ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ವೈದ್ಯರಿಂದ ‘ಧಿಕ್ಕಾರ್‌  ದಿವಸ್’

ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧ
Last Updated 28 ಜುಲೈ 2018, 14:36 IST
ಅಕ್ಷರ ಗಾತ್ರ

ಹಾವೇರಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ‘ಧಿಕ್ಕಾರ್ ದಿವಸ್’ ಅಂಗವಾಗಿ ಶನಿವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗ (ಒಪಿಡಿ)ಗಳನ್ನು ಬಂದ್ ಮಾಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಇಮ್ಮಡಿಯಾಗಿತ್ತು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಿದ ಖಾಸಗಿ ಆಸ್ಪತ್ರೆಗಳ ವೈದ್ಯರು, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.

ಇತ್ತ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಿತ್ತು. ಆದರೆ, ವಾರಾಂತ್ಯದ ಶನಿವಾರ ಸಹಜವಾಗಿ ಪರೀಕ್ಷೆ, ಚಿಕಿತ್ಸೆ, ತಪಾಸಣೆಗೆ ಬರುವವರ ಸಂಖ್ಯೆ ಕಡಿಮೆ ಇದ್ದ ಕಾರಣ ರೋಗಿಗಳು ಯಾವುದೇ ಸಮಸ್ಯೆ ಎದುರಿಸಲಿಲ್ಲ.

‘ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸುಸೂತ್ರವಾಗಿ ಚಿಕಿತ್ಸೆ ನೀಡಲಾಯಿತು. ಬಂದ್ ಹಿನ್ನೆಲೆಯಲ್ಲಿ ಶುಕ್ರವಾರವೇ ವೈದ್ಯರು ವಿಶೇಷ ಸಭೆ ನಡೆಸಿದ್ದು, ಮುಂಜಾಗ್ರತೆ ವಹಿಸಲಾಗಿತ್ತು. ಎಲ್ಲ ಸಿಬ್ಬಂದಿಯೂ ಸೇವೆಯಲ್ಲಿ ನಿರತರಾದ ಕಾರಣ ಯಾವುದೇ ರೋಗಿಗಳಿಗೆ ಸಮಸ್ಯೆಯಾಗಲಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ ಪ್ರತಿಕ್ರಿಯಿಸಿದರು.

ಜಿಲ್ಲಾದ್ಯಂತ ಬಂದ್:

ಖಾಸಗಿ ಆಸ್ಪತ್ರೆಗಳ ಮುಷ್ಕರದ ಪರಿಣಾಮ, ನಗರದ ಖಾಸಗಿ ಆಸ್ಪತ್ರೆಗಳೆಲ್ಲ ಬಂದ್‌ ಆಗಿದ್ದವು. ಆದರೆ, ತುರ್ತು ಚಿಕಿತ್ಸಾ ಘಟಕ, ಔಷಧ ಮಳಿಗೆ ಹಾಗೂ ದಾಖಲಾದ ರೋಗಿಗಳ ಘಟಕವು ಎಂದಿನಂತೆ ಕಾರ್ಯ ನಿರ್ವಹಿಸಿದವು.

‘ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು. ಸಿಬ್ಬಂದಿ ರಜೆ ಪಡೆಯದೇ ಕಾರ್ಯ ನಿರ್ವಹಿಸಬೇಕು’ ಎಂದು ಆರೊಗ್ಯ ಇಲಾಖೆಯು ಆದೇಶಿಸಿತ್ತು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಗಿರೀಶ್ ಮಲ್ಲಾಡದ ಪ್ರತಿಕ್ರಿಯಿಸಿ, ‘ಈ ಹಿಂದೆ ವೈದ್ಯಕೀಯ ಶಿಕ್ಷಣ ತಜ್ಞರನ್ನು ವೈದ್ಯರು ಆಯ್ಕೆ ಮಾಡುತ್ತಿದ್ದರು. ಆದರೆ, ಉದ್ದೇಶಿತ ಮಸೂದೆ ಪ್ರಕಾರ ಕೇಂದ್ರ ಸರ್ಕಾರ ನಾಮಕರಣ ಮಾಡಲಿದೆ. ಅಲ್ಲದೇ, ಸರ್ಕಾರ ಮತ್ತು ಖಾಸಗಿಗಳ ಮಧ್ಯೆ ಶೇ 80 ಮತ್ತು ಶೇ 20ರ ಅನುಪಾತದಲ್ಲಿದ್ದ ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆಯನ್ನು 40:60 ಮಾಡಲಾಗಿದೆ. ಅಲ್ಲದೇ, ಖಾಸಗಿ ಕಾಲೇಜುಗಳೇ ಶುಲ್ಕ ನಿಗದಿ ಪಡಿಸಲಿವೆ. ಇದು ಬಡವರು, ಸಾಮಾನ್ಯರು ಹಾಗೂ ಮಧ್ಯಮವರ್ಗದ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ವೈದ್ಯರಾಗುವ ಕನಸಿಗೆ ತಿಲಾಂಜಲಿ ಇಡಲಿದೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗೌತಮ್‌ ಲೋಡಾಯ ಪ್ರತಿಕ್ರಿಯಿಸಿ, ‘ಕೇಂದ್ರ ಸರ್ಕಾರವು ಹಠಕ್ಕೆ ಬಿದ್ದಂತೆ ಆಯೋಗ ರಚನೆಯ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಲು ಹೊರಟಿದೆ. ಇದನ್ನು ವಿರೋಧಿಸಿ ಧಿಕ್ಕಾರ್ ದಿವಸ್‌ ಆಚರಿಸಲಾಗುತ್ತಿದೆ. ಸಾಂಕೇತಿಕ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT