ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳ ನಡುವೆ ನವಭಾರತ ನಿರ್ಮಾಣ

ಜಿಲ್ಲಾ ಸಾಧನೆ ಕಿರುಹೊತ್ತಿಗೆ ಬಿಡುಗಡೆ: ಕೊರೊನಾ ವಾರಿಯರ್ಸ್‍ಗೆ ಸನ್ಮಾನ
Last Updated 15 ಆಗಸ್ಟ್ 2020, 15:38 IST
ಅಕ್ಷರ ಗಾತ್ರ

ಹಾವೇರಿ: ‘ಹಲವು ಕಠಿಣ ಸವಾಲುಗಳ ನಡುವೆಯೂ ‘ನವಭಾರತ’ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಣತೊಟ್ಟಿದೆ. ಅದರಂತೆ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹಾವೇರಿಯನ್ನು ‘ಅಭಿವೃದ್ಧಿಯ ಹೆಬ್ಬಾಗಿಲು’ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಜಿಲ್ಲಾ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.

ಭಾರತ ದೇಶ ಆಹಾರ ಮತ್ತು ರಕ್ಷಣಾ ವಲಯದಿಂದ ಬಾಹ್ಯಾಕಾಶದವರೆಗೆ ಸ್ವಾವಲಂಬನೆ ಸಾಧಿಸಿದೆ.ಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ವಿದ್ಯುತ್, ಪ್ರತಿಯೊಬ್ಬರಿಗೂ ಶಿಕ್ಷಣ, ಎಲ್ಲರಿಗೂ ಸೂರು, ಆತ್ಮಗೌರವದ ಸ್ವಾಭಿಮಾನದ ಬದುಕು ಕಲ್ಪಿಸಲಾಗುವುದು. ಆರ್ಥಿಕ ಅಸಮಾನತೆ ತೊಡೆದುಹಾಕಿ, ರಾಮರಾಜ್ಯ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಬದ್ಧ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ನೆರವು:ರಾಜ್ಯದಲ್ಲಿ ಶತಮಾನದಲ್ಲಿ ಕಾಣದ ಭೀಕರ ಮಳೆ, ಪ್ರವಾಹದಂತಹ ಬಹುದೊಡ್ಡ ಸಂಕಷ್ಟದ ಸವಾಲನ್ನು ಕರ್ನಾಟಕ ರಾಜ್ಯ ಎದುರಿಸಿತ್ತು. ಈ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರವಾಸ ಕೈಗೊಂಡು ಜನರಲ್ಲಿ ಆತ್ಮವಿಶ್ವಾಸ ತುಂಬಿ ಅಭಿವೃದ್ಧಿಗೆ ₹7997 ಕೋಟಿ ನೀಡಿದರು. ಜಿಲ್ಲೆಯಲ್ಲಿ ನೆರೆಯಿಂದ ಹಾನಿಯಾದ 21,815 ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ₹236.26 ಕೋಟಿ ಪರಿಹಾರ ವಿತರಿಸಲಾಗಿದೆ. ₹202 ಕೋಟಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

ಲ್ಯಾಬ್‌ ಸ್ಥಾಪನೆ:ಕೋವಿಡ್ ನಿರ್ವಹಣೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ₹1.40 ಕೋಟಿ ವೆಚ್ಚದಲ್ಲಿ ಸುಜ್ಜಿತವಾದ ಆರ್.ಪಿ.ಸಿ.ಆರ್ ಲ್ಯಾಬ್‍ ಸ್ಥಾಪಿಸಲಾಗಿದೆ. ಕೋವಿಡ್ ವೈರಾಣು ಕ್ಷಿಪ್ರ ಪತ್ತೆಗಾಗಿ 11,400 ಸಾವಿರ ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‍ಗಳು ಪೂರೈಕೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 704 ಗ್ರಾಮಗಳ 3.45 ಲಕ್ಷ ಕುಟುಂಬಗಳ 17.95 ಲಕ್ಷ ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು.

ಮೆಡಿಕಲ್‌ ಕಾಲೇಜು:ಹಾವೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ನಿರ್ಮಾಣದ ₹ 325 ಕೋಟಿ ಕಾಮಗಾರಿಗೆ ಈ ತಿಂಗಳಾಂತ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಕಾಮಗಾರಿ ಆರಂಭಿಸಿ ನಿಗದಿತ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು. ₹185 ಕೋಟಿ ಸರ್ವಜ್ಞ ಏತ ನೀರಾವರಿ ಯೋಜನೆ, ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಯಡಿ ₹ 504 ಕೋಟಿ ವೆಚ್ಚದಲ್ಲಿ 280 ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಶಿಗ್ಗಾವಿ ಹಾಗೂ ಸವಣೂರ ಏತ ನೀರಾವರಿ ಯೋಜನೆಯನ್ನು ನವಂಬರ್‌ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಶಾಸಕ ನೆಹರು ಓಲೇಕಾರ, ತಾ.ಪಂ.ಅಧ್ಯಕ್ಷೆ ಕಮಲವ್ವ ಹೇಮನಗೌಡ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT