ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಜಿಲ್ಲೆಗೆ ಶೇ 43.96ರಷ್ಟು ಪಠ್ಯಪುಸ್ತಕ ಪೂರೈಕೆ

ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ಶಿಕ್ಷಕರು; ಮಕ್ಕಳಿಗೆ ಬಿಸಿಯೂಟದಲ್ಲಿ ಸಿಹಿ
Published 31 ಮೇ 2024, 16:00 IST
Last Updated 31 ಮೇ 2024, 16:00 IST
ಅಕ್ಷರ ಗಾತ್ರ

ಹಾವೇರಿ: ಬೇಸಿಗೆಯ ರಜೆಯ ನಂತರ ಜಿಲ್ಲೆಯಾದ್ಯಂತ ಶಾಲೆಗಳು ಪುನರಾರಂಭವಾಗಿದ್ದು, ಶಾಲಾ ಅಂಗಳದಲ್ಲಿ ಶುಕ್ರವಾರ ಮಕ್ಕಳ ಶಾಲಾ ಸಮವಸ್ತ್ರದೊಂದಿಗೆ ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಗುಲಾಬಿ ಹೂವು ನೀಡಿ ಅದ್ದೂರಿಯಾಗಿ ಸ್ವಾಗತಿಸಿದರು.

ನಗರದ ಎಂ.ಎಂ ವೃತ್ತದ ಬಳಿ ಇರುವ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ.2ರ ಶಾಲೆಯ ಆವರಣದಲ್ಲಿ ಹಸಿರು ತಳಿರು ತೋರಣ ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಶಾಲಾ ಪ್ರಾರಂಭೋತ್ಸವದ ಮೊದಲ ದಿನ ತರಗತಿಗಳಿಗೆ ಹಾಜರಾಗಲು ಬಂದಿದ್ದ 1 ರಿಂದ 10ನೇ ತರಗತಿ ಮಕ್ಕಳಿಗೆ ಶಾಲಾ ಶಿಕ್ಷಕರು,ಸಿಬ್ಬಂದಿ ವರ್ಗದವರು,ಬಣ್ಣ ಬಣ್ಣದ ಚಿಟ್ಟೆಗಳಿಗೆ ಗುಲಾಬಿ ಹೂವು, ಸಿಹಿ ತಿಂಡಿ ಹಾಗೂ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಮಕ್ಕಳಿಗೆ ಸಿಹಿ ಊಟ ವಿತರಣೆ: ಶಾಲಾ ಪ್ರಾರಂಭೋತ್ಸವದ ಮೊದಲ ದಿನವಾದ ಶುಕ್ರವಾರ ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಜತೆಗೆ ಸಿಹಿ ಊಟವನ್ನು ಬಡಿಸಲಾಯಿತು. ಪ್ರಮುಖವಾಗಿ ಗೋಧಿ ಹುಗ್ಗಿ, ಶ್ಯಾವಿಗೆ ಪಾಯಸ, ಹೋಳಿಗೆ, ಕಡಬು, ಸಿರಾ, ಅನ್ನ,ಸಾಂಬಾರ, ಚಿತ್ರಾನ್ನ, ಮೊಸರ ಅನ್ನ ಪಲಾವ್ ಸೇರಿದಂತೆ ಮತ್ತಿತರ ವಿಶೇಷ ಅಡುಗೆಯನ್ನು ತಯಾರಿಸಿ ಶಾಲಾ ಮಕ್ಕಳಿಗೆ ಬಡಿಸಲಾಯಿತು. ಇನ್ನೂ ಬೆಳಗಿನ ಅವಯಲ್ಲಿ ಹಾಲು, ಬಿಸ್ಕೀಟ್, ಬಾದಾಮಿ ಹಾಲು ಸವಿದು ಇಡೀ ದಿನ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮದಿಂದ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕಾಲಕಳೆದರು.

ಜಿಲ್ಲೆಯಲ್ಲಿ ಒಟ್ಟು 1130 ಪ್ರಾಥಮಿಕ ಹಾಗೂ 154 ಪ್ರೌಢ ಶಾಲೆಗಳು ಸೇರಿದಂತೆ 1284 ಶಾಲೆಗಳಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 1.75ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಜಿಲ್ಲೆಗೆ 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ 1 ರಿಂದ 10ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಟ್ಟು 29,74,843 ಪಠ್ಯ ಪುಸ್ತಕಗಳು ಅಗತ್ಯವಾಗಿದ್ದು, ಶೇ 43.96ರಷ್ಟು ಪಠ್ಯ ಪುಸ್ತಕಗಳು ಪೂರೈಕೆ ಆಗಿವೆ.  ಜಿಲ್ಲೆಯ ಖಾಸಗಿ ಶಾಲೆಗಳಿಂದ 7,08,254 ಪುಸ್ತಕಗಳಿಗೆ ಬೇಡಿಕೆ ಇತ್ತು. ಈಗಾಗಲೇ 3,80,095 ಪುಸ್ತಕಗಳು ಪೂರೈಕೆಯಾಗಿವೆ.

ಚಕ್ಕಡಿ ಏರಿ ಬಂದ ಮಕ್ಕಳು: ತಾಲ್ಲೂಕಿನ ಕೋಳೂರ ಗ್ರಾಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು, ವಿಜ್ಞಾನಿಗಳ ಭಾವಚಿತ್ರ,ವಿವಿಧ ಚಿತ್ರಕಲೆಗಳು ಹಾಗೂ ಆಲಂಕಾರಿಕ ಸಾಮಗ್ರಿಗಳಿಂದ ಬಿಡಿಸಿದ್ದ ಚಿತ್ರಗಳನ್ನು ಚಕ್ಕಡಿಗೆ ಅಂಟಿಸಿ ಶೃಂಗರಿಸಲಾಗಿತ್ತು. ಶಾಲಾರಾಂಭದ ಮೊದಲ ದಿನ ಮಕ್ಕಳನ್ನು ಶೃಂಗರಿಸಿದ ಚಕ್ಕಡಿಯಲ್ಲಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿಸುವ ಮೂಲಕ ಕರೆತರಲಾಯಿತು. ಶಿಕ್ಷಕರೇ ಟೋಪಿಯನ್ನು ಹಾಕಿಕೊಂಡು ಚಕ್ಕಡಿ ಹೊಡೆದುಕೊಂಡು ಬಂದಿದ್ದು ವಿಶೇಷವಾಗಿತ್ತು.

ಹಾವೇರಿ:ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿ ಊಟ ವಿತರಿಸಲಾಯಿತು.-ಪ್ರಜಾವಾಣಿ ಚಿತ್ರ
ಹಾವೇರಿ:ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿ ಊಟ ವಿತರಿಸಲಾಯಿತು.-ಪ್ರಜಾವಾಣಿ ಚಿತ್ರ

ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ಜಿಲ್ಲೆಯಾದ್ಯಂತ ಶುಕ್ರವಾರ ಪ್ರಾರಂಭವಾದ ಶಾಲೆಗಳಿಗೆ ಮಕ್ಕಳು ಲವಲವಿಕೆಯಿಂದ ಆಗಮಿಸಿದರು

-ಸುರೇಶ ಹುಗ್ಗಿ ಡಿಡಿಪಿಐ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT