ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವಾರಾಂತ್ಯದ ಕರ್ಫ್ಯೂ ಮುಂದುವರಿಕೆ

ಹಾಲು, ಹಣ್ಣು, ಔಷಧ ಸೇರಿದಂತೆ ಅತ್ಯಗತ್ಯ ಸೇವೆಗೆ ಅವಕಾಶ: ಗುಂಪು ಚಟುವಟಿಕೆಗೆ ನಿಷೇಧ
Last Updated 25 ಜೂನ್ 2021, 13:45 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ‘ವಾರಾಂತ್ಯದ ಕರ್ಫ್ಯೂ’ ಮುಂದುವರಿಸಲಾಗಿದ್ದು, ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತ್ಯವಶ್ಯಕ ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಸರ್ಕಾರದಿಂದ ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಜುಲೈ 5ರವರೆಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಜೂನ್ 20ರಂದು ಆದೇಶ ಹೊರಡಿಸಿದ್ದರು. ಈ ಆದೇಶದಂತೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ದಿನಸಿ, ತರಕಾರಿ, ಹಾಲು, ಔಷಧ, ಮಾಂಸ, ಮೀನು, ಪಶು ಆಹಾರದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳಿಗೆ ಹಾಗೂ ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಿಗೆ ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಅನುಮತಿಸಲಾಗಿದೆ.

ಉಳಿದ ವಾರದ ದಿನಗಳಲ್ಲಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆವರೆಗೆ ನಿಗದಿತ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ‘ರಾತ್ರಿ ಕಫ್ರ್ಯೂ’ ಸಂಜೆ 7ರಿಂದ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ.

ವಾರಾಂತ್ಯದ ಕಫ್ಯೂ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಎಲ್ಲಾ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಹಾಗೂ ಗಾರ್ಮೆಂಟ್ ತಯಾರಿಕೆಯಲ್ಲಿ ತೊಡಗಿರುವ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮಥ್ರ್ಯದ ಶೇ 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣ, ಮಾಲ್‍ಗಳು ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ.

ಹವಾನಿಯಂತ್ರಿತ ಹೊರತುಪಡಿಸಿ ಹೋಟೆಲ್, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ.

ಶೇ 50ರ ಸಾಮರ್ಥ್ಯದೊಂದಿಗೆ ಲಾಡ್ಜ್‌ಗಳು ಮತ್ತು ರೆಸಾರ್ಟ್‍ಗಳಿಗೆ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳಿಗೆ ಪ್ರತಿದಿನ ಬೆಳಿಗ್ಗೆ 6 ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ.

ವಾಕಿಂಗ್ ಉದ್ದೇಶಕ್ಕಾಗಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಉದ್ಯಾನಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಶೇ 50ರಷ್ಟು ಸಾಮರ್ಥ್ಯದೊಂದಿಗೆ ಜಿಮ್‍ಗಳಿಗೆ ಅವಕಾಶ ನೀಡಲಾಗಿದೆ.

ಗರಿಷ್ಟ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿಗಳು ಮತ್ತು ಆಟೊರಿಕ್ಷಾಗಳಿಗೆ ಸಂಚರಿಸಲು ಅನುಮತಿಸಿದೆ. ವೀಕ್ಷಕರಿಲ್ಲದೆ ಹೊರಾಂಗಣ ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕೂ ಅಧಿಕ ವ್ಯಕ್ತಿಗಳ ಸೇರುವಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ನಿಗದಿಪಡಿಸಲಾಗಿರುವ ಮದುವೆ ಸಮಾರಂಭಗಳನ್ನು ಅವರವರ ಮನೆಗಳಲ್ಲಿಯೇ ಹತ್ತಿರದ ಸಂಬಂಧಿಕರು ಒಳಗೊಂಡಂತೆ 40 ಜನರಿಗೆ ಮೀರದಂತೆ ಅನುಮತಿಸಿದೆ ಹಾಗೂ ಅಂತ್ಯ ಸಂಸ್ಕಾರಕ್ಕೆ 5 ಜನರು ಮೀರದಂತೆ ನಡೆಸಲು ಅನುಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT