ಹಾವೇರಿ: ಮಳೆಯ ಏರುಪೇರು, ಕೈಕೊಡುವ ಬೆಳೆ ಹಾಗೂ ಸಾಲಭಾದೆಯಿಂದ ಬೇಸತ್ತು ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದು, ಇದರಿಂದಾಗಿ ಕೃಷಿ ಕ್ಷೇತ್ರಕ್ಕೆ ಬರಲು ಯುವಜನತೆ ಹಿಂಜರಿಯುತ್ತಿದ್ದಾರೆ. ರೈತಾಪಿ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವಜನತೆಯಲ್ಲಿ ಆತಂಕ ಮೂಡಿಸಿದೆ.

ಮಲೆನಾಡು ಹಾಗೂ ಬಯಲು ಸೀಮೆ ಎರಡೂ ಕೃಷಿ ಪ್ರದೇಶವನ್ನು ಹೊಂದಿರುವ ಹಾವೇರಿ ಜಿಲ್ಲೆಯ ವಾತಾವರಣದಲ್ಲಿ ಪ್ರತಿ ವರ್ಷವೂ ಏರು ಪೇರು ಉಂಟಾಗುತ್ತಿದೆ. ಒಂದು ವರ್ಷ ಅತಿಯಾದ ಮಳೆಯಿಂದ ಬೆಳೆ ಹಾನಿಯಾದರೆ, ಮತ್ತೊಂದು ವರ್ಷ ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಜಿಲ್ಲೆಯಲ್ಲಿ ಕೃಷಿಗೆ ಬೇಕಾಗುವ ನೀರು ಪೂರೈಸುವ ದೊಡ್ಡ ಯೋಜನೆಗಳ ಅನುಷ್ಠಾನವಿಲ್ಲ. ಅಲ್ಲಲ್ಲಿ ನೀರಾವರಿ ಯೋಜನೆಗಳಿದ್ದರೂ ಅವುಗಳ ವ್ಯಾಪ್ತಿ ಚಿಕ್ಕದಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ಬಹುತೇಕ ರೈತರು, ಮಳೆಯಾಶ್ರಿತ ಬೆಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ.

ಇನ್ನು ಕೆಲವರು, ಕೊಳವೆ ಬಾವಿ ಕೊರೆಸಿ ನೀರಾವರಿ ಬೇಸಾಯ ಮಾಡುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಮಾತ್ರ ಕೊಳವೆ ಬಾವಿಯಲ್ಲಿ ಉತ್ತಮವಾಗಿ ನೀರು ಬರುತ್ತಿದ್ದು, ಬೇಸಿಗೆಯಲ್ಲಿ ಬಹುತೇಕ ಕಡೆ ಕೊಳವೆ ಬಾವಿಗಳು ಬತ್ತುತ್ತಿವೆ. ಇದರಿಂದಾಗಿ ನೀರಾವರಿ ಬೇಸಾಯವೂ ರೈತರಿಗೆ ಲಾಭ ತಂದುಕೊಡುತ್ತಿಲ್ಲ. ಇದು ರೈತರ ಬೇಸರಕ್ಕೆ ಕಾರಣವಾಗಿದೆ. ರೈತರ ಯಾವುದೇ ಸಮಸ್ಯೆಯಿದ್ದರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಜಿಲ್ಲೆಯಲ್ಲಿದೆ.

ಬೀಜ–ಗೊಬ್ಬರಕ್ಕಾಗಿ 2008ರಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದ್ದ ಹೋರಾಟದ ಸಂದರ್ಭದಲ್ಲಿ ಗೋಲಿಬಾರ್ ನಡೆದು ರೈತರಾದ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಮೃತಪಟ್ಟಿದ್ದರು. ಈ ಘಟನೆ ಬಳಿಕವೂ ಕೃಷಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಳು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರೇ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಇವರಲ್ಲಿ ಬಹುತೇಕರು ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ಅದಕ್ಕಾಗಿ ಸಾಲ ಮಾಡಿಕೊಳ್ಳುತ್ತಿದ್ದಾರೆ. ಮಳೆಯಲ್ಲಿ ವ್ಯತ್ಯಾಸವಾಗಿ ಬೆಳೆ ಹಾನಿಯಾದರೆ, ನಷ್ಟ ಅನುಭವಿಸಿ ಕಣ್ಣೀರಿಡುತ್ತಿದ್ದಾರೆ.

ಬೆಳೆ ಹಾನಿ ಉಂಟಾದರೆ ಸರ್ಕಾರದಿಂದ ಅಲ್ಪಪ್ರಮಾಣದಲ್ಲಿ ಪರಿಹಾರ ಸಿಗುತ್ತಿದೆ. ಆದರೆ, ಸಾಲ ನೀಡಿದವರು ಮರುಪಾವತಿಗಾಗಿ ಒತ್ತಾಯಿಸುತ್ತಿದ್ದಾರೆ. ಸಾಲ ತೀರಿಸುವುದು ಹೇಗೆ? ಹಾಗೂ ಕೃಷಿ ಸಂಬಂಧಿತ ಇತರೆ ಸಮಸ್ಯೆಗಳಿಂದ ಬೇಸತ್ತು ಅದರ ಚಿಂತೆಯಲ್ಲಿಯೇ ರೈತರು ಮನೆ ಹಾಗೂ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ.

‘2025ರ ಜನವರಿ 1ರಿಂದ ನವೆಂಬರ್ 15ರವರೆಗೆ ಹಾವೇರಿ ಜಿಲ್ಲೆಯಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 9 ವರದಿಗಳನ್ನು ತಿರಸ್ಕರಿಸಿದ್ದು, ರೈತ ಆತ್ಮಹತ್ಯೆಗೆ ಕೃಷಿ ವಿಚಾರ ಕಾರಣವಲ್ಲವೆಂದು ತಿಳಿಸಿದ್ದಾರೆ. ಉಳಿದ 26 ರೈತ ಆತ್ಮಹತ್ಯೆಗಳನ್ನು ಪರಿಶೀಲಿಸಿ, ಅದರಲ್ಲಿ 15 ರೈತರಿಗೆ ಈಗಾಗಲೇ ಪರಿಹಾರ ಕೊಡಿಸಿದ್ದಾರೆ. ಉಳಿದ ಪ್ರಕರಣಗಳ ಪರಿಶೀಲನೆ ಚಾಲ್ತಿಯಲ್ಲಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಹಾವೇರಿಗೆ ಎರಡನೇ ಸ್ಥಾನ: ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ಜೊತೆಗೆ, ರೈತರ ಆತ್ಮಹತ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಹಾವೇರಿ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದೆ. ಮೊದಲ ಸ್ಥಾನದಲ್ಲಿ ಕಲಬುರಗಿ (40 ರೈತರ ಆತ್ಮಹತ್ಯೆ) ಜಿಲ್ಲೆಯಿದೆ.

ಹಾವೇರಿ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 105 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ₹ 5.25 ಕೋಟಿ ಪರಿಹಾರ ನೀಡಲಾಗಿದೆ. 2024–25ರಲ್ಲಿ 131 ರೈತರಿಗೆ ₹ 6.55 ಕೋಟಿ ಹಾಗೂ 2025–26ನೇ ಸಾಲಿನಲ್ಲಿ 15 ರೈತರಿಗೆ ₹ 75 ಲಕ್ಷ ಪರಿಹಾರ ವಿತರಿಸಲಾಗಿದೆ.

ರಾಜ್ಯದಲ್ಲಿ 377 ರೈತರ ಆತ್ಮಹತ್ಯೆ

‘ರಾಜ್ಯದಲ್ಲಿ ಜನವರಿ 1ರಿಂದ ನವೆಂಬರ್ 15ರ ವರೆಗೆ 377 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಈ ಪೈಕಿ 46 ವರದಿಗಳನ್ನು ತಿರಸ್ಕರಿಸಲಾಗಿದೆ. 331 ವರದಿಗಳ ಪೈಕಿ 310 ರೈತರಿಗೆ ಈಗಾಗಲೇ ಪರಿಹಾರ ಕೊಡಿಸಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಆತ್ಮಹತ್ಯೆ ತಡೆಗೆ ಸಹಾಯವಾಣಿ

ಹಾವೇರಿ ಜಿಲ್ಲೆಯಲ್ಲಿ ರೈತರ ಹಿತ ಕಾಯಲು ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ರೈತರನ್ನು ಕಾಪಾಡಲು ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದಾರೆ. ‘ಕೃಷಿಯಲ್ಲಿ ಉಂಟಾಗುತ್ತಿರುವ ಆರ್ಥಿಕ ಸಂಕಷ್ಟದಿಂದಾಗಿ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇಂಥ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿ (9480124365 9483124365) ಆರಂಭಿಸಲಾಗಿದೆ. ಯಾರೇ ರೈತರು ತೊಂದರೆಯಿದ್ದರೆ ಸಹಾಯವಾಣಿಗೆ ಕರೆ ಮಾಡಬಹುದು. ರೈತರ ಪ್ರತಿಯೊಂದು ಸಮಸ್ಯೆಗೂ ಸಂಘದ ಮೂಲಕ ಪರಿಹಾರ ಕೊಡಿಸುವ ಕೆಲಸವಾಗಲಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.