ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಎಲ್ಲರೂ ಕೈಜೋಡಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Last Updated 13 ಜನವರಿ 2022, 13:29 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಬಾಕಿ ಉಳಿದಿರುವ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎರಡನೇ ಡೋಸ್ ಬಾಕಿ ಉಳಿದಿರುವ ಜನರಿಗೆ ವೇಗವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಾಕೀತು ಮಾಡಿದರು.

ತಾಲ್ಲೂಕು ಆಡತಗಳೊಂದಿಗೆ ವರ್ಚುವಲ್ ಸಭೆಯ ಮೂಲಕ ತಾಲ್ಲೂಕುವಾರು ಕೋವಿಡ್ ಲಸಿಕಾ ಪ್ರಗತಿಯ ಮಾಹಿತಿ ಪಡೆದ ಅವರು, ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ಲಸಿಕಾ ಪ್ರಮಾಣ ಕಡಿಮೆಯಾಗಬಾರದು. ಭಾನುವಾರ ಹೊರತುಪಡಿಸಿ ವಾರಾಂತ್ಯದ ಕರ್ಫ್ಯೂಸಂದರ್ಭದಲ್ಲೂ ಲಸಿಕೆ ನೀಡುವ ಕಾರ್ಯಕ್ರಮ ನಿಲ್ಲಬಾರದು. ನಿತ್ಯ ಕನಿಷ್ಠ 20 ಸಾವಿರ ಜನರಿಗೆ ಲಸಿಕೆ ನೀಡಿ ನಿಗದಿತ ಕಾಲಮಿತಿಯೊಳಗೆ ಲಸಿಕೆ ನೀಡುವ ಕಾರ್ಯಕ್ರಮ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.

ಲಸಿಕೆ ಪಡೆಯಲು ಬಾಕಿ ಉಳಿದಿರುವ ಶಾಲಾ-ಕಾಲೇಜು ಮಕ್ಕಳನ್ನು ಗುರುತಿಸಿ ಅವರ ಮನೆಯಿಂದ ಶಾಲೆಗೆ ಕರೆತಂದು ಲಸಿಕೆ ಹಾಕಬೇಕು. ಮತ್ತು ಅವರ ಪಾಲಕರೂ ಲಸಿಕೆ ಪಡೆಯದಿದ್ದರೆ ಅವರಿಗೂ ಲಸಿಕೆ ಹಾಕಬೇಕು. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಮನವೊಲಿಸಿ ಪ್ರತಿಶತ ನೂರರಷ್ಟು ಲಸಿಕೆ ಹಾಕಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಶಾಲೆಯಿಂದ ಯಾವ ಮಕ್ಕಳೂ ಹೊರಗುಳಿಯಬಾರದು. ಯಾರೂ ಕಲಿಕೆಯಿಂದ ದೂರ ಉಳಿಯಬಾರದು. ಈ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತನ್ನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ನಿಯಮಾವಳಿಯಂತೆ ಯಾವುದೇ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದರೆ ಆ ಶಾಲೆಗೆ ರಜೆ ನೀಡುವ ಕುರಿತಂತೆ ತಾಲೂಕಾ ಶಿಕ್ಷಣಾಧಿಕಾರಿಗಳು ಕ್ರಮವಹಿಸಬೇಕು. ಈ ಕುರಿತಂತೆ ಶಿಫಾರಸು ಮಾಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಮೇಲೆ ಹೆಚ್ಚಿನ ನಿಗಾವಹಿಸಿ ಆಗಾಗೆ ಮಾಹಿತಿ ಪಡೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೊದಲ ಡೋಸ್‌ ಶೇ 96.23 ಪ್ರಗತಿ

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಅವರು ಕೋವಿಡ್ ಲಸಿಕಾ ಪ್ರಗತಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಶೇ 96.23ರಷ್ಟು ಮೊದಲ ಡೋಸ್ ಹಾಗೂ ಶೇ 71.13 ರಷ್ಟು ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 83,723 ಮಕ್ಕಳ ಪೈಕಿ 59,249 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇ 70.76ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ರಾಣೆಬೆನ್ನೂರಿನಲ್ಲಿ ಶೇ 75.36, ಹಾನಗಲ್ ತಾಲ್ಲೂಕಿನಲ್ಲಿ ಶೇ 71.16, ಶಿಗ್ಗಾವಿ ತಾಲ್ಲೂಕಿನಲ್ಲಿ ಶೇ 70.95, ಬ್ಯಾಡಗಿ ತಾಲ್ಲೂಕಿನಲ್ಲಿ ಶೇ 70.65, ಸವಣೂರ ತಾಲ್ಲೂಕಿನಲ್ಲಿ ಶೇ 70.32, ಹಿರೇಕೆರೂರು ತಾಲ್ಲೂಕಿನಲ್ಲಿ ಶೇ 69.83 ಹಾಗೂ ಹಾವೇರಿ ತಾಲ್ಲೂಕಿನಲ್ಲಿ ಶೇ 66.43ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವರ್ಚುವಲ್ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‌ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

***

ಎರಡನೇ ಡೋಸ್ ಲಸಿಕೆ ನೀಡುವಲ್ಲಿ ಹಿಂದುಳಿದಿರುವ ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು ಟಿಎಚ್‌ಒಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಿ

– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT