ಮಂಗಳವಾರ, ಆಗಸ್ಟ್ 20, 2019
25 °C
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆಯುತ್ತಿರುವ ಸರ್ಕಾರಿ ಶಾಲೆ

ಶತಮಾನದ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್!

Published:
Updated:
Prajavani

ತಿಳವಳ್ಳಿ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ದಿನಮಾನಗಳಲ್ಲಿ ಹಾವೇರಿ ಜಿಲ್ಲೆಯ ಕೂಸನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸವಾಲೊಡ್ಡುವಂತಿದೆ. 2021ಕ್ಕೆ ಒಂದೂವರೆ ಶತಮಾನವನ್ನು ಪೂರೈಸಲಿರುವ ಈ ಶಾಲೆ, ಸುಸಜ್ಜಿತ ಕಟ್ಟಡದೊಂದಿಗೆ ಸುತ್ತಲೂ ಹಸಿರು ಹೊದ್ದು ನಳನಳಿಸುತ್ತಿದೆ.‌

ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದ್ದು, ಅದರ ಪಕ್ಕದಲ್ಲಿ ಸಾಲಾಗಿ ತೆಂಗಿನ ಗಿಡಗಳನ್ನು ನೆಡಲಾಗಿದೆ. ಶುದ್ಧ ಕುಡಿಯುವ ನೀರಿನ ಪೂರೈಕೆ, ಹಸಿರು ಹುಲ್ಲು, ಕೈತೋಟ, ಸುಣ್ಣ–ಬಣ್ಣ ವಿಶಾಲ ಊಟದ ಕೊಠಡಿ... ಹೀಗೆ ಇತ್ತೀಚೆಗೆ ಆಗಿರುವ ಬದಲಾವಣೆಗಳು ಶಾಲೆಯ ಅಂದವನ್ನು ಹೆಚ್ಚಿಸಿವೆ. 

ಇಲ್ಲಿ ಸುಮಾರು 150 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಆರು ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಊರ ಗ್ರಾಮಸ್ಥರ ನೆರವಿನಿಂದ ₹ 80 ಸಾವಿರದ ವೆಚ್ಛದಲ್ಲಿ ಸ್ಮಾರ್ಟಕ್ಲಾಸ್ ಆರಂಭಿಸಲಾಗಿದೆ. ಇದು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವುದರ ಜತೆಗೆ, ದಾಖಲಾತಿ ಪ್ರಮಾಣವನ್ನೂ ಹೆಚ್ಚಿಸಿದೆ.

‘ಸದ್ಯದಲ್ಲೇ ಸುಸಜ್ಜಿತ ಗ್ರಂಥಾಲಯ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಯೋಗಾಲಯವನ್ನೂ ಆರಂಭಿಸುತ್ತಿದ್ದೇವೆ’ ಎಂದು  ಶಿಕ್ಷಕ ಜಿ.ಕೆ.ಬಾತಿ ಹೇಳುತ್ತಾರೆ. ಈ ಮೂಲಕ ಸುತ್ತಮುತ್ತಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಗುಣಮಟ್ಟದ ವಿಚಾರದಲ್ಲಿ ಸವಾಲು ಎಸೆಯಲು ಸರ್ಕಾರಿ ಶಾಲೆ ಸಜ್ಜಾಗುತ್ತಿದೆ. 

‘2007-08ನೇ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಸಭಾಭವನವನ್ನು ಕಟ್ಟಿಸಲಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಆವರಣದಲ್ಲಿ ಸುಂದರ ಕೈತೋಟ ನಿರ್ಮಿಸಲಾಗಿದೆ. 20 ತೆಂಗಿನ ಗಿಡಗಳನ್ನು ಬೆಳೆಸುತ್ತಿದ್ದೇವೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಮಾದರ.

‘ಪ್ರತಿದಿನ ಬೆಳಿಗ್ಗೆ 6 ರಿಂದ 7 ಗಂಟೆವರೆಗೆ ಶಿಕ್ಷಕ ಬಸವರಾಜ ಹೇರೂರ ಅವರು ಮಕ್ಕಳಿಗೆ ಯೋಗ ಶಿಕ್ಷಣ ನೀಡುತ್ತಾರೆ. ಆ ನಂತರ 8.30ರವರೆಗೆ ನವೋದಯ ಹಾಗೂ ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುತ್ತಿದ್ದೇವೆ’ ಎಂದು ಎಸ್‌ಡಿಎಂಸಿ ಸದಸ್ಯ ನಾಗರಾಜ ಮೂಡಿ ಹೇಳಿದರು. 

‘ಗೈಡ್ ವಿಭಾಗದಲ್ಲಿ ನಮ್ಮ ಶಾಲೆಯ ನಿವೇದಿತಾ ಅಕ್ಕಿವಳ್ಳಿ ರಾಷ್ಟ್ರಪತಿ ಪುರಸ್ಕಾರ ಪಡೆದಿದ್ದಾಳೆ. ಜತೆಗೆ ಒಂಬತ್ತು ರಾಜ್ಯ ಪ್ರಶಸ್ತಿಗಳೂ ನಮ್ಮ ಶಾಲೆಗೆ ಬಂದಿವೆ’ ಎನ್ನುತ್ತಾರೆ ಶಿಕ್ಷಕಿಯರಾದ ಆರ್.ಎನ್ ಅಣ್ಣಿಗೇರಿ ಹಾಗೂ ಡಿ.ಅನ್ನಪೂರ್ಣ.

ಪ್ರತಿದಿನವೂ ವಿಶೇಷ

‘ಈ ಶಾಲೆಯಲ್ಲಿ ಪ್ರತಿದಿನ 3.30 ರಿಂದ 4.30ರವರೆಗೆ ವಿಶೇಷ ತರಗತಿ ನಡಸಲಾಗುತ್ತಿದೆ. ಸೋಮವಾರ ಇಂಗ್ಲೀಷ್ ವ್ಯಾಕರಣ, ಮಂಗಳವಾರ ಕನ್ನಡ ವ್ಯಾಕರಣ, ಬುಧವಾರ ವಾರಕ್ಕೊಂದು ಪ್ರಯೋಗ, ಗುರುವಾರ ಸ್ಕೌಟ್ ಮತ್ತು ಗೈಡ್, ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮ, ಶನಿವಾರ ರಸಪ್ರಶ್ನೆ ಮತ್ತು ನೋ ಬ್ಯಾಗ್‌ ಡೇ... ಹೀಗೆ, ನಿತ್ಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ’ ಎನ್ನುತ್ತಾರೆ ಸಿಆರ್‌ಪಿ ರವೀಂದ್ರ.ಬಿ.ಕರಡಿ.

Post Comments (+)