ಸೋಮವಾರ, ಮೇ 10, 2021
19 °C
ಮಾಳ ಆಳಿದ ಊರು ಮಾಳನಾಯಕನಹಳ್ಳಿ;

ಗ್ರಾಮಕ್ಕೆ ಲಿಂಗಮುದ್ರೆ ಕಲ್ಲುಗಳ ಮೆರುಗು

ಬಸವರಾಜ ಒಡೇರಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಚಿತ್ರದುರ್ಗ ಜಿಲ್ಲೆಯ ಪಾಳೇಗಾರ ವಂಶದ ‘ಮಾಳ’ ಎಂಬ ವ್ಯಕ್ತಿ ಇಲ್ಲಿಗೆ ಬಂದು ನೆಲೆಸಿದ್ದು, ಅವನು ಕಾಲಕ್ರಮೇಣ ನಿರ್ಮಾಣವಾದ ಪುಟ್ಟ ಹಳ್ಳಿಯ ನಾಯಕನಾಗಿ ಆಳಿದ ಪರಿಣಾಮ ಈ ಹಳ್ಳಿಗೆ ‘ಮಾಳನಾಯಕನಹಳ್ಳಿ’ ಎಂದು ಕರೆಯುವ ವಾಡಿಕೆ ರೂಢಿಗತವಾಗಿ ಬಂದಿದೆ ಎನ್ನುತ್ತಾರೆ ಗ್ರಾಮದ ಪುರಾಣ ಪ್ರವಚನಕಾರರು.

ಗ್ರಾಮದಲ್ಲಿ ಮಾಳ, ಮಾಳಿಂಗ, ಮಾಳನಾಯಕ ಹಾಗೂ ಮೈಲಾರಿ ಎಂಬ ಶಿವನ ವಿವಿಧ ಸ್ವರೂಪದ ಮೂರ್ತಿಗಳ ಆರಾಧನೆಗೆ ಊರಿನ ನಾಯಕ ಮುಕ್ತ ಅವಕಾಶ ಕಲ್ಪಿಸಿದ್ದರಿಂದ ಪ್ರಸ್ತುತ ಗ್ರಾಮಕ್ಕೆ ‘ಮಾಳನಾಯಕನಹಳ್ಳಿ’ ಎಂದು ಹೆಸರು ಬಂದಿದೆ. ಇದಕ್ಕೆ ಗ್ರಾಮದಲ್ಲಿ ದೊರೆತಿರುವ ಅನೇಕ ಶಿವನ ಸ್ವರೂಪದ ಲಿಂಗಮುದ್ರೆ ಕಲ್ಲುಗಳು ಸಾಕ್ಷಿಯಾಗಿ ನಿಲ್ಲುತ್ತವೆ ಎನ್ನುತ್ತಾರೆ ಗ್ರಾಮಸ್ಥರು. 

ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಹೋಬಳಿಗೆ ಸೇರಿದ ಈ ಗ್ರಾಮವು ಬೆಳವಲ ನಾಡಿನ ಭಾಗವಾಗಿದೆ. ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದಲ್ಲಿ 5 ಲಿಂಗಮುದ್ರೆ ಕಲ್ಲುಗಳು, ನಾಗಪ್ಪಜ್ಜ ತೋಟಪ್ಪನವರ ಮನೆಯ ಹಿತ್ತಲದಲ್ಲಿ 8 ಲಿಂಗಮುದ್ರೆ ಕಲ್ಲುಗಳು ಇದ್ದು, ಪಶ್ಚಿಮಕ್ಕೆ ಮುಖ ಮಾಡಿವೆ. ಇವುಗಳ ಬಲಭಾಗದಲ್ಲಿ 4 ರಿಂದ 5 ಸಾಲಿನಲ್ಲಿ ಬರೆದ ಶಾಸನವೊಂದು ಇದೆ. ಇದರ ಬಗ್ಗೆ ಹಂಪಿಯ ಪ್ರಾಕ್ತಶಾಸ್ತ್ರಜ್ಞರು ಬಂದು ಅಧ್ಯಯನ ಕೈಗೊಂಡಿದ್ದರು.

ಕೆರೆ ಚೌಡವ್ವನ ದೇವಸ್ಥಾನದ ಕೆಳಭಾಗದಲ್ಲಿ 2 ಲಿಂಗಮುದ್ರೆ ಕಲ್ಲುಗಳಿವೆ. ಒಂದು ಕಲ್ಲಿನ ಬಲಭಾಗದಲ್ಲಿ ಚಂದ್ರನ ಆಕೃತಿ ಇದ್ದು, 3 ಸಾಲಿನ ಶಾಸನ ಇದೆ. ಇದು ಜನರ ಸಹಬಾಳ್ವೆ ನಡೆಸುತ್ತಿದ್ದರು ಎನ್ನುವುದರ ಪ್ರತೀಕವಾಗಿದೆ. ಹಾಲಸ್ವಾಮಿ ಗದ್ದುಗೆಯ ಹಿಂದೆ ಹಾಗೂ ಎಡಭಾಗದಲ್ಲಿ ಐದು ಲಿಂಗಮುದ್ರೆ ಕಲ್ಲುಗಳಿವೆ ಎಂದು ಗ್ರಾಮದ ಯುವಕ ಬಸವರಾಜ ಚೊಳೇನಹಳ್ಳಿ ಅವರು ಬರೆದ ‘ನನ್ನೂರ ಜಾನಪದ ಅಧ್ಯಯನ’ ಎನ್ನುವ ಪುಸ್ತಕದಲ್ಲಿ ಉಲ್ಲೇಖವಿದೆ.

ಒಕ್ಕಲುತನ ಗ್ರಾಮದ ಜನರ ಪ್ರಧಾನ ಉದ್ಯೋಗ. ಕೃಷಿಯನ್ನೇ ನಂಬಿ ಬದುಕುವ ಒಕ್ಕಲಿಗರ ಪಾಲಿಗೆ ಭೂಮಿ, ಬಸವಣ್ಣ ದೇವರು. ಭತ್ತ, ಜೋಳ, ದ್ವಿದಳ ಧಾನ್ಯಗಳು, ಹತ್ತಿ, ತರಕಾರಿ, ಮೆಣಸಿನಕಾಯಿ ಮತ್ತು ಎಣ್ಣೆ ಬೀಜಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಗ್ರಾಮದಲ್ಲಿ 30.72 ಹೆಕ್ಟೇರ್ ಅರಣ್ಯವಿದೆ. 

ದೊಡ್ಡಕೆರೆಯ ದಂಡೆಯ ಮೇಲಿರುವ ಚೌಡವ್ವದೇವಿ ದೇವಸ್ಥಾನದ ಬಳಿ ಒಂದು ಶಾಸನ ಇದೆ. ನೀಲಕಂಠೇಶ್ವರ, ಬಸವಣ್ಣ, ಹನುಮಂತ, ದುರ್ಗವ್ವ, ದ್ಯಾಮವ್ವ, ಚೌಡವ್ವ, ಕೆರೆಚೌಡವ್ವ ದೇವಸ್ಥಾನಗಳಿವೆ. ಯುಗಾದಿಯಲ್ಲಿ ಹನುಮಂತ ದೇವರ ತೇರು. ಫೆಬ್ರುವರಿ ತಿಂಗಳಲ್ಲಿ ದುರ್ಗವ್ವನ ಜಾತ್ರೆ ಹಾಗೂ ಶರಣ ಚಾಂದ್ ಫಿರ್ ಉರುಸ್ ಜರುಗುತ್ತದೆ.

‘ಮಾಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, 15 ಸದಸ್ಯರನ್ನು ಹೊಂದಿದೆ. ಇದರ ವ್ಯಾಪ್ತಿಯಲ್ಲಿ ಫತ್ತೇಪುರ, ಕೂಸಗಟ್ಟಿ, ಮೆಣಸಿನಹಾಳ, ತಿಮ್ಮೇನಹಳ್ಳಿ, ಮಾಳನಾಯಕನಹಳ್ಳಿ, ಬಡಾಬಸಾಪುರ, ಸಣ್ಣಸಂಗಾಪುರ ಹಾಗೂ ಚಿಕ್ಕಮಾಗನೂರು ಸೇರಿದಂತೆ 8 ಗ್ರಾಮಗಳು ಬರುತ್ತವೆ. ಗ್ರಾಮದ ಒಟ್ಟು ಜನಸಂಖ್ಯೆ 6846 ಇದೆ’ ಎಂದು ಗ್ರಾಮದ ಪಿಡಿಒ ದೇವರಾಜ ಜಿ. ಹೇಳಿದರು.

ಮೌರ್ಯರು, ಶಾತವಾಹನರು, ಬನವಾಸಿ ಕದಂಬರು, ಬಾದಾಮಿ ಚಾಲುಕ್ಯರ ಅಧೀನಕ್ಕೆ ಈ ಹಳ್ಳಿ ಒಳಪಟ್ಟಿತ್ತು . ಕ್ರಿ.ಶ 10 ರಿಂದ 12 ನೇ ಶತಮಾನದಲ್ಲಿ ರಾಷ್ಟ್ರಕೂಟರು ಹಾಗೂ ಕಲ್ಯಾಣ ಚಾಲುಕ್ಯರ ರಾಜ್ಯಗಳಲ್ಲಿನ ಭಾಗವಾಗಿತ್ತು. ಇದು ಹಾನಗಲ್ಲಿನ ಕದಂಬರು, ಗುತ್ತಲದ ಗುತ್ತರು, ರಟ್ಟೀಹಳ್ಳಿಯ ಸಿಂಧರು ಸಹ ಆಳಿದ ಭಾಗವಾಗಿತ್ತು ಎನ್ನುವ ಉಲ್ಲೇಖವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು