ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕರಿಗೆ ಕನಿಷ್ಠ ಸೌಲಭ್ಯಕ್ಕೆ ಆಗ್ರಹ

ಪಿಎಫ್‌, ಇಎಸ್‌ಐ ಸೌಲಭ್ಯ ವಂಚಿತ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ
Last Updated 1 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಪಿಎಫ್‌ ಮತ್ತು ಇಎಸ್‌ಐ ಸೌಲಭ್ಯ ವಂಚಿತ ಕರ್ನಾಟಕ ರಾಜ್ಯ ಉಗ್ರಾಣ ನಿಗಮ (ಆಹಾರ) ನಿಯಮಿತದ ಶ್ರಮಜೀವಿ ಹಮಾಲರ ಸಂಘದ ನೂರಾರು ಕಾರ್ಮಿಕರು ಪಿಎಫ್‌ ಮತ್ತು ಇಎಸ್‌ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಹೂಲಿಹಳ್ಳಿಯ ಮೇಗಾ ಮಾರುಕಟ್ಟೆ ಆವರಣದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.

ಅನಿರ್ದಿಷ್ಟಾವಧಿ ಮುಷ್ಕರವನ್ನು ಉದ್ಘಾಟಿಸಿದ ದೊಡ್ಡಪೇಟೆ ಗುರುಬಸವ ಸ್ವಾಮೀಜಿ ಮಾತನಾಡಿ, ‘ನಿಜವಾದ ಶ್ರಮಜೀವಿಗಳಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಆನಾರೋಗ್ಯಕ್ಕೀಡಾದ ಹಮಾಲರು ಸೂಕ್ತ ಚಿಕಿತ್ಸೆ ಸಿಗದೇ ಮತ್ತು ಆರ್ಥಿಕವಾಗಿ ತೊಂದರೆಗೀಡಾಗಿದ್ದಾರೆ. ಸರ್ಕಾರ ಕೂಡಲೇ ಈ ಶ್ರಮ ಜೀವಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಹೋರಾಟದ ಮುಖಂಡ ಜಗದೀಶ ಕೆರೂಡಿ ಮಾತನಾಡಿ, ‘ಉಗ್ರಾಣದಲ್ಲಿ 60ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರು ದಿನಾಲು ಉಗ್ರಾಣದಲ್ಲಿ ಲಾರಿಗೆ ಲೋಡ್‌ ಅನ್‌ ಲೋಡ್‌ ಮಾಡುತ್ತಾರೆ. ಸರ್ಕಾರ ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಕೂಡ ನೀಡಿಲ್ಲ. ಶುದ್ದ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ಕ್ಯಾಂಟೀನ್‌ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.

‘2016ರಿಂದ 2022 ರವರೆಗೆ ಕೆಲಸ ಮಾಡಿದ ಹಮಾಲರಿಗೆ ನ್ಯಾಯಯುತ ಬೇಡಿಕೆಗಳು ಸಿಕ್ಕಿಲ್ಲ. ಕಳೆದ 6-7 ವರ್ಷಗಳಿಂದ ಕಾರ್ಮಿಕರಿಗೆ ಪಿಎಫ್‌ ಮತ್ತು ಇಎಸ್‌ಐ ಸೌಲಭ್ಯದ ಹಣ ಕಾರ್ಮಿಕರ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಗುತ್ತಿಗೆದಾರರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ’ ಎಂದು ದೂರಿದರು.

‘ಕಾರ್ಮಿಕರ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಮತ್ತು ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸದೇ ಅನ್ಯಾಯವೆಸಗಿರುವ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಬೇಕು’ ಎಂದು ಒತ್ತಾಯಿಸಿದರು.

ಕಾರ್ಮಿಕರ ಪಿಎಫ್‌ ಮತ್ತು ಮೂಲ ಸೌಕರ್ಯಗಳಿಗಾಗಿ ಮಾತನಾಡಿದ ಶ್ರೀಗಳು, ‘ನಿಜವಾಗಿ ಶ್ರಮ ವಹಿಸಿದ ದುಡಿಯುವ ಕಾರ್ಮಿಕ ವರ್ಗಕ್ಕೆ ಮತ್ತು ಮಕ್ಕಳ ಶೈಕ್ಷಣಿಕವಾಗಿ ಸರ್ಕಾರದ ಯಾವುದೇ ಸೌಲಭ್ಯ ದೊರತಿಲ್ಲ. 15 ದಿನದೊಳಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಶ್ರಮಿ ಜೀವಿ ಸಂಘದ ಹಮಾಲರ ಸಂಘದ ಅಧ್ಯಕ್ಷ ಹನುಮಂತಪ್ಪ ಹಲವಾಗಲ, ರವೀಂದ್ರ ಗೌಡ ಪಾಟೀಲ, ಪ್ರಕಾಶ ಪೂಜಾರ, ರಾಜಣ್ಣ ಪಾಟೀಲ, ಮಾಂತೇಶ ಮದ್ಲೇರ, ರಾಜು ಓಲೇಕಾರ, ರವಿ ಕೆರೂಡಿ, ವಿರುಪಾಕ್ಷಪ್ಪ ಬಂಕಾಪುರ, ಮಾಂತೇಶ ಹಲಗೇರಿ, ದಾದಾಪಿರ ಬನ್ನಿಕೋಡ. ಮಲ್ಲಪ್ಪ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT