ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರ ಪ್ರತಿನಿಧಿಯಾಗಿ ಹೋರಾಟ: ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ

ಚಳಗೇರಿ ಗ್ರಾಮದಲ್ಲಿ ಜಾಗೃತಿ ಸಮಾವೇಶ
Last Updated 19 ಜನವರಿ 2021, 1:46 IST
ಅಕ್ಷರ ಗಾತ್ರ

ಕುಮಾರಪಟ್ಟಣ (ಚಳಗೇರಿ): ‘ನಾನು ರಾಜಕೀಯ ವ್ಯಕ್ತಿಯಲ್ಲ, ಮುಖ್ಯಮಂತ್ರಿ ಆಗಬೇಕೆನ್ನುವ ಆಸೆಯಿಲ್ಲ. ಹಾಲುಮತ ಸಮಾಜದ ಜನರ ಸಂವಿಧಾನಬದ್ಧ ಹಕ್ಕುಗಳಿಗಾಗಿ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಟ ಆರಂಭಿಸಿದ್ದೇವೆ’ ಎಂದು ಕಾಗಿನೆಲೆ ಗುರು ಕನಕಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಪಾದಯಾತ್ರೆಯ ನಾಲ್ಕನೇ ದಿನದಂದು ಸಮೀಪದ ಚಳಗೇರಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಟಿ ಮೀಸಲಾತಿ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ನಮ್ಮ ಹೋರಾಟವನ್ನು 8-10 ವರ್ಷಗಳ ಹಿಂದೆಯೇ ಪ್ರಾರಂಭಿಸುವ ಉದ್ದೇಶವಿತ್ತು. ಆದರೆ ಈಗ ಕಾಲ ಕೂಡಿ ಬಂದಿದೆ’ ಎಂದರು.

‘ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದೆ ಉಳಿದಿದೆ. ಕಟ್ಟ ಕಡೆಯ ಕುರುಬನಿಗೆ ಎಸ್‌ಟಿ ಮೀಸಲಾತಿ ದೊರೆಯುವಂತೆ ಈ ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಹಕ್ಕೊತ್ತಾಯ ಮಾಡಲಾಗುತ್ತಿದೆ. ಇದರಿಂದ ಇದರಿಂದ ಸಮಾಜದ ಬಂಧುಗಳಂತೆ ಹಾಲುಮತ ಸಮುದಾಯವೂ ಮುಖ್ಯವಾಹಿನಿಗೆ ಬರಲಿದೆ’ ಎಂದರು

‘ರಾಜ್ಯಾದ್ಯಂತ ಹೋರಾಟಕ್ಕೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಸಮಾಜದ ಬಂಧುಗಳು ಎತ್ತಿನ ಗಾಡಿ, ಕುರಿ, ಕುರಿಗಳ ಹಿಂಡಿನ ಜತೆಗೆ ಕಂಬಳಿ ಹೊದ್ದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತರೆ ಸಮುದಾಯದ ಎಲ್ಲ ಮುಖಂಡರು ಸಹಕಾರ ನೀಡುತ್ತಿರುವದನ್ನು ನೋಡಿದರೆ ಫೆ.7ರಂದು ಬೆಂಗಳೂರಿನಲ್ಲಿ ಜರುಗುವ ಬೃಹತ್‌ ಸಮಾವೇಶದಲ್ಲಿ ಹೋರಾಟಕ್ಕೆ ಪ್ರತಿಫಲ ದೊರೆಯಲಿದೆ’ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಪಾದಯಾತ್ರೆಯಲ್ಲಿ ಬೆಂಗಳೂರಿನವರೆಗೂ ಶ್ರೀಗಳ ಜೊತೆಗಿದ್ದು, ಮೀಸಲಾತಿ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಒಂದು ಹೋರಾಟದ ಉದ್ದೇಶ ಈಡೇರದೆ ಹೋದರೆ ಶಾಸಕ ಸ್ಥಾನಕ್ಕೆರಾಜಿನಾಮೆ ನೀಡಲು ಸಿದ್ಧನಿದ್ದೇನೆ ಎಂದರಲ್ಲದೆ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರ ಊಟ, ಉಪಹಾರಕ್ಕಾಗಿ ₹ 10 ಲಕ್ಷ, ಫೆ.7ರಂದು ರಾಜಧಾನಿಯಲ್ಲಿ ಜರುಗುವ ಸಮಾವೇಶಕ್ಕೆ ಬಸ್ಸುಗಳ ವ್ಯವಸ್ಥೆಗೆ ₹ 10 ಲಕ್ಷ ನೀಡುವುದಾಗಿ ಹೇಳಿದರು.

ಕಾಗಿನೆಲೆ ಕನಕಪೀಠದ ಶಾಖಮಠಗಳ ಶ್ರೀಗಳು, ನೂತನ ಸಚಿವ ಆರ್‌.ಶಂಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕುರುಬ ಸಮುದಾಯದ ಹಲವು ಮುಖಂಡರು ಪಾದಯಾತ್ರೆಯಲ್ಲಿ ಶ್ರೀಗಳೊಂದಿಗೆ ಹೆಜ್ಜೆ ಹಾಕಿದರು.

ಕವಲೆತ್ತಿನಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳು ಎಳನೀರು ಸೇವಿಸಿ ಧಣಿವಾರಿಸಿಕೊಂಡರು. ಬಳಿಕ ಪಾದಯಾತ್ರೆ ಹರಿಹರ ನಗರದತ್ತ ಸಾಗಿತು. ಪಾದಯಾತ್ರೆ ಸಾಗಿದ ಹಾದಿಯುದ್ದಕ್ಕೂ ಮಹಿಳೆಯರು, ಮಕ್ಕಳು ಆರತಿ ಎತ್ತಿ ಸ್ವಾಗತಿಸಿದರೆ, ಇನ್ನು ಸಮುದಾಯದ ಜನರು ಜನಜಂಗುಳಿ ನಡುವೆಯೇ ಶ್ರೀಗಳ ಕಾಲಿಗೆ ಎರಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT