ಶುಕ್ರವಾರ, ಡಿಸೆಂಬರ್ 6, 2019
17 °C
336 ವ್ಯಕ್ತಿಗಳ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿ: ಎಸ್ಪಿ ಕೆ.ಜಿ.ದೇವರಾಜ ಹೇಳಿಕೆ

ಶಾಂತಿಯುತ ಮತದಾನಕ್ಕೆ ಕಟ್ಟುನಿಟ್ಟಿನ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಶಾಂತಿಯುತ ಮತ್ತು ಪಾರದರ್ಶಕವಾಗಿ ನಡೆಸಲು  ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ ಹೇಳಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾದರಿ ನೀತಿ ಸಂಹಿತೆ ಪಾಲನೆಗಾಗಿ 25 ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿ, 144 ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ರೀತಿ 6 ವಿಡಿಯೊ ಪರಿಶೀಲನಾ ತಂಡ, 18 ಫ್ಲೈಯಿಂಗ್ ಸ್ಕ್ವಾಡ್‌, 4 ವೆಚ್ಚ ಪರಿಶೀಲನಾ ತಂಡ, 2 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಒಟ್ಟು 20 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಇಬ್ಬರು ಎಸ್ಪಿ, 4 ಡಿವೈಎಸ್ಪಿ, 12 ಇನ್‌ಸ್ಪೆಕ್ಟರ್‌, 30 ಸಬ್‌ ಇನ್‌ಸ್ಪೆಕ್ಟರ್‌, 85 ಎಎಸ್‌ಐ, 276 ಹೆಡ್‌ ಕಾನ್‌ಸ್ಟೆಬಲ್‌, 537 ಕಾನ್‌ಸ್ಟೆಬಲ್‌ಗಳು ಸೇರಿದಂತೆ 1,453 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಗುಜರಾತ್‌ ಎಸ್‌ಎಪಿಯ 4 ಕಂಪನಿಗಳು ಜಿಲ್ಲೆಗೆ ಆಗಮಿಸಿವೆ. ಇವುಗಳ ಜತೆ, 10 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ, 8 ಕೆಎಸ್‌ಆರ್‌ಪಿ ತುಕಡಿ, 4 ಸಿಆರ್‌ಪಿಎಫ್‌ ತುಕುಡಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಮತದಾನ ಮುಕ್ತಾಯಗೊಳ್ಳುವ ಸಮಯಕ್ಕೆ 48 ಗಂಟೆ ಮೊದಲು, ಅಂದರೆ ಡಿ.3ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಕ್ಷೇತ್ರದ ಮತದಾರರಲ್ಲದವರು ಎರಡೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಿಂದ ಹೊರಗೆ ಹೋಗುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅನುಮತಿ ಇಲ್ಲದ ವಾಹನಗಳ ಬಳಕೆಗೆ ಅವಕಾಶವಿರುವುದಿಲ್ಲ. ಮತಗಟ್ಟೆಗಳ ನಿಗದಿತ ವ್ಯಾಪ್ತಿಯೊಳಗೆ ಮತದಾನದ ದಿನದಂದು ಯಾವುದೇ ಚುನಾವಣಾ ಪ್ರಚಾರಕ್ಕೆ ಅವಕಾಶವಿರುವುದಿಲ್ಲ ಹಾಗೂ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮೊಬೈಲ್‍ಗಳ ಬಳಕೆ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಗಡಿಭಾಗದಲ್ಲಿ ಕಟ್ಟೆಚ್ಚರ: ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಇರುವ ಚೆಕ್ ಪೋಸ್ಟ್‌ಗಳಲ್ಲಿ ಹೊರಗಿನ ಜಿಲ್ಲೆಯಿಂದ ಬರುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಲು ಆದೇಶಿಸಲಾಗಿದೆ. ಡಿ.3ರ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯ ಗಡಿ ಭಾಗದ ವಿವಿಧ ಪ್ರದೇಶಗಳಲ್ಲಿ ಮದ್ಯಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು. 

ಅಬಕಾರಿ ಇಲಾಖೆ ಉಪ ಅಧೀಕ್ಷಕ ನಾಗಶಯನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು