ಮಂಗಳವಾರ, ಸೆಪ್ಟೆಂಬರ್ 17, 2019
24 °C
ಎಂಟರಿಂದ ಹತ್ತು ಜನರಿಗೆ ಕೆಲಸ ನೀಡಿರುವ ಕಿರಣ

ಮನೆ ಮನೆಯಲ್ಲೂ ಬಾಲಾಜಿ ಅಗರಬತ್ತಿ ಸುವಾಸನೆ

Published:
Updated:
Prajavani

ಹಾವೇರಿ: ಇಲ್ಲಿನ ಪುರದ ಓಣಿಯ ಕಿರಣ ಲಂಬಿ ಅವರು ಸುಗಂಧಿತ ‘ಬಾಲಾಜಿ ಅಗರಬತ್ತಿ’ ಬ್ರ್ಯಾಂಡಿಂಗ್‌ ಮೂಲಕ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದು ಅವರು ಯಶಸ್ವಿ ಉದ್ಯಮಿಯಾಗಿದ್ದಾರೆ.

ಕಳೆದ 8 ವರ್ಷದಿಂದ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಎಂಟರಿಂದ ಹತ್ತು ಜನರಿಗೆ ಕೆಲಸವನ್ನೂ ನೀಡಿದ್ದಾರೆ. ಕಾರ್ಮಿಕರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಬಾಲಾಜಿ ಅಗರಬತ್ತಿಯಿಂದ ಮನೆ ಮನೆಯಲ್ಲೂ ಸುವಾಸನೆಯನ್ನು ಹರಿಸಿದ್ದಾರೆ.

ಹಿಂದೆ 15 ವರ್ಷಗಳ ಕಾಲ ತಂದೆ ವಿ.ಪಿ.ಲಂಬಿ ಅವರು ಅಗರಬತ್ತಿ ಉದ್ಯಮ ಮಾಡುತ್ತಿದ್ದರು. ಮಧ್ಯದಲ್ಲಿ ಕೆಲವು ವರ್ಷ ನಿಲ್ಲಿಸಿದರು. ಅವರ ನಂತರ ಸಹೋದರ ಶಿವಲಿಂಗರಾಜ ಸೇರಿ ಈ ಉದ್ಯಮವನ್ನು ಪ್ರತ್ಯೇಕವಾಗಿ ಮುಂದುವರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಕಿರಣ ಲಂಬಿ.

‘ನಾನು ಬಿ.ಕಾಂ. ಪದವಿಯನ್ನು ಪೂರೈಸಿದ್ದೇನೆ. ಇದರಿಂದ ಮಾರ್ಕೆಟಿಂಗ್‌ ಮಾಡುವುದು ಕಷ್ಟ ಎಂದೆನಿಸಿಲ್ಲ. ನಾವು ಅಗರಬತ್ತಿ ಕಡ್ಡಿಗೆ ವಿವಿಧ ಸುಗಂಧ ದ್ರವ್ಯ ಹಾಕಿ ಅದಕ್ಕೆ ಪ್ಯಾಕ್‌ ಮಾಡಿ ಸಾರಿಗೆ ವ್ಯವಸ್ಥೆ ಇರುವ ಊರುಗಳಿಗೆ ಕಳುಹಿಸುತ್ತೇವೆ. ಕಲಬುರ್ಗಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಗರಿಬೊಮ್ಮನಹಳ್ಳಿ, ಹಾವೇರಿ ಸುತ್ತಮುತ್ತ ಹಳ್ಳಿಗಳಿಗೆ ತಲುಪಿಸುತ್ತೇವೆ’ ಎಂದು ಅವರು ವಿವರಿಸಿದರು.

‘ನಿತ್ಯವೂ ಜನರ ಮನಸ್ಸಿಗೆ ತಲುಪಲು ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ಪೈಪೋಟಿ ಜಗತ್ತಿನಲ್ಲಿ ಮಾರುಕಟ್ಟೆಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಕಷ್ಟವಾಗಿದೆ. ನಮ್ಮ ಬ್ರ್ಯಾಂಡ್‌ ಗುಣಮಟ್ಟದ ಕಾರಣ ಇಷ್ಟು ವರ್ಷ ಮಾರುಕಟ್ಟೆಯಲ್ಲಿ ಇರಲು ಸಾಧ್ಯವಾಗಿದೆ’ ಎನ್ನುತ್ತಾರೆ ಕಿರಣ

ಹಬ್ಬ ಹರಿದಿನ, ನಿತ್ಯ ಪೂಜೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಗ್ರಾಮೀಣ ಭಾಗದ ಜನರು ಯಾವುದೇ ಬ್ರ್ಯಾಂಡ್‌ ನೋಡದೆ ಸುವಾಸನೆ ನೋಡಿ ಖರೀದಿಸುತ್ತಾರೆ. ನಗರ ಪಟ್ಟಣ ಪ್ರದೇಶದಲ್ಲಿ ಒಂದೇ ಬಗೆಯ ಬ್ರ್ಯಾಂಡ್‌ ತೆಗೆದು ಬಳಕೆ ಮಾಡುತ್ತಾರೆ. ಮನೆಯಲ್ಲಿ ಅಗರಬತ್ತಿ ಹಚ್ಚಿದರೆ ಸುವಾಸನೆಯಿಂದ ಗುರುತಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ ಎಂದು ಸಹೋದರ ಶಿವಲಿಂಗರಾಜ ತಿಳಿಸಿದರು.

ಸಾದಾ ಅಗರಬತ್ತಿಗೆ ಸುಗಂಧ ದ್ರವ್ಯದಲ್ಲಿ ಮುಳುಗಿಸಿ ಕೆಲ ಹೊತ್ತು ಒಣಗಲು ಇಡುತ್ತೇವೆ. ಬಳಿಕ ಪ್ಯಾಕಿಂಗ್‌ ಮಾಡಿ ಏಜೆನ್ಸಿಗಳಿಗೆ ನೀಡುತ್ತೇವೆ. ನಮ್ಮಲ್ಲಿ ಮೊಗರಾ, ಕೇವ್ಡಾ, ರೋಸ್‌, ಸ್ಯಾಂಡಲ್‌, ಲ್ಯಾವೆಂಡರ್‌ ಹೀಗೆ ವಿವಿಧ ಬಗೆಯ ಸುವಾಸನೆ ಅಗರಬತ್ತಿ ಮಾಡುತ್ತೇವೆ. 200 ಗ್ರಾಂ ಪ್ಯಾಕೆಟ್‌ಗೆ ₹35 ರಂತೆ ಮಾರಾಟ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

Post Comments (+)