ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಪ್ರವೇಶ ಪತ್ರಕ್ಕಾಗಿ ನಿರಂತರ ಹೋರಾಟ: ಎಸ್ಸೆಸ್ಸೆಲ್ಸಿ ಪಾಸಾದ ಅಭಿಷೇಕ

Published 11 ಜುಲೈ 2024, 16:05 IST
Last Updated 11 ಜುಲೈ 2024, 16:05 IST
ಅಕ್ಷರ ಗಾತ್ರ

ಹಾವೇರಿ: ‘ಮುಖ್ಯ ಶಿಕ್ಷಕರ ನಿರ್ಲಕ್ಷ್ಯದಿಂದಾಗಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ ಬಂದಿಲ್ಲ’ ಎಂದು ಆರೋಪಿಸಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರವೇಶ ಪತ್ರ ಪಡೆದುಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಅಭಿಷೇಕ ಜರಮಲ್ಲ ಕೊನೆಗೂ ಆಂತರಿಕ ಅಂಕವಿಲ್ಲದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.

ರಾಣೆಬೆನ್ನೂರ ತಾಲ್ಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ, ತಮ್ಮ ತಂದೆ ವಿಜಯಕುಮಾರ ಹಾಗೂ ತಾಯಿ ಜೊತೆ ಜಿಲ್ಲಾಧಿಕಾರಿ ಕಚೇರಿ ಎದುರು ಮಾರ್ಚ್ 25ರಂದು ಪ್ರತಿಭಟನೆ ನಡೆಸಿದ್ದ. ಎಸ್‌ಎಫ್‌ಐ ಪದಾಧಿಕಾರಿಗಳ ನೇತೃತ್ವದಲ್ಲಿ ರಸ್ತೆ ಮೇಲೆ ಕುಳಿತು ಅಣಕು ಪರೀಕ್ಷೆ ಬರೆದು ಆಕ್ರೋಶ ವ್ಯಕ್ತಪಡಿಸಿದ್ದ.

ವಿದ್ಯಾರ್ಥಿ ಕೂಗಿಗೆ ಸ್ಪಂದಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ್ ಹುಗ್ಗಿ, ಸಂಬಂಧಪಟ್ಟ ಶಾಲೆ ಶಿಕ್ಷಕರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದಾದ ನಂತರ, ನಿರಂತರ ಅಲೆದಾಟದಿಂದ ವಿದ್ಯಾರ್ಥಿಗೆ ಪ್ರವೇಶ ಪತ್ರ ಲಭಿಸಿತ್ತು.

‘ಹೋರಾಟದ ಮೂಲಕ ಪ್ರವೇಶ ಪತ್ರ ಪಡೆದು ಮೂರನೇ ಪೂರಕ ಪರೀಕ್ಷೆಗೆ ಹಾಜರಾಗಿದ್ದ ಅಭಿಷೇಕ, 625 ಅಂಕಗಳ ಪೈಕಿ 350 ಅಂಕಗಳನ್ನು ಪಡೆದುಕೊಂಡು ಉತ್ತೀರ್ಣನಾಗಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 125 ಆಂತರಿಕ ಅಂಕಗಳು ಇರುತ್ತವೆ. ಆದರೆ, ಈತನಿಗೆ ಶಾಲಾ ಶಿಕ್ಷಕರು ಯಾವುದೇ ಆಂತರಿಕ ಅಂಕಗಳನ್ನು ನೀಡಿಲ್ಲ. ತನ್ನ ವೈಯಕ್ತಿಕ ಸಾಮರ್ಥ್ಯದಿಂದಲೇ ಅಭಿಷೇಕ್ 350 ಅಂಕ ಪಡೆದುಕೊಂಡಿದ್ದಾನೆ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ಎಸ್. ತಿಳಿಸಿದರು.

‘ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು, ಹಾಜರಾತಿ ನೆಪದಲ್ಲಿ ವಿದ್ಯಾರ್ಥಿ ಭವಿಷ್ಯವನ್ನು ಹಾಳು ಮಾಡಲು ಪ್ರವೇಶ ಪತ್ರ ನೀಡಿರಲಿಲ್ಲ. ಓದಿನಲ್ಲಿ ಮುಂದಿದ್ದ ಅಭಿಷೇಕ, ಪ್ರವೇಶ ಪತ್ರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ಪ್ರತಿಭಟನೆ ಮಾಡಬೇಕಾದ ಸ್ಥಿತಿ ಬಂದಿತ್ತು. ವಿದ್ಯಾರ್ಥಿಗಳನ್ನು ತುಳಿಯುವ ಶಿಕ್ಷಕರು ನಮ್ಮಲ್ಲಿದ್ದಾರೆ ಎಂಬುದು ಈ ಪ್ರಕರಣದಿಂದ ಗೊತ್ತಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗೆ ಒಂದೇ ಒಂದು ಆಂತರಿಕ ಅಂಕವನ್ನೂ ಶಿಕ್ಷಕರು ನೀಡಿಲ್ಲ. ನೀಡಿದ್ದರೆ, ವಿದ್ಯಾರ್ಥಿ ಫಲಿತಾಂಶ ಮತ್ತಷ್ಟು ಹೆಚ್ಚಾಗುತ್ತಿತ್ತು. ಇದೊಂದು ಶಿಕ್ಷಕರ ಷಡ್ಯಂತ್ರ. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಈಗಲಾದರೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಖಾಸಗಿ ವಿದ್ಯಾರ್ಥಿ; ಆಂತರಿಕ ಅಂಕವಿಲ್ಲ’: ‘ಅಭಿಷೇಕ ಖಾಸಗಿ ವಿದ್ಯಾರ್ಥಿಯೆಂದು ಪರಿಗಣಿಸಿ ಪ್ರವೇಶ ಪತ್ರ ನೀಡಲಾಗಿತ್ತು. ಈತ ಪಡೆದಿರುವ 350 ಅಂಕಗಳೇ ಅಂತಿಮ. 125 ಆಂತರಿಕ ಅಂಕಗಳ ಪೈಕಿ ಯಾವುದೇ ಅಂಕ ನೀಡಲು ಸಾಧ್ಯವಿಲ್ಲ’ ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ.

‘ಮಗ ಪ್ರತಿಯೊಂದು ವಿಷಯದ ನಿಯೋಜಿತ ಕಾರ್ಯ (ಅಸೈನ್‌ಮೆಂಟ್) ಮಾಡಿದ್ದಾನೆ. ಆಂತರಿಕ ಅಂಕ ನೀಡಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ’ ಎಂದು ಪೋಷಕರು ಶಿಕ್ಷಕರನ್ನು ಕೋರುತ್ತಿದ್ದಾರೆ. ಅದಕ್ಕೆ ಶಿಕ್ಷಕರು ಸ್ಪಂದಿಸುತ್ತಿಲ್ಲ. ಈ ಬಗ್ಗೆ ಪೋಷಕರು ಬೇಸರಗೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮುಂದುವರಿಕೆ: ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ, ‘ನನ್ನ ಓದಿನ ಮೇಲೆ ನಂಬಿಕೆ ಇತ್ತು. ವಿನಾಕಾರಣ ನನಗೆ ಪ್ರವೇಶ ಪತ್ರ ನೀಡಲಿಲ್ಲ. ಯಾವುದೇ ಆಂತರಿಕ ಅಂಕವಿಲ್ಲದೇ ಪಾಸಾಗಿದ್ದೇನೆ. ಮುಂದೆ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಇಚ್ಛೆ ಇದ್ದು, ಕಾಲೇಜಿಗಾಗಿ ಹುಡುಕಾಡುತ್ತಿದ್ದೇನೆ’ ಎಂದು ತಿಳಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT