ಮಂಗಳವಾರ, ಜೂನ್ 28, 2022
20 °C
ಕೊರೊನಾ ಮಣಿಸಲು ಶಿಕ್ಷಕರಿಗೆ ಆತ್ಮಸ್ಥೈರ್ಯ; ವೈದ್ಯ, ಕಲಾವಿದರಿಂದ ಸ್ಫೂರ್ತಿಯ ಸಂದೇಶ

ಸೋಂಕಿತರ ಮನಗೆದ್ದ ‘ಭರವಸೆಯ ಬೆಳದಿಂಗಳು’

ಎಸ್‌.ಎಸ್‌.ನಾಯಕ Updated:

ಅಕ್ಷರ ಗಾತ್ರ : | |

Prajavani

ಕುಮಾರಪಟ್ಟಣ: ಕೋವಿಡ್‌ನಿಂದ ಮೃತರಾದ ಶಿಕ್ಷಕರ ಸಾವಿನ ಪ್ರಕರಣಗಳು ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಬಳಗದಲ್ಲಿ ಆತಂಕ ಸೃಷ್ಟಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೋಂಕಿತ ಶಿಕ್ಷಕರೊಂದಿಗೆ ನಡೆಸಿದ ಹದಿನೈದು ದಿನಗಳ ಪಾಕ್ಷಿಕ ಕಾರ್ಯಕ್ರಮ ‘ಭರವಸೆಯ ಬೆಳದಿಂಗಳು’ ಮನೋಸ್ಥೈರ್ಯ ತುಂಬಿ, ಗುಣಮುಖರಾಗಿಸುವಲ್ಲಿ ಯಶಸ್ವಿಯಾಗಿದೆ. 

‘ಶಿಕ್ಷಕರನ್ನು ಕಳೆದುಕೊಂಡ ಕುಟುಂಬದ ರೋದನ ನೋಡಿ ತುಂಬ ಬೇಸರವಾಯಿತು. ಹೀಗಾಗಿ, ಸೋಂಕಿತ ಶಿಕ್ಷಕರಿಗೆ ಮನೋಸ್ಥೈರ್ಯ ತುಂಬಬೇಕು ಎಂದು ನಿರ್ಧರಿಸಿದೆವು. ‘ಮೈಕ್ರೊಸಾಫ್ಟ್‌ ಟೀಂ’ ತಂತ್ರಾಂಶದ ಮೂಲಕ ವರ್ಚುವಲ್‌ ಕಾರ್ಯಕ್ರಮ ರೂಪಿಸಿದೆವು’ ಎಂದು ಸವಣೂರ ತಾಲ್ಲೂಕು ಬಿಇಒ ಐ.ಬಿ.ಬೆನಕೊಪ್ಪ ತಿಳಿಸಿದರು. 

ನಿತ್ಯ 350 ಶಿಕ್ಷಕರು: ಮೇ 20ರಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ‘ಭರವಸೆಯ ಬೆಳದಿಂಗಳು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿನಿತ್ಯ ಜಿಲ್ಲೆಯ 350ಕ್ಕೂ ಹೆಚ್ಚು ಶಿಕ್ಷಕರು ಸ್ವ-ಇಚ್ಛೆಯಿಂದ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದಿ
ದ್ದಾರೆ. ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಕಾರ್ಯಕ್ರಮದ ಲಿಂಕ್‌ ಅನ್ನು ಶೇರ್‌ ಮಾಡಲಾಗುತ್ತಿತ್ತು. ಇದರಿಂದ ಆಸಕ್ತ ಶಿಕ್ಷಕರು ಮತ್ತು ಸೋಂಕಿತ ಶಿಕ್ಷಕರು ನೇರವಾಗಿ ಆನ್‌ಲೈನ್‌ ವೇದಿಕೆಯಲ್ಲಿ ಪಾಲ್ಗೊಂಡರು.  

ಕಾರ್ಯಕ್ರಮ ಪ್ರಾರಂಭವಾದ ಬಳಿಕವೂ ಮೂವರು ಶಿಕ್ಷಕರು ಸೋಂಕಿಗೆ ಬಲಿಯಾದರು. ಆದರೆ ಪ್ರಯತ್ನವನ್ನು ಬಿಡದೆ, ನೇರವಾಗಿ ಹೋಂ ಕ್ವಾರಂಟೈನ್‌ ಹಾಗೂ ಕೋವಿಡ್‌ ಕೇರ್‌ ಸೇಂಟರ್‌ಗಳಲ್ಲಿದ್ದ ಸೋಂಕಿತ ಶಿಕ್ಷಕರಿಗೆ, ಕೋವಿಡ್‌ ಗೆದ್ದ ಶಿಕ್ಷಕರಿಂದ ಮತ್ತು ಹಾಸ್ಯ
ಕಲಾವಿದರಿಂದ ಸ್ಫೂರ್ತಿ ತುಂಬಲಾಯಿತು. ವೈದ್ಯರಿಂದ ಉಪಚಾರ ಕ್ರಮಗಳ ಬಗ್ಗೆಯೂ ತಿಳಿಸಲಾಯಿತು.

ಮನೋಬಲ, ಆತ್ಮವಿಶ್ವಾಸ, ಆರೈಕೆ, ಸುರಕ್ಷಾ ಕ್ರಮ, ಆಹಾರ ಕ್ರಮ ಮುಂತಾದ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದರು. ಬಸಾಪುರ, ಮಾದಾಪುರ ಮತ್ತು ಧಾರವಾಡದ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಹೋಂ ಕ್ವಾರಂಟೈನ್‌ನಲ್ಲಿದ್ದ ಸುಮಾರು 25 ಶಿಕ್ಷಕರು ಇದರ ಪ್ರಯೋಜನ ಪಡೆದರು. 

ಕೋವಿಡ್‌ ಗೆದ್ದ ಕುಟುಂಬ: ‘ಕುಟುಂಬದ ಎಲ್ಲರಿಗೂ ಸೋಂಕು ತಗುಲಿತು. ಎದೆಗುಂದದೆ ವೈದ್ಯರ ಸಲಹೆ ಪಡೆದು, ಮನೆಯಲ್ಲಿ ಇದ್ದು ಕಾರ್ಯಕ್ರಮ ಸಂಯೋಜನೆಯತ್ತ ಗಮನ ಹರಿಸಿದೆ. ಶಿಕ್ಷಕರಿಗೆ ಧೈರ್ಯ ತುಂಬಿದೆ. 15 ದಿನಗಳಲ್ಲಿ ಪತ್ನಿ ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ಗುಣಮುಖರಾದೆವು. ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿ ಹಾಗೂ ತಂತ್ರಜ್ಞ ನುರಿತ ಶಿಕ್ಷಕರು ನೆರವಾಗಿದ್ದಾರೆ’ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಮಂಜಪ್ಪ ಆರ್‌.ತಿಳಿಸಿದರು.

ಕೈಪಿಡಿ ಬಿಡುಗಡೆ: ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ವರ್ಚುವಲ್‌ ಸಭೆಯಲ್ಲಿ ಧಾರವಾಡ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ 15 ದಿನಗಳ ಪಾಕ್ಷಿಕ ‘ಭರವಸೆಯ ಬೆಳದಿಂಗಳು’ ಕೈಪಿಡಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾವೇರಿ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಗದಗ, ಉಡುಪಿ, ಹಾಸನ, ಮೈಸೂರು, ಧಾರವಾಡ ಜಿಲ್ಲೆಗಳಲ್ಲೂ ‘ವರ್ಚುಯಲ್‌ ಕಾರ್ಯಕ್ರಮ’ ಆರಂಭಗೊಂಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು