ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಅಡ್ಡಗಟ್ಟಿದವರ ವಿರುದ್ಧ ಎಫ್‌ಐಆರ್

Published : 1 ಸೆಪ್ಟೆಂಬರ್ 2024, 13:16 IST
Last Updated : 1 ಸೆಪ್ಟೆಂಬರ್ 2024, 13:16 IST
ಫಾಲೋ ಮಾಡಿ
Comments

ಹಾವೇರಿ: ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದ ಸಂದರ್ಭದಲ್ಲಿ ಅವರ ಕಾರು ಅಡ್ಡಗಟ್ಟಿದ್ದ ಆರೋಪದಡಿ ಕರಿಯಪ್ಪ ಕುದರಿಹಾಳ ಹಾಗೂ ಇತರರ ವಿರುದ್ಧ ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಮುಖ್ಯಮಂತ್ರಿ ಅವರ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಚನ್ನಬಸಪ್ಪ ಹಡಪದ ಅವರು ದೂರು ನೀಡಿದ್ದರು. ಅದರನ್ವಯ ಕಾಕೋಳ ನಿವಾಸಿ ಕರಿಯಪ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಆಗಸ್ಟ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಹನದಲ್ಲಿ ಕಾಕೋಳ ಗ್ರಾಮದ ಕಡೆಯಿಂದ ದೇವರಗುಡ್ಡದತ್ತ ಹೊರಟಿದ್ದರು. ದೇವರಗುಡ್ಡದ ದ್ವಾರಬಾಗಿಲು ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೋಟೊ ಸಮೇತ ಬೋರ್ಡ್ ಇರಿಸಿದ್ದ ಆರೋಪಿ ಕರಿಯಪ್ಪ ಹಾಗೂ ಇತರರು, ಅದಕ್ಕೆ ಹೂವಿನ ಮಾಲೆ ಹಾಕಿ ಅಲಂಕರಿಸಿದ್ದರು. ಇದೇ ಬೋರ್ಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೂವಿನ ಹಾರ ಹಾಕಿಸಬೇಕೆಂದು ಆರೋಪಿಗಳು ಇಚ್ಛಿಸಿದ್ದರು.’

‘ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಅವರ ಕಾರು ದ್ವಾರಬಾಗಿಲು ಬಳಿ ಬರುತ್ತಿದ್ದಂತೆ, ಒಮ್ಮಿಂದೊಮ್ಮೆಲೆ ಆರೋಪಿಗಳು ಅಡ್ಡಗಟ್ಟಿದ್ದರು. ಕಾರು ನಿಲ್ಲಿಸಿ, ಮುಖ್ಯಮಂತ್ರಿ ಅವರ ಕಾರಿಗೆ ಹಿಂದಿನಿಂದ ಬರುತ್ತಿದ್ದ ವಾಹನಗಳಿಂದ ಅಪಾಯ ಉಂಟಾಗುವ ಸಂದರ್ಭ ಸೃಷ್ಟಿಸಿದ್ದರು. ಇದರಿಂದ ಎಚ್ಚೆತ್ತ ಕರ್ತವ್ಯದಲ್ಲಿದ್ದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಮುಖ್ಯಮಂತ್ರಿ ಕಾರು ಮುಂದಕ್ಕೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT