ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಮಾಡುವ ಛಲವಿದೆ, ಬಲ ತುಂಬಿ

ಹಾನಗಲ್‌ ಕ್ಷೇತ್ರದ ಗ್ರಾಮಗಳಲ್ಲಿ ಮತ ಯಾಚನೆ: ಶ್ರೀನಿವಾಸ್ ಮಾನೆ ಮನವಿ
Last Updated 26 ಅಕ್ಟೋಬರ್ 2021, 3:51 IST
ಅಕ್ಷರ ಗಾತ್ರ

ಹಾನಗಲ್: ಜನಸೇವೆ ಮಾಡುವ ಛಲ ನನ್ನಲ್ಲಿದೆ, ಬಲ ತುಂಬಿ ಆಶೀರ್ವಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮನವಿ ಮಾಡಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಬ್ಯಾತನಾಳ, ಕೆಲವರಕೊಪ್ಪ, ಮಾಳಾಪುರ, ಕರೆಕ್ಯಾತನಹಳ್ಳಿ, ಕರೆಕ್ಯಾತನಹಳ್ಳಿ ತಾಂಡಾ, ಬ್ಯಾಗವಾದಿ, ಕಲ್ಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದರು.

ಕಳೆದ ಬಾರಿ ಟಿಕೆಟ್ ಘೋಷಣೆ ವಿಳಂಬವಾಯಿತು. ಜನರಿಗೆ ನನ್ನ ಬಗೆಗೆ ತಿಳಿದಿರಲಿಲ್ಲ. ಬಿಜೆಪಿಯೂ ಸಹ ಗೊಂದಲ ಸೃಷ್ಟಿಸಿತು. ನನ್ನ ಹಣೆಬರಹವೂ ಸರಿ ಇರಲಿಲ್ಲ ಹೀಗಾಗಿ ಅಲ್ಪ ಮತಗಳಿಂದ ಪರಾಭವಗೊಂಡೆ. ಆದರೀಗ ನಿರಂತರ ಸಂಪರ್ಕ, ಒಡನಾಟದೊಂದಿಗೆ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ನೋವು-ನಲಿವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಜನರ ತೀರ್ಪು ನನ್ನ ಪರವಾಗಿ ಬರುವ ಪೂರ್ಣ ವಿಶ್ವಾಸದಲ್ಲಿದ್ದೇನೆ ಎಂದರು.

ಕಾರ್ಯಕರ್ತರು ಚುನಾವಣೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ಹಗಲು, ಇರುಳಿನ ಪರಿವೇ ಇಲ್ಲದೇ ಓಡಾಡುತ್ತಿದ್ದಾರೆ. ತಾವೇ ಅಭ್ಯರ್ಥಿ ಎನ್ನುವ ಭಾವನೆ ಅವರಲ್ಲಿ ಮೂಡಿದೆ. ಜನ ಸಹ ಅಷ್ಟೇ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪರವಾದ ವಾತಾವರಣದಿಂದ ವಿರೋಧ ಪಕ್ಷಗಳಲ್ಲಿ ಭೀತಿ ಸೃಷ್ಟಿಯಾಗಿದ್ದು, ಕುತಂತ್ರ
ಮಾಡುತ್ತಿದ್ದಾರೆ. ಅದು ಫಲ ನೀಡಲ್ಲ, ಜನ ಕುತಂತ್ರಿಗಳಿಗೆ ಬುದ್ದಿ ಕಲಿಸಲಿದ್ದಾರೆ ಎಂದರು.

ಬಸವರಾಜ್ ಆಲದಕಟ್ಟಿ, ಮಂಜು ಕಮ್ಮಾರ, ಶೇಕಪ್ಪ ಹೊಸಮನಿ, ನಾಗರಾಜ್ ಮಜ್ಜಗಿ, ಭೀಮಣ್ಣ ಲಮಾಣಿ, ಬಸವಂತ ನಾಯ್ಕ, ಮಂಜು ಗುರಣ್ಣನವರ, ಬಂಗಾರೆಪ್ಪ ಕಲಕೇರಿ, ನಾಗರಾಜ್ ವಡ್ಡರ, ಆನಂದಪ್ಪ ಲಮಾಣಿ, ಸೋಮು ಲಮಾಣಿ, ವಾಲೇಶ್ ಲಮಾಣಿ, ಬಸವರಾಜ್ ಮಾಳಣ್ಣನವರ ಇದ್ದರು.

ಜನ ವಿರೋಧಿ ಆಡಳಿತ: ಮಧು ಬಂಗಾರಪ್ಪ

ಹಾನಗಲ್: ಜನಪರ ಯೋಜನೆ, ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಕಾಂಗ್ರೆಸ್ ಪಕ್ಷದ್ದು ಎತ್ತಿದ ಕೈ. ಜನರ ಭಾವನೆಗಳಿಗೆ ಮೊದಲಿನಿಂದಲೂ ಕಾಂಗ್ರೆಸ್ ಸ್ಪಂದಿಸಿದೆ. ಆದರೀಗ ಅಧಿಕಾರದಲ್ಲಿರುವ ಬಿಜೆಪಿ ಜನರ ಭಾವನೆಗಳ ವಿರುದ್ಧ ಆಡಳಿತ ನಡೆಸುವ ಮೂಲಕ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹರಿಹಾಯ್ದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಳ್ಳಲು ಬಂದಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾವ ಮುಖ
ಇಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೋ ಗೊತ್ತಿಲ್ಲ. ಇಲ್ಲಿ ಸೋತರೂ ಜನರ ಜೊತೆಗೆ ಇದ್ದವರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ. ಹೀಗಾಗಿಯೇ ಅವರ ಬಗ್ಗೆ ಎಲ್ಲೆಡೆ ಒಳ್ಳೆಯ ವಾತಾವರಣವಿದೆ, ಜನರ ಒಲವಿದೆ ಎಂದರು.

ಬೆಲೆ ಏರಿಕೆಯಿಂದ ಜನ ಬಸವಳಿಯುತ್ತಿದ್ದಾರೆ. ಜೀವನ ದುಃಸ್ಥಿತಿಗೆ ತಳ್ಳಿದ ಬಿಜೆಪಿ ಬಗೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸೇಡು ತೀರಿಸಿಕೊಳ್ಳಲು ಜನ ಕಾದು ಕುಳಿತಿದ್ದಾರೆ. ಜನರ ಭಾವನೆ ಏನಿದೆ ಎನ್ನುವುದು ಸ್ವತಃ ಬಿಜೆಪಿಗೂ ಗೊತ್ತಿದೆ. ಹೀಗಾಗಿಯೇ
ಅವರು ಕುತಂತ್ರಕ್ಕೆ ಮೊರೆ ಹೋಗಿದ್ದಾರೆ. ನನ್ನದು ಪಕ್ಕದ ಕ್ಷೇತ್ರ ಸೊರಬ. ಹೀಗಾಗಿ ಹಾನಗಲ್ ಕ್ಷೇತ್ರದೊಂದಿಗೆ ಒಳ್ಳೆಯ ಒಡನಾಟವಿದೆ. ಜನರೊಂದಿಗೆ ಉತ್ತಮ ಸಂಪರ್ಕವಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಗೆಲ್ಲಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT