ಸೋಮವಾರ, ಆಗಸ್ಟ್ 19, 2019
21 °C
ಸೇತುವೆ ದಾಟುವಾಗ ಕೊಚ್ಚಿ ಹೋಗಿದ್ದ ಯಲ್ಲಪ್ಪ: ಒಂದೂವರೆ ತಾಸಿನ ಹೋರಾಟಕ್ಕೆ ಸಿಕ್ತು ಜೀವದಾನ

ವರದಾ ನದಿಗೆ ಬಿದ್ರೂ, ಸಾವು ಗೆದ್ದ ಕಾನ್‌ಸ್ಟೆಬಲ್!

Published:
Updated:
Prajavani

ಹಾವೇರಿ: ಜಲಾವೃತವಾಗಿದ್ದ ಸೇತುವೆಯಲ್ಲಿ ಪ್ರಯಾಣ ಮಾಡಬೇಕಾದರೆ, ಬೈಕ್ ಸಮೇತ ವರದಾ ನದಿಗೆ ಬಿದ್ದ ಕಾಗಿನೆಲೆ ಠಾಣೆಯ ಕಾನ್‌ಸ್ಟೆಬಲ್‌ ಯಲ್ಲಪ್ಪ ಕೊರವಿ, ಈಜುವಾಗ ಸಿಕ್ಕ ಗಿಡ ಹಿಡಿದುಕೊಂಡೇ ಸುಮಾರು ಒಂದೂವರೆ ತಾಸು ಹೋರಾಡಿ ಸಾವನ್ನು ಗೆದ್ದಿದ್ದಾರೆ!

ಸಂತೆಶಿಗ್ಲಿ ಗ್ರಾಮದವರಾದ ಯಲ್ಲ‍ಪ್ಪ, ಕರ್ತವ್ಯ ಮುಗಿಸಿಕೊಂಡು ಠಾಣೆಯಿಂದ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು. ನಾಲ್ಕೈದು ದಿನಗಳಿಂದ ಮುಳುಗಿದ್ದ ಕರ್ಜಗಿ–ಕಲಕೋಟಿ ಮಾರ್ಗದ ಸೇತುವೆಯಲ್ಲಿ, ಮಂಗಳವಾರ ನೀರಿನ ಮಟ್ಟ ಸ್ವಲ್ಪ ಕಡಿಮೆ ಆಗಿತ್ತು. ಬೈಕ್ ಮೇಲೆ ಹೋಗುವಾಗ ಈ ಅನಾಹುತ ಸಂಭವಿಸಿದೆ.

ಮಧ್ಯದಲ್ಲಿ ಕೆಟ್ಟು ನಿಂತ ಬೈಕ್: ‘ಹೊಳಿ ಕಡಿಮೆ ಆಗಿರ್ಬೇಕು ಅಂತ ಸೇತುವೆ ಮೇಲೆ ಬೈಕ್ ತಗೋಂಡು ಹೋಗಿದ್ದೆ. ಅದನ್ನು ದಾಟಲು ಇನ್ನು 50 ಮೀಟರ್ ಅಷ್ಟೇ ದೂರ ಇತ್ತು. ಆದರೆ, ಮಧ್ಯದಲ್ಲಿ ಬೈಕ್ ಕೆಟ್ಟು ನಿಲ್ತು. ಸೆಲ್ಫ್ ಸ್ಟಾರ್ಟ್‌ ಮಾಡಿದರೂ ಚಾಲೂ ಆಗದಿದ್ದಾಗ ಕಿಕ್ ಹೊಡೆಯಲು ಹೋದೆ. ಆಗ ನಿಯಂತ್ರಣ ಕಳೆದುಕೊಂಡು ಬೈಕ್ ಸಮೇತ ನಾನೂ ನದಿಗೆ ಬಿದ್ದೆ’ ಎಂದು ಯಲ್ಲಪ್ಪ ವಿವರಿಸಿದರು.

‘ನೀರಿನ ಸೆಳೆತ ಜೋರಿತ್ತು. ಇನ್ನೇನು ಸಾಯ್ತೀನಿ ಎಂದೇ ಭಾವಿಸಿದ್ದೆ. ಹೆಲ್ಮೆಟ್ ಕಿತ್ತೆಸೆದು ಈಜಲಾರಂಭಿಸಿದೆ. ನೀರೇ ನನ್ನನ್ನು ದಡದ ಕಡೆಗೆ ಕರೆದುಕೊಂಡು ಹೋಯಿತು. ಸೇತುವೆಯಿಂದ ಸುಮಾರು 400 ಮೀಟರ್ ದೂರದಲ್ಲಿ ಸಿಕ್ಕ ಗಿಡದ ಕೊಂಬೆಯನ್ನು ಹಿಡಿದುಕೊಂಡು ಕಿರಚಾಡುತ್ತಿದ್ದೆ. ನನ್ನ ಕೂಗು ಯಾರಿಗೂ ಕೇಳುತ್ತಿರಲಿಲ್ಲ.’

‘ಅದೃಷ್ಟವಷಾತ್ ಜೇಬಿನಲ್ಲಿದ್ದ ಮೊಬೈಲ್ ಇನ್ನೂ ಕೆಲ್ಸ ಮಾಡ್ತಿತ್ತು. ಒಂದು ಕೈಯಲ್ಲಿ ಕೊಂಬೆ ಹಿಡಿದುಕೊಂಡೇ, ಪರಿಚಿತರಿಗೆಲ್ಲ ಕರೆ ಮಾಡಿ ನೆರವಿಗಾಗಿ ಅಂಗಾಲಾಚಿದೆ. ಸ್ವಲ್ಪ ಹೊತ್ತಿನಲ್ಲೇ ಅಗ್ನಿಶಾಮಕ ದಳದ ವಾಹನದೊಂದಿಗೆ ಪೊಲೀಸ್ ಸ್ನೇಹಿತರು ಸ್ಥಳಕ್ಕೆ ಬಂದು ನನ್ನನ್ನು ರಕ್ಷಿಸಿದರು. ವರದಾ ನದಿ ನನ್ನನ್ನು ಒಡಲೊಳಗೆ ಎಳೆದುಕೊಂಡರೂ, ಕೊನೆಗೆ ಅದೇ ನದಿ ನನ್ನನ್ನು ದಡಕ್ಕೆ ಕರೆದೊಯ್ದು ಜೀವ ಉಳಿಸಿತು‌’ ಎಂದು ಹೇಳುತ್ತಲೇ ದುಃಖತಪ್ತರಾದರು.

ಸಾವನ್ನು ಗೆದ್ದು ಬಂದ ಯಲ್ಲಪ್ಪ ಅವರಿಗೆ ಸಾಮಾಜಿಕ ಜಾಲತಾಣಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಜಲಾವೃತವಾಗಿದ್ದರೂ ಸೇತುವೆ ಮೇಲೆ ಬಂದ ಅವರ ವರ್ತನೆಗೆ ಕೆಲವರಿಂದ ಆಕ್ರೋಶವೂ ವ್ಯಕ್ತವಾಗಿದೆ.

ಎಲ್ ಅದಿರೋ ಯಪ್ಪಾ...
ರಾತ್ರಿ ಯಲ್ಲಪ್ಪ ಕರೆ ಮಾಡಿ, ‘ನದಿಗೆ ಬಿದ್ದೀನ್ರೋ. ಕತ್ತಲಾಗ ಏನೂ ಕಾಣ್ತಿಲ್ರೋ. ಎಲ್ ಅದಿರೋ ಯಪ್ಪಾ. ನಿಮ್ ಕಾಲಿಗ್ ಬೀಳ್ತಿನಿ ಬನ್ರೋ’ ಎಂದು ಗೋಳಾಡಿದ. ನದಿಗೆ ಬಿದ್ದವ್ನು ಫೋನ್ ಹೆಂಗ್ ಮಾಡ್ತಾನೆ ಅಂತ ಮೊದ್ಲು ಸುಮ್ನಿದ್ದೆ. ಆದ್ರೆ, ಅವ್ನ ಅಳು ಕೇಳಿ ನಿಜ ಅನ್ನಿಸ್ತು. ತಕ್ಷಣ 100, 101 ಕಂಟ್ರೋಲ್ ರೂಮ್‌ಗಳಿಗೆ ಫೋನ್ ಮಾಡಿ ವಿಷಯ ಮುಟ್ಟಿಸ್ದೆ ಎಂದು ಹೆಸರು ಹೇಳಲಿಚ್ಛಿಸದ ಯಲ್ಲಪ್ಪ ಅವರ ಸ್ನೇಹಿತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

Post Comments (+)