ಹಾವೇರಿ: ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು, ಜೋಗಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಹಾವೇರಿ ಜಿಲ್ಲೆ ಜೋಗಿ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ಜೋಗಿ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಈ ಸಮಾಜದ ಅಕ್ಷರತೆ ಶೇ 0.01 ಇದ್ದು, ಭಿಕ್ಷಾಟನೆ, ಬೀಗದ ಕೀ, ಛತ್ರಿ ದುರಸ್ತಿ ಹಾಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಯವರೆಗೆ ಶೇ 90ರಷ್ಟು ಸಮಾಜದವರಿಗೆ ನಿವೇಶನವಾಗಲಿ, ಮನೆಯಾಗಲಿ ಸಿಕ್ಕಿಲ್ಲ. ಉಳುಮೆ ಮಾಡಲು ಜಮೀನು ದೊರೆತಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸಮುದಾಯದ ಬಗ್ಗೆ 12 ವರ್ಷಗಳ ಹಿಂದೆ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಈ ತನಕ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಸಮುದಾಯದವರು ತಿಳಿಸಿದರು.
ಹಾವೇರಿ ಜಿಲ್ಲೆ ಜೋಗಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ರಾಮು ಮಧುರಕರ, ಸಂತೋಷ ಎನ್. ಮಧುರಕರ, ಹೊಳಿಲಿಂಗಪ್ಪ ತಿಳವಳ್ಳಿ, ಬಸವರಾಜ ಪಾರ್ಶಿ, ವಿಠ್ಠಲ್ ಗೊರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.