ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಡಿ.ಸಿ ಕಚೇರಿಗೆ ಮುತ್ತಿಗೆ ಜ.28ರಂದು

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ ಚಳವಳಿ: ಆರ್‌.ವಿ.ಕೆಂಚಳ್ಳೇರ ಹೇಳಿಕೆ
Last Updated 23 ಜನವರಿ 2020, 15:43 IST
ಅಕ್ಷರ ಗಾತ್ರ

ಹಾವೇರಿ: ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ವಿಮೆ ತಾರತಮ್ಯ ಸರಿಪಡಿಸಿ ಹಣ ವಿತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜ.28ರಂದು ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ ಹತ್ತಿರ ರಸ್ತೆ ತಡೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ವಿ. ಕೆಂಚಳ್ಳೇರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಕಿಸಾನ್‌ ಸಮ್ಮಾನ್‌’ ಯೋಜನೆಯಡಿ ಜಿಲ್ಲೆಯ ಸುಮಾರು 86 ಸಾವಿರ ರೈತರಿಗೆ ಹಣ ಜಮಾ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ರೈತರು ತಹಶೀಲ್ದಾರ್‌ ಕಚೇರಿ, ಬ್ಯಾಂಕುಗಳಿಗೆ ಅಲೆಯುತ್ತಿದ್ದಾರೆ ಎಂದು ದೂರಿದರು.

ರೈತರು ಬರಗಾಲ, ಅತಿವೃಷ್ಟಿಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 2016–17 ಮತ್ತು 2018–19ನೇ ಸಾಲಿನ ಸುಮಾರು ₹15 ಕೋಟಿ ಬ್ಯಾಂಕಿನಲ್ಲಿ ಕೊಳೆಯುತ್ತಿದ್ದರೂ ರೈತರ ಖಾತೆಗೆ ಹಾಕಿಲ್ಲ. 2019–20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ತುಂಬಿದ ಎಲ್ಲರಿಗೂ ಶೇ 25ರಷ್ಟು ವಿಮೆ ನೀಡಬೇಕು ಎಂದು ಸರ್ಕಾರ ₹49 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕೂಡಲೇ ಆ ಹಣವನ್ನು ಜಿಲ್ಲಾಡಳಿತ ರೈತರ ಖಾತೆಗೆ ಹಾಕಬೇಕು ಎಂದು ಆಗ್ರಹಿಸಿದರು.

ಸಾಲಮನ್ನಾ:

ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರಿಗೆ ₹2,050 ಕೋಟಿ ಸಾಲಮನ್ನಾವನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಲ್ಲಿ ₹450 ಕೋಟಿಯನ್ನು ಕೆಲವು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಇನ್ನೂ ₹1,600 ಕೋಟಿ ಜಮಾ ಆಗಿಲ್ಲ. ಬೆಳೆ ಕಳೆದುಕೊಂಡಿರುವ ರೈತರು ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಮಾಡಬೇಕು ಎಂದು ಮನವಿ ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ,ಕೃಷಿ ಸಾಲ ವಸೂಲಿ ಮಾಡಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಪಿಕಾರ್ಡ್‌ ಬ್ಯಾಂಕ್‌ನಲ್ಲಿ ರಾಜ್ಯದ ಒಟ್ಟು 73,660 ರೈತರ ಕೃಷಿ ಸಾಲವು ಅಸಲು, ಬಡ್ಡಿ, ದಂಡ ಎಲ್ಲ ಸೇರಿ ₹658 ಕೋಟಿ ಇದೆ. ಈ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬ್ಯಾಂಕ್‌ ಅಧಿಕಾರಿಗಳು ಕೃಷಿ ಸಾಲ ವಸೂಲಿ ಮಾಡಲು ಹಳ್ಳಿಗಳಿಗೆ ಬಂದರೆ, ಅವರನ್ನು ಕಟ್ಟಿ ಹಾಕಿ ಶಿಕ್ಷೆ ನೀಡಬೇಕಾಗುತ್ತದೆ ಎಮದು ಎಚ್ಚರಿಕೆ ನೀಡಿದರು.

ನೆರೆ ಪರಿಹಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಪರಿಹಾರ ನೀಡಿದ್ದಾರೆ. ಬೆಳೆ ನಾಶವಾದ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯ 48 ಸಾವಿರ ರೈತರಿಗೆ ಪರಿಹಾರವೇ ಮುಟ್ಟಿಲ್ಲ. ಮನೆ ಕಳೆದುಕೊಂಡ ಬಡವರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT