ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿ ಮುಂದೆ ರೈತರ ಪ್ರತಿಭಟನೆ

Last Updated 18 ಮೇ 2022, 10:41 IST
ಅಕ್ಷರ ಗಾತ್ರ

ಹಾವೇರಿ: ರೈತರಿಗೆ ಮಾರಕವಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲೂ ವಾಪಸ್‌ ಪಡೆಯುವಂತೆ ಆಗ್ರಹಿಸಿ ಬುಧವಾರ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ಮಂಭಾಗ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಸಮೀಪ ಬೆಳಿಗ್ಗೆ ಜಮಾವಣೆಗೊಂಡ ರೈತರು ಬೈಕ್‌ ಮತ್ತು ಕಾರುಗಳ ಮೂಲಕ ‘ನಮ್ಮ ನಡೆದ ಶಿಗ್ಗಾವಿ ಕಡೆ’ ರ‍್ಯಾಲಿ ಆರಂಭಿಸಿದರು. ಹಾವೇರಿಯಿಂದ ಶಿಗ್ಗಾವಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿದ ರೈತರು ಶಿಗ್ಗಾವಿ ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ಮಧ್ಯಾಹ್ನ ಒಗ್ಗೂಡಿದರು. ಅಲ್ಲಿಗೆ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬಂದ ರೈತರು ಸೇರ್ಪಡೆಯಾದರು.

ಅಲ್ಲಿಂದ ಪಾದಯಾತ್ರೆ ಮೂಲಕ ಶಿಗ್ಗಾವಿಯ ಚನ್ನಮ್ಮ ವೃತ್ತ ತಲುಪಿ, ಅಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಮೊಳಗಿಸಿದರು. ನಂತರ ಅಲ್ಲಿಂದ ಪ್ರವಾಸಿ ಮಂದಿರ ಸಮೀಪವಿರುವ ಮುಖ್ಯಮಂತ್ರಿ ಕಚೇರಿಯತ್ತ ತೆರಳಿ, ಅಲ್ಲಿಯೇ ಧರಣಿ ಕುಳಿತು ಸಭೆ ನಡೆಸಿದರು. ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಬೇಕು. ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದ್ದು, ರಾಜ್ಯ ಸರ್ಕಾರ ವಾಪಸ್‌ ಪಡೆಯಲು ಇನ್ನೂ ಮೀನ ಮೇಷ ಎಣಿಸುತ್ತಿದೆ. ಎರಡು–ಮೂರು ಅಧಿವೇಶನಗಳು ನಡೆದರೂ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವ ಗೋಜಿಗೆ ಸರ್ಕಾರ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಹಾವೇರಿ ಜಿಲ್ಲೆಯವರೇ ಅಗಿದ್ದರೂ, ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸೋಮವಾರ ಜಿಲ್ಲಾಧಿಕಾರಿ ಅವರು ಹಾವೇರಿಯಲ್ಲಿ ನಡೆಸಿದ ಸಭೆಯಲ್ಲಿ ರೈತರ ನಿರ್ಧಾರವನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆವು. ಹೀಗಾಗಿ ಬುಧವಾರ ನೂರಾರು ರೈತರೊಂದಿಗೆ ತೆರಳಿ ಧರಣಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ಪ್ರಮುಖ ಬೇಡಿಕೆಗಳು

ರಾಜ್ಯದಾದ್ಯಂತ ಗೋವಿನ ಜೋಳ, ರಾಗಿ ಮತ್ತು ಇತರ ಬೆಳೆಗಳಿಗೆ ಖರೀದಿ ಕೇಂದ್ರ ಆರಂಭಿಸಬೇಕು. ಬೆಳೆ ವಿಮೆಯಲ್ಲಿ ಆಗುತ್ತಿರುವ ಹಗರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ರಾಜ್ಯದಾದ್ಯಂತ ಸುಮಾರು ₹100 ಕೋಟಿ ಕಬ್ಬಿನ ಬಿಲ್‌ ಬಾಕಿ ಶೀಘ್ರದಲ್ಲೇ ರೈತರಿಗೆ ಪಾವತಿಸಬೇಕು. ರಸಗೊಬ್ಬರ ಮತ್ತು ಬಿತ್ತನೆಬೀಜ ಅಭಾವ ನೀಗಿಸಿ, ಸಕಾಲದಲ್ಲಿ ರೈತರಿಗೆ ವಿತರಿಸಬೇಕು. 2021–22ರಲ್ಲಿ ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡಬೇಕು. ಸರ್ಕಾರದ ಆದೇಶದಂತೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ರೈತ ಮುಖಂಡರಾದ ಎಂ.ಎನ್.ನಾಯಕ, ಚನ್ನಪ್ಪ ಮರಡೂರ, ರಾಜು ತರ್ಲಘಟ್ಟ, ಮುತ್ತು ಗುಡಗೇರಿ, ನೂರ್‌ ಅಹಮದ್‌ ಮುಲ್ಲಾ ಸೇರಿದಂತೆ ನೂರಾರು ರೈತರು ಧರಣಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT