ಗುರುವಾರ , ಸೆಪ್ಟೆಂಬರ್ 16, 2021
29 °C
ನಾಗಪಂಚಮಿಯನ್ನು ‘ಬಸವ ಪಂಚಮಿ’ಯಾಗಿ ಆಚರಣೆ: ಕಲ್ಲಿಗೆ ಬದಲು ಮಕ್ಕಳಿಗೆ ಹಾಲು ವಿತರಣೆ

ಮೌಢ್ಯಾಚರಣೆಗೆ ಜೋತು ಬೀಳಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಾಗರ ಕಲ್ಲಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ವಿತರಿಸುವ ಮೂಲಕ ‘ನಾಗ ಪಂಚಮಿ’ಯನ್ನು ‘ಬಸವ ಪಂಚಮಿ’ಯಾಗಿ ನಗರದಲ್ಲಿ ಗುರುವಾರ ಬಸವ ಬಳಗದಿಂದ ಆಚರಣೆ ಮಾಡಲಾಯಿತು. 

ನೂರಾರು ಮಕ್ಕಳು ಸರದಿಯಲ್ಲಿ ನಿಂತು ಹಾಲು ಕುಡಿದು ಸಂತಸ ವ್ಯಕ್ತಪಡಿಸಿದರು. ನಾಗರ ಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲು ಹಸಿದ ಕಂದಮ್ಮಗಳಿಗೆ ಹಾಲು ಕೊಟ್ಟರೆ ಸಾರ್ಥಕವಾಗುತ್ತದೆ ಎಂದು ಬಸವ ಬಳಗದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. 

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಹಬ್ಬಗಳು ಅಂಧಶ್ರದ್ಧೆಯಿಂದ ಕೂಡಿರಬಾರದು. ಶೋಷಣೆ, ಮೌಢ್ಯ, ಭಯಗಳಿಂದ ಮುಕ್ತವಾಗಿ, ಸಾಮಾಜಿಕ ಆದರ್ಶಗಳನ್ನು ಬಿತ್ತಬೇಕು. ಆಡಂಬರದ ಆಚರಣೆಗಿಂತ ಅರ್ಥಪೂರ್ಣ ಆಚರಣೆಗಳತ್ತ ಜನರು ಮುಖ ಮಾಡಬೇಕು ಎಂದು ಹೇಳಿದರು. 

ನಾಗರ ಪಂಚಮಿಯಂದು 30 ವರ್ಷಗಳಿಂದ ಮಕ್ಕಳಿಗೆ ಹಾಲು ಕೊಡುವ ಕಾರ್ಯಕ್ರಮವನ್ನು ಹಾವೇರಿಯ ಹೊಸಮಠ ನಿರಂತರವಾಗಿ ನಡೆಸಿಕೊಂಡು ಬಂದಿದೆ. ನಾಗರ ಪಂಚಮಿಗೆ ಹೊಸ ಭಾಷ್ಯ ಬರೆದ ಕೀರ್ತಿ ನಮ್ಮ ಮಠಕ್ಕೆ ಮತ್ತು ಬಸವ ಭಕ್ತರಿಗೆ ಸಲ್ಲುತ್ತದೆ. ಬಸವಣ್ಣನ ಕೀರ್ತಿ ಎಲ್ಲೆಡೆ ಪ್ರಜ್ವಲಿಸುತ್ತಿದೆ. ಅವರ ಆದರ್ಶಗಳೇ ಬದುಕಿಗೆ ದಾರಿದೀಪ ಎಂದು ಅಭಿಪ್ರಾಯಪಟ್ಟರು. 

ಹಾಲು ಪೌಷ್ಟಿಕವಾದ ಆಹಾರ. ಇದನ್ನು ವ್ಯಯ ಮಾಡದೆ ಮಕ್ಕಳಿಗೆ ಕೊಡಬೇಕು. ನಿಜವಾದ ನಾಗರ ಹಾವನ್ನು ಕೊಲ್ಲುವ ನಾವು, ಕಲ್ಲನಾಗರ ಮೂರ್ತಿಗೆ ಪೂಜೆ ಸಲ್ಲಿಸುತ್ತೇವೆ. ಈ ದ್ವಂದ್ವವನ್ನೇ ಬಸವಣ್ಣನವರು ವಚನಗಳಲ್ಲಿ ಎತ್ತಿ ಹಿಡಿದಿದ್ದಾರೆ. ನಿಸರ್ಗ ಪಂಚಭೂತಗಳಿಂದ ಕೂಡಿದೆ. ಪಂಚಮಿ ಎಂದರೆ ಐದು, ಇದು ನಿಸರ್ಗದ ಆರಾಧನೆಯಾಗಬೇಕು. ಮರವನ್ನು ಸುತ್ತುವ ಬದಲು, ಮರದ ರಕ್ಷಣೆಯತ್ತ ಗಮನ ಹರಿಸಬೇಕು ಎಂದು ಮಾರ್ಮಿಕವಾಗಿ ತಿಳಿ ಹೇಳಿದರು. 

ಬಸವ ಬಳಗದ ಶೋಭಾ ತಾಯಿ ಮಾಗಾವಿ ಮಾತನಾಡಿ, ‘ಬಸವ ಬಳಗದ ವತಿಯಿಂದ ಮೌಢ್ಯಗಳ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಮೂಢನಂಬಿಕೆ ಬಿಡಬೇಕು. ಪೂಜೆಯ ಫಲ ಸಿಗಬೇಕು ಎಂದರೆ ಮೊದಲು ಮನಸು ಸ್ವಚ್ಛವಾಗಿರಬೇಕು. ದಯವೇ ಧರ್ಮದ ಮೂಲವಯ್ಯ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದರು. 

ಕಾರ್ಯಕ್ರಮದಲ್ಲಿ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ನಾಗೇಂದ್ರ ಕಡಕೋಳ, ಶಿವಯೋಗಿ ಬೆನ್ನೂರು, ಶಿವಬಸಪ್ಪ ಮುದ್ದಿ, ಚನ್ನಬಸಪ್ಪ ದೊಡ್ಡತಳವಾರ, ಸಿದ್ದಣ್ಣ ಬಾರ್ಕಿ, ಮುರೆಗಣ್ಣ ಕಡೆಕೊಪ್ಪ, ಶಿವಯೋಗಿ ಕರಿದ್ಯಾಮಣ್ಣನವರ, ಮಂಡಕ್ಕಿಯವರ, ಕಳ್ಳಿಹಾಳ, ರವಿ ಅಂಗಡಿ, ಕೊಟ್ರೇಶ ಬಿಜಾಪುರ ಮುಂತಾದವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು