ಒಂದೇ ಧ್ವಜಕ್ಕೆ ಪ್ರತಿನಿತ್ಯ ‘ಖರ್ಚು’

ಶುಕ್ರವಾರ, ಏಪ್ರಿಲ್ 26, 2019
24 °C
ವೀಕ್ಷಕರು, ವೆಚ್ಚ ವೀಕ್ಷಕರು, ಪೊಲೀಸ್‌ ವೀಕ್ಷಕರ ಸಭೆ: ಅಭಿಮಾನಿಗಳ ಖರ್ಚು ವೆಚ್ಚವೂ ‘ಅಭ್ಯರ್ಥಿ’ ಖಾತೆಗೆ

ಒಂದೇ ಧ್ವಜಕ್ಕೆ ಪ್ರತಿನಿತ್ಯ ‘ಖರ್ಚು’

Published:
Updated:
Prajavani

ಹಾವೇರಿ: ‘ಕಾರ್ಯಕರ್ತರು ಒಂದು ಧ್ವಜವನ್ನು ಖರೀದಿಸಿ, ಪ್ರತಿನಿತ್ಯವೂ ಅದನ್ನೇ ಪ್ರಚಾರಕ್ಕೆ ಒಯ್ಯುತ್ತಾರೆ. ಆದರೆ, ಚುನಾವಣಾ ಅಧಿಕಾರಿಗಳು ಅದೇ ಧ್ವಜಕ್ಕೆ ಪ್ರತಿನಿತ್ಯವೂ ಪ್ರತ್ಯೇಕ ಖರ್ಚು ಹಾಕುತ್ತಾರೆ. ಇದರಿಂದ ಅಧಿಕ ಖರ್ಚು–ವೆಚ್ಚ ಬೀಳುತ್ತದೆ’ ಎಂದು ಬಿಜೆಪಿಯ ವಿಜಯಕುಮಾರ್ ಚಿನ್ನಿಕಟ್ಟಿ ಸೋಮವಾರ ಚುನಾವಣಾಧಿಕಾರಿಗಳ ಮುಂದೆ ಸಮಸ್ಯೆ ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಕಾರ್ಯಕರ್ತರಿಗೆ ನೀಡಿದ ಧ್ವಜವನ್ನು ವಾಪಸ್ ಪಡೆದಿರುವ ಬಗ್ಗೆ ವಿಡಿಯೋ ಸಾಕ್ಷ್ಯ ನೀಡಿ. ಆಗ ಹೆಚ್ಚುವರಿ ವೆಚ್ಚವನ್ನು ಕಳೆಯಲಾಗುವುದು’ ಎಂದು ಭರವಸೆ ನೀಡಿದರು. 

ಕೆಲವು ‘ಅಭಿಮಾನಿಗಳು’ ನಾವು ಕರೆಯದಿದ್ದರೂ, ಸ್ವಂತ ಖರ್ಚಿನಲ್ಲಿ ಪ್ರಚಾರಕ್ಕೆ ಬರುತ್ತಾರೆ. ಅಧಿಕಾರಿಗಳು ಅವರ ವಾಹನದ ಖರ್ಚನ್ನೂ ಅಭ್ಯರ್ಥಿ ಲೆಕ್ಕಕ್ಕೆ ಹಾಕುತ್ತಾರೆ. ಇದೂ ಹೊರೆಯಾಗುತ್ತದೆ’ ಎಂದು ಚಿನ್ನಿಕಟ್ಟಿ ಮತ್ತೆ ದೂರಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಅಭಿಮಾನಿ, ಸ್ವಾಭಿಮಾನಿ ಸೇರಿದಂತೆ ಯಾರೇ ಪ್ರಚಾರಕ್ಕೆ ಬಂದರೂ, ಅಭ್ಯರ್ಥಿಗೆ ವೆಚ್ಚವನ್ನು ಹಾಕಲಾಗುವುದು. ಇಲ್ಲದಿದ್ದರೆ, ಎಲ್ಲರೂ ಅಭಿಮಾನಿಗಳ ಹೆಸರಿನಲ್ಲಿ ತಪ್ಪಿಸಿಕೊಳ್ಳಬಹುದು’ ಎಂದರು.

–ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಭ್ಯರ್ಥಿ–ಏಜೆಂಟ್‌ಗಳ ಜೊತೆ ಅಧಿಕಾರಿಗಳು ನಡೆಸಿದ ಸಮನ್ವಯ ಸಭೆಯಲ್ಲಿ ಕೇಳಿಬಂದ ಸ್ವಾರಸ್ಯಕರ ಪ್ರಶ್ನೆಗಳು. ಅಧಿಕಾರಿಗಳು ಗೊಂದಲ ಪರಿಹರಿಸಿದರು. 

‘ವಾಹನಕ್ಕೆ ಅನುಮತಿ ಪಡೆದರೂ, ಧ್ವಜ, ಸ್ಟಿಕರ್‌, ಬ್ಯಾನರ್‌ಗೆ ಅನುಮತಿ ಇದೆಯೇ?’ ಎಂದು ಚೆಕ್‌ ಪೋಸ್ಟ್ ಸಿಬ್ಬಂದಿ ಚಾಲಕರನ್ನು ಸತಾಯಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಚಿನ್ನಿಕಟ್ಟಿ ಮನವಿ ಮಾಡಿದರು.

ಕಾಂಗ್ರೆಸ್‌ನ ವಿ.ವಿ. ಪಾಟೀಲ ಮಾತನಾಡಿ, ‘ಎಲ್‌ಇಡಿ ಪರದೆಯ ವಾಹನಕ್ಕೆ ಮುಂದಿನ ಹತ್ತು ದಿನಗಳ ವೆಚ್ಚವನ್ನು ಈಗಾಗಲೇ ಹಾಕಿದ್ದಾರೆ. ನಾವು ಬಳಸಿದ ದಿನದಂದು ಮಾತ್ರ ಲೆಕ್ಕ ಹಾಕಿ’ ಎಂದರು. ಇದಕ್ಕೆ ಲೆಕ್ಕ ವೆಚ್ಚ ವೀಕ್ಷಕರು ಸಹಮತ ಸೂಚಿಸಿದರು.

ಅನುಮತಿ ಪಡೆಯಿರಿ:

ಸಭೆ-ಸಮಾರಂಭ, ಧ್ವನಿವರ್ಧಕ ಬಳಕೆ ಅಥವಾ ವಾಹನಕ್ಕೆ ಆಯೋಗದ ಮಾರ್ಗಸೂಚಿಯಂತೆ ಅನುಮತಿ ಪಡೆಯಬೇಕು.  ಯಾವುದೇ ತೊಡಕಿದ್ದರೂ ಸಹಾಯವಾಣಿ (1950) ಕರೆಮಾಡಿ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಸಭೆ-ಸಮಾರಂಭಗಳನ್ನು ನಡೆಸಬಾರದು. ಚುನಾವಣೆಗೆ ಸಂಬಂಧಿಸಿದಂತೆ ಭೋಜನ ವ್ಯವಸ್ಥೆಯೂ ಮಾಡಬಾರದು. ಈ ಕುರಿತು ದೂರುಗಳು ಬಂದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಮತದಾನಕ್ಕೆ ಒಪ್ಪಿಗೆ

ಆಣೂರ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದ ಬ್ಯಾಡಗಿಯ ರೈತರು, ಕೇಂದ್ರ ವೀಕ್ಷಕರ ಮನವೊಲಿಕೆಗೆ ಸ್ಪಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಯಾವುದೇ ದೂರುಗಳಿದ್ದರೂ ಕರೆ ಮಾಡಿ. ಸಾಕ್ಷ್ಯಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾಮಾನ್ಯ ವೀಕ್ಷಕ ಡಾ.ಅಖ್ತರ್ ರಿಯಾಜ್ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಶೇ 60 ರಷ್ಟು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು. 

‘ಭದ್ರತೆಯ ಕುರಿತು ಯಾವುದೇ ಗೊಂದಲಗಳಿದ್ದರೆ ಕರೆ ಮಾಡಿ’ ಎಂದು ಪೊಲೀಸ್ ವೀಕ್ಷಕ ಸಿದ್ಧಾರ್ಥ ನಾರವನೆ ತಿಳಿಸಿದರು. 

ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಮಾತನಾಡಿ, ಖರ್ಚು–ವೆಚ್ಚಗಳನ್ನು ಆ ದಿನವೇ ಬರೆಯಬೇಕು. ಪಾರದರ್ಶಕವಾಗಿ ವೆಚ್ಚದ ವಿವರಗಳನ್ನು ದಾಖಲಿಸಬೇಕು. ವಾಸ್ತವ ವಿವರಗಳನ್ನೇ ನೀಡಬೇಕು ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !