ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 34 ಬಾಲ್ಯವಿವಾಹ ತಡೆದ ಮೊಬೈಲ್‌ ‘ಕರೆ’

* ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಾಚರಣೆ * ಶಾಲೆ– ಕಾಲೇಜುಗಳಲ್ಲಿ ಜಾಗೃತಿ
Published 18 ಜೂನ್ 2024, 5:18 IST
Last Updated 18 ಜೂನ್ 2024, 5:18 IST
ಅಕ್ಷರ ಗಾತ್ರ

ಹಾವೇರಿ: ‘ಮೇಡಂ, ನನಗೆ ಮನೆಯಲ್ಲಿ ಮದುವೆ ಮಾಡಿಸುತ್ತಾರೆ. ನನಗೆ ಮದುವೆ ಇಷ್ಟವಿಲ್ಲ. ನಾಳೆಯೇ ನಿಶ್ಚಿತಾರ್ಥ. ದಯವಿಟ್ಟು ಮನೆಗೆ ಬಂದು, ನನ್ನನ್ನು ಕಾಪಾಡಿ’

ಇದು, ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗೆ ಈಚೆಗೆ ಮೊಬೈಲ್‌ನಲ್ಲಿ ಕರೆ ಮಾಡಿದ್ದ ಬಾಲಕಿಯೊಬ್ಬಳ ಅಳಲು. ಇಂಥ ಹಲವು ಬಾಲಕಿಯರು ಹಾಗೂ ಅವರ ಸ್ನೇಹಿತರು, ಬಾಲ್ಯವಿವಾಹದ ವಿರುದ್ದ ದೂರು ನೀಡುತ್ತಿದ್ದಾರೆ.

2024ರ ಜನವರಿಯಿಂದ ಮೇ 31ರವರೆಗೆ ಮೊಬೈಲ್ ಕರೆಗಳ ಮೂಲಕ ಬಂದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, 34 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ. 2023ರಲ್ಲಿ 44 ಬಾಲ್ಯವಿವಾಹ ತಡೆಯಲಾಗಿತ್ತು.

ಹಾವೇರಿ, ಶಿಗ್ಗಾಂವ, ಸವಣೂರು, ಹಾನಗಲ್, ಹಿರೇಕೆರೂರ, ರಾಣೆಬೆನ್ನೂರ, ರಟ್ಟಿಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ‌‌‌ ಸ್ಥಳೀಯ ಆಡಳಿತ ಮಂಡಳಿ ಮತ್ತು ಪೊಲೀಸರ ನೆರವಿನೊಂದಿಗೆ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಜಾಗೃತಿ ಕಾರ್ಯಕ್ರಮ ನಿರಂತರ:

‘ಮಕ್ಕಳ ಹಕ್ಕುಗಳ ರಕ್ಷಣೆ ಉದ್ದೇಶದಿಂದ ಘಟಕ ಕೆಲಸ ಮಾಡುತ್ತಿದೆ. ಬಾಲ್ಯವಿವಾಹ, ಬಾಲ ಕಾರ್ಮಿಕರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆ ಹಾಗೂ ಇತರೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲ್ಯವಿವಾಹ ನಿಯಂತ್ರಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಬಾಲ್ಯವಿವಾಹ ನಡೆಯುತ್ತಿದ್ದರೆ ಮಾಹಿತಿ ನೀಡುವಂತೆ, ಜಿಲ್ಲೆಯ ಹಲವೆಡೆ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಶಾಲೆ– ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಲಾಗಿದೆ’ ಎಂದರು.

‘ಮಕ್ಕಳ ಸಹಾಯವಾಣಿ (1098) ಸಿಬ್ಬಂದಿಯೂ ಘಟಕದ ಜೊತೆ ಕೆಲಸ ಮಾಡುತ್ತಿದ್ದಾರೆ. ಹಲವು ಬಾಲಕಿಯರು, ಸಹಾಯವಾಣಿಗೆ ಹಾಗೂ ಘಟಕದ ದೂರವಾಣಿಗೆ ಕರೆ ಮಾಡಿ ಬಾಲ್ಯವಿವಾಹದ ಮಾಹಿತಿ ನೀಡುತ್ತಿದ್ದಾರೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ಕಾರ್ಯಾಚರಣೆ ನಡೆಸಿ ಬಾಲಕಿಯರನ್ನು ರಕ್ಷಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಚಾಲ್ತಿಯಲ್ಲಿರುವ ನಿಯಮಗಳು ಹಾಗೂ ಬಾಲಕಿಯರ ಹಿತದೃಷ್ಟಿಯಿಂದ, ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿರಿಸಲಾಗಿದೆ. ಬಾಲಕಿಯರಿಗೆ ಯಾವುದೇ ತೊಂದರೆಯಾಗದಂತೆಯೂ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದರು.

ಶಾಲೆ ಬಿಟ್ಟ ಬಾಲಕಿಯರು ಹೆಚ್ಚು: ‘15, 16 ಹಾಗೂ 17 ವರ್ಷ ವಯಸ್ಸಿನ ಬಾಲಕಿಯರನ್ನು ಹೆಚ್ಚಾಗಿ ಮದುವೆ ಮಾಡಿಕೊಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯ ರಕ್ಷಣೆ ಮಾಡಿರುವ ಬಾಲಕಿಯರ ಪೈಕಿ, ಹಲವರು ಶಾಲೆ ಅರ್ಧಕ್ಕೆ ಬಿಟ್ಟವರು ಹೆಚ್ಚಿದ್ದಾರೆ’ ಎಂದು ಅನ್ನಪೂರ್ಣ ಮಾಹಿತಿ ನೀಡಿದರು.

‘ಶಾಲೆ ಬಿಟ್ಟ ಮಕ್ಕಳ ಬಗ್ಗೆಯೇ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೀಡಿ, ಮಕ್ಕಳನ್ನು ವಾಪಸು ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ಧೈರ್ಯವಾಗಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರು ಹಾಗೂ ವಿಳಾಸಗಳನ್ನು ಗೌಪ್ಯವಾಗಿರಿಸಲಾಗುವುದು -
ಅನ್ನಪೂರ್ಣ ಸಂಗಳದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಅನ್ನಪೂರ್ಣಾ ಸಂಗಳದ
ಅನ್ನಪೂರ್ಣಾ ಸಂಗಳದ

‘ಎರಡು ಎಫ್‌ಐಆರ್ ದಾಖಲು’ ‘ಎರಡು ಪ್ರಕರಣಗಳಲ್ಲಿ ಬಾಲಕಿಯರ ರಕ್ಷಣೆಗೂ ಮುನ್ನವೇ ಮದುವೆಯಾಗಿತ್ತು. ಈ ಪ್ರಕರಣಗಳಲ್ಲಿ ಮದುವೆಯ ವರ ಹಾಗೂ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಮಕ್ಕಳ ಸಹಾಯವಾಣಿ 1098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT