ಶನಿವಾರ, ಜನವರಿ 16, 2021
21 °C
ಹಿರೇಕೆರೂರಿನ ‘ಕೈ’ ಪಾಳಯದಲ್ಲಿ ಒಂಬತ್ತು ಆಕಾಂಕ್ಷಿಗಳು

ರಾಣೆಬೆನ್ನೂರು: ಬಣಕಾರ ನಡೆಗೆ ಕಾಯುತ್ತಿದೆ ಕಾಂಗ್ರೆಸ್!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡ ಕಣಕ್ಕಿಳಿಯುವುದು ಬಹುತೇಕ ನಿಚ್ಚಳವಾಗಿದ್ದರೆ, ಹಿರೇಕೆರೂರು ಕ್ಷೇತ್ರದ ‘ಕೈ’ ಪಾಳಯದಲ್ಲಿ ಆಕಾಂಕ್ಷಿಗಳ ಪಟ್ಟಿ ಒಂಬತ್ತಕ್ಕೆ ಏರಿದೆ. ಅವರಲ್ಲಿ ಅಂತಿಮವಾಗಿ ಉಳಿಯುವವರು ಯಾರೆಂಬುದು, ಬಿಜೆಪಿ ಮುಖಂಡ ಯು.ಬಿ.ಬಣಕಾರ ಅವರ ನಡೆ ಮೇಲೆ ನಿರ್ಧಾರವಾಗಲಿದೆ.‌

ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ, ಬಣಕಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡುತ್ತಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ನಾಯಕರು ಅವರಿಗೇ ಗಾಳ ಹಾಕುವ ಸಣ್ಣದೊಂದು ಪ್ರಯತ್ನ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ, ಬುಧವಾರ ಬೆಂಗಳೂರಿಗೆ ಬಂದಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಸ್ಪಷ್ಟ ನಿಲುವು ಹೇಳದೆ ಬರಿಗೈಲಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ಹಾವೇರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಪಿ.ಡಿ.ಬಸವನಗೌಡರ, ಬಿ.ಎನ್.ಬಣಕಾರ, ಅಶೋಕ ಪಾಟೀಲ, ಎಸ್‌.ಬಿ.ತಿಪ್ಪಣ್ಣನವರ, ಬಿ.ಎಚ್.ಬನ್ನಿಕೋಡ, ಅವರ ಮಗ ಪ್ರಕಾಶ್ ಬನ್ನಿಕೋಡ, ಉಳಿವೆಪ್ಪ ಸಾಲಿ, ಶೇಕಪ್ಪ ಉಕ್ಕುಂದ ಅವರು ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಬಂದರು. ಆದರೆ, ಅಭ್ಯರ್ಥಿಯ ಆಯ್ಕೆ ಮಾತ್ರ ಅಂತಿಮವಾಗಲಿಲ್ಲ.

ಭರವಸೆ ಕೊಟ್ಟು ಕಳಿಸಿದ್ರು: ‘ನನಗೆ ಟಿಕೆಟ್ ಕೊಡಿ. ಇಲ್ಲವೇ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಸಿ ಎಂದು ಪಕ್ಷದ ನಾಯಕರನ್ನು ಕೇಳಿಕೊಂಡಿದ್ದೇನೆ. ಚುನಾವಣಾ ಕೆಲಸಗಳನ್ನು ಯಶಸ್ವಿಯಾಗಿ ಮಾಡಿದರೆ, ಬೇಡಿಕೆ ಈಡೇರಿಸುವುದಾಗಿ  ಭರವಸೆ ನೀಡಿ ಕಳುಹಿಸಿದ್ದಾರೆ’ ಎಂದು ಎಸ್‌.ಕೆ.ಕರಿಯಣ್ಣನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿ.ಸಿ.ಪಾಟೀಲ ಹಾಗೂ ಬಣಕಾರ ಅವರನ್ನು ಹೆದರಿಸುವಂತಹ ಶಕ್ತಿಶಾಲಿ ಅಭ್ಯರ್ಥಿಗಳು ಕೈ ಪಾಳಯದಲ್ಲಿ ಇಲ್ಲ. ಮಾಜಿ ಶಾಸಕರು ಎಂಬ ಕಾರಣಕ್ಕೆ ಬಿ.ಎಚ್.ಬನ್ನಿಕೋಡ ಅವರ ಹೆಸರನ್ನು ಕೆಲವು ಕಾರ್ಯಕರ್ತರು ಸೂಚಿಸುತ್ತಿದ್ದರೆ, ಮತ್ತೆ ಕೆಲವರು ವಯಸ್ಸಿನ ವಿಚಾರ ತೆಗೆದು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪಾಟೀಲರ ಶಕ್ತಿ ಪ್ರದರ್ಶನ: ಕ್ಷೇತ್ರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಮೂಲಕ ಬಣಕಾರ ಶಕ್ತಿ ಪ್ರದರ್ಶಿಸಿದ್ದು, ಅದರ ಬೆನ್ನಲ್ಲೇ ಬಿ.ಸಿ.ಪಾಟೀಲ ಕೂಡ ತಮ್ಮ ಸಾಮರ್ಥ್ಯ ತೋರಲು ಗುರುವಾರಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. ವಿಜಯ ಪತಾಕೆ ಹಾರಿಸಲು ತಾವು ಹೆಣೆದಿರುವ ರಣತಂತ್ರಗಳ ಬಗ್ಗೆ ಚರ್ಚಿಸಲು ಹಾಗೂ ಕೆಲವು ಸಲಹೆಗಳನ್ನು ನೀಡಲು ಕಾರ್ಯಕರ್ತರ ಸಭೆ ಕರೆದಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಟೀಲ, ‘ಬಣಕಾರ ತಮ್ಮ ನಿರ್ಧಾರವನ್ನು ಪ್ರತಿಭಟನೆ ಮೂಲಕ ಹೈಕಮಾಂಡ್‌ಗೆ ತಿಳಿಸಿದ್ದಾರೆ. ನಾನು ಕೋರ್ಟ್ ಆದೇಶ ಬರುವವರೆಗೂ ಕಾಯುತ್ತೇನೆ’ ಎಂದರು.

ಇನ್ನು ರಾಣೆಬೆನ್ನೂರು ಕ್ಷೇತ್ರದಲ್ಲಿ ಕೋಳಿವಾಡ ಹೆಸರು ಅಂತಿಮವಾಗಿರುವುದನ್ನು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಖಚಿತಪಡಿಸಿದ್ದಾರೆ. ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಕೋಳಿವಾಡ, ‘ಈ ಕ್ಷೇತ್ರದಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಹೀಗಾಗಿ, ಪಕ್ಷ ನನ್ನನ್ನೇ ಗುರುತಿಸಿದೆ. ಸೆ.27ಕ್ಕೆ ಮೊದಲ ನಾಮಪತ್ರ ಸಲ್ಲಿಸಿ, ಸೆ.30ರಂದು ಬೃಹತ್ ರ‍್ಯಾಲಿಯೊಂದಿಗೆ ಹೋಗಿ ಮತ್ತೆ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಜನರೇ ಸಿದ್ಧತೆ ಮಾಡ್ತಾರೆ

‘ರಾಜ್ಯದ ಸ್ಪೀಕರ್ ತೆಗೆದುಕೊಂಡ ಕೆಟ್ಟ ತೀರ್ಪಿನಿಂದ ಕ್ಷೇತ್ರದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಹಿಂದೆ ತಮಿಳುನಾಡಿನಲ್ಲಿ 17 ಅನರ್ಹ ಶಾಸಕರು ಚುನಾವಣೆಗೆ ಸ್ಪ‍ರ್ಧೆ ಮಾಡಿದ್ದರು. ಅದೇ ಮಾನದಂಡ ಆಧರಿಸಿ ಶುಕ್ರವಾರ ಬೆಳಿಗ್ಗೆಯೊಳಗೆ ಆದೇಶ ಹೊರಬೀಳುವ ವಿಶ್ವಾಸವಿದೆ. ಜನ ಈಗಾಗಲೇ ನನ್ನ ಪರವಾಗಿ ಸಿದ್ಧತೆ ಮಾಡುತ್ತಿದ್ದಾರೆ’ ಎಂದು ಬಿ.ಸಿ.ಪಾಟೀಲ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು