ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದ ವಿಸ್ಮಯಗಳಲ್ಲಿ ಒಂದಾದ ಭಗವತಿ ಕೆರೆ: ಭೀಕರ ಬರಗಾಲದಲ್ಲೂ ಸಮೃದ್ಧ ನೀರು

Published 21 ಮಾರ್ಚ್ 2024, 4:52 IST
Last Updated 21 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಭೀಕರ ಬರಗಾಲದ ಸಂದರ್ಭದಲ್ಲಿ ಕೆರೆ–ಕಟ್ಟೆ, ನದಿ-ಹಳ್ಳ, ಕೊಳ್ಳಗಳು ಒಣಗಿ ಹೋಗಿ ಹನಿ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಈ ಸಂದರ್ಭದಲ್ಲೂ ತಾಲ್ಲೂಕಿನ ಜೋಕನಾಳ ಗ್ರಾಮದ ಹೊರವಲಯದಲ್ಲಿರುವ ಭಗವತಿ ಕೆರೆಯಲ್ಲಿ ಮಾತ್ರ ನೀರು ಸದಾ ಚಿಮ್ಮುತ್ತಿರುವುದನ್ನು ನೋಡಬಹುದು.

ಕೆರೆಯ ಅಂತರ್ಜಲದಿಂದ ನೀರು ಸಂಗ್ರಹವಾಗಿ ಹರಿದು ಹೋಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಬರಗಾಲದ ಸಂದರ್ಭದಲ್ಲಿ ತಮ್ಮ ಜಮೀನುಗಳ ಬೆಳೆಗಳಿಗೆ ಕೆರೆಯ ನೀರನ್ನು ಟ್ಯಾಂಕರ್‌ಗಳ ಮೂಲಕ ತೆಗೆದುಕೊಂಡುಹೋಗುತ್ತಿರುವುದರಿಂದ ಕೆರೆಯಲ್ಲಿ ನೀರು ಅಷ್ಟಾಗಿ ಕಂಡು ಬರುತ್ತಿರಲಿಲ್ಲ. ಈಚಿಗೆ ಕೆರೆ ಹೋರಾಟ ಸಮಿತಿಯವರು ಅದನ್ನು ತಡೆದು ದನಕರುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಬೇಕು ಎಂದು ಬಿಗಿ ಕ್ರಮ ಕೈಗೊಂಡಿರುವುದರಿಂದ ಇದೀಗ ಕರೆಯಲ್ಲಿ ನೀರು ಸಮೃದ್ಧವಾಗಿದೆ.

ತಲೆ-ತಲೆಮಾರುಗಳಿಂದಲೂ ಈ ಕೆರೆ ಎಂತಹ ಭೀಕರ ಬರಗಾಲದಲ್ಲಿಯೂ ಒಣಗಿರುವ ಉದಾಹರಣೆಯಿಲ್ಲ. ಸದಾ ಈ ಕೆರೆಯಲ್ಲಿ ನೀರು ಚಿಮ್ಮುತ್ತಿರುವುದರಿಂದ ಇದು ಜಲಗಂಗಾ ಪುಣ್ಯಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. 40 ಎಕರೆ ವಿಸ್ತ್ರೀರ್ಣವುಳ್ಳ ಕೆರೆಯಲ್ಲಿ ಸದಾಕಾಲ ನೀರು ಹರಿಯುವುದರಿಂದ ಸುತ್ತಲಿನ ಪ್ರದೇಶದಲ್ಲಿ ಕೇವಲ 4-5 ಅಡಿಗಳಷ್ಟು ಭೂಮಿ ಅಗೆದರೆ ನೀರು ಚಿಮ್ಮುತ್ತದೆ. ಭಗವತಿ ಕೆರೆಯಲ್ಲಿ ಸದಾ ನೀರು ಇರುವ ಕಾರಣ ಸುತ್ತಮುತ್ತಲಿನ ಜಮೀನುಗಳ ಬೋರವೆಲ್‌ಗಳಲ್ಲಿ ನೀರು ಸಮೃದ್ಧವಾಗಿ ರೈತರ ಕೃಷಿ ಚಟುವಟಿಕೆಗೆ ಬಹಳಷ್ಟು ಉಪಯುಕ್ತವಾಗಿದೆ. ಕೆರೆಯಿಂದ ಹರಿದು ಹೋಗುವ ನೀರನ್ನು ತಡೆದು ಶುದ್ಧೀಕರಿಸಿದರೆ ನಿತ್ಯ 20-30 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಭಗವತಿ ಕೆರೆಯನ್ನು ಹೊಳೆತ್ತಿ ಅಭಿವೃದ್ಧಿ ಪಡಿಸುವ ಮಹತ್ತರ ಗುರಿಯನ್ನು ಹೊಂದಿರುವ ಸಂದರ್ಭದಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ₹ 5 ಕೋಟಿ ವೆಚ್ಚದಲ್ಲಿ ಕೆರೆ ಹೊಳೆತ್ತಿ ಅಭಿವೃದ್ಧಿಪಡಿಸುವುದು ಹಾಗೂ ₹ 17 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಪೈಪ್‌ಗಳ ಮೂಲಕ ಈ ಕೆರೆಯೂ ಸೇರಿ 7 ಕೆರೆಗಳಿಗೆ ನೀರು ತರುವ ಯೋಜನೆಗೆ ಚಾಲನೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕಡುಬೇಸಿಗೆಯ ಈ ಸಂದರ್ಭದಲ್ಲಿ ದನಕರು ಹಾಗೂ ಕುರಿಗಳಿಗೆ ಈ ಕೆರೆಯ ನೀರು ಕುಡಿಯಲು ಅನುಕೂಲವಾಗಿದೆ. ಸುತ್ತಮುತ್ತಲೂ ಗುಡ್ಡ-ಬೆಟ್ಟ, ಅರಣ್ಯ ಪ್ರದೇಶದಿಂದ ಆವೃತಗೊಂಡು ಮಧ್ಯ ಭಗವತಿ ಕೆರೆ ಇರುವುದರಿಂದ ಇಲ್ಲಿ ಚಿರತೆ, ಕರಡಿ, ಮೊಲ, ಕಾಡುಹಂದಿ, ನವಿಲು, ಜಿಂಕೆ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಬೀಡುಬಿಟ್ಟಿವೆ. ಇವೆಕ್ಕೆಲ್ಲ ಈ ಕೆರೆಯ ನೀರು ವರದಾನವಾಗಿದೆ.

ರಟ್ಟೀಹಳ್ಳಿ ತಾಲ್ಲೂಕು ಜೋಕನಾಳ ಗ್ರಾಮದ ಐತಿಹಾಸಿಕ ಭಗವತಿ ಕೆರೆ ಬಿರುಬೇಸಿಗೆಯಲ್ಲಿಯೂ ಸಮೃದ್ಧ ನೀರಿನಿಂದ ತುಂಬಿರುವುದು
ರಟ್ಟೀಹಳ್ಳಿ ತಾಲ್ಲೂಕು ಜೋಕನಾಳ ಗ್ರಾಮದ ಐತಿಹಾಸಿಕ ಭಗವತಿ ಕೆರೆ ಬಿರುಬೇಸಿಗೆಯಲ್ಲಿಯೂ ಸಮೃದ್ಧ ನೀರಿನಿಂದ ತುಂಬಿರುವುದು
ಒಡ್ಡು ಹಾಕುವುದು ಅಗತ್ಯ
‘ಭಗವತಿಯ ಕೆರೆಯ ವಿಸ್ತೀರ್ಣ ಅಂದಾಜು 38-40 ಎಕರೆ ಪ್ರದೇಶವಿದ್ದು ನೀರಾವರಿ ಅಧಿಕಾರಿಗಳು  ಸರ್ವೆ ಮಾಡಿ ಹದ್ದನ್ನು ಗುರುತಿಸಿ ಒಡ್ಡುಹಾಕಬೇಕಿದೆ. ಕೆರೆಯ ನೀರು ಸಂಗ್ರಹದಿಂದ ತಾಲ್ಲೂಕಿನ ಕಣವಿಶಿದ್ದಗೇರಿ ಜೋಕನಾಳ ಕಬ್ಬಾರ ಹಳಿಯಾಳ ತಡಕನಹಳ್ಳಿ ಕಡೂರ ಪರ್ವತಶಿದ್ದಗೇರಿ ಗ್ರಾಮಗಳಿಗೆ ಕೆರೆಯಿಂದ ನೀರು ಪೂರೈಸಬಹುದಾಗಿದೆ. ‌ತುಂಗಭದ್ರಾ ನದಿಯಿಂದ ಪೈಪ್‌ಲೈಮ್‌ಗಳ ಮೂಲಕ ಕೆರೆಗೆ ನೀರು ತುಂಬಿಸಿದರೆ ಬರಗಾಲದಲ್ಲಿ ರೈತರು ಬೆಳೆ ಬೆಳೆದುಕೊಳ್ಳಲು ಹಾಗೂ ದನಕರುಗಳಿಗೆ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಅಲ್ಲದೇ ಈ ಜಾಗವನ್ನು ಪ್ರವಾಸಿತಾಣವನ್ನಾಗಿ ಮಾಡಬಹುದು’ ಎನ್ನುತ್ತಾರೆ ಜೋಕನಾಳ ಗ್ರಾಮದ ಭಗವತಿ ಕೆರೆ ಹೋರಾಟ ಸಮಿತಿಯ ಅಧ್ಯಕ್ಷ ಫಕ್ಕೀರಪ್ಪ ತಮ್ಮಣ್ಣನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT