತು ಘಟನೆ ನಡೆಯುತ್ತಿರುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದನ್ನು ಗಮನಿಸಿದರೆ ಪೊಲೀಸ್‌ ವ್ಯವಸ್ಥೆ ಮತ್ತು ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

ಡಿಎಸ್ಎಸ್ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಮೊದಲೇ ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೀಡಾದ ಜನತೆ ತೀವ್ರ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ತಪ್ಪು ನೀತಿಗಳಿಂದಾಗಿ ತತ್ತರಿಸಿರುವ ಜನಸಾಮಾನ್ಯರ ಆಕ್ರೋಶವನ್ನು ಮರೆಮಾಚಲು ಈ ತರದ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಡಿಎಸ್ಎಸ್ ಮುಖಂಡರಾದ ಹೊನ್ನಪ್ಪ ತಗಡಿನಮನಿ, ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಖಲಂದರ್ ಅಲ್ಲಿಗೌಡ್ರ, ಬಿ.ಎಸ್.ಪಿ ಮುಖಂಡರಾದ ಅಶೋಕ ಮರೆಣ್ಣನವರ, ಎಂ.ಕೆ ಮಕಬುಲ್, ಬಸವರಾಜ ಹರಿಜನ, ವಿರೇಶ ಹ್ಯಾಡ್ಲ, ಪುಟ್ಟರಾಜ ಮುಗಳಿ, ಗುಡ್ಡಪ್ಪ ಹರಿಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT