ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡಾದ ಹಾವೇರಿ: ಜೋರು ಮಳೆ

Published 7 ಜುಲೈ 2024, 14:52 IST
Last Updated 7 ಜುಲೈ 2024, 14:52 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಕೆಲದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ಬಿಡುವು ಕೊಡುತ್ತಲೇ ಮತ್ತೆ ಜೋರು ಮಳೆ ಸುರಿಯಿತು.

ಮೋಡ ಕವಿದ ವಾತಾವರಣ ಜೊತೆಯಲ್ಲಿ ಚಳಿಯೂ ಹೆಚ್ಚಿತ್ತು. ಆಗಾಗ, ತುಂತುತು ಮಳೆ ಸುರಿಯಿತು. ಇದರ ಜೊತೆಯಲ್ಲಿಯೇ ಜೋರು ಮಳೆಯೂ ಆಯಿತು.

ಮಳೆಗಾಲ ಆರಂಭದ ದಿನದಲ್ಲಿ ತಕ್ಕಮಟ್ಟಿಗೆ ಮಳೆಯಾಗಿತ್ತು. ನಂತರದ ದಿನಗಳಲ್ಲಿ ಮಳೆ ಕೊರತೆ ಕಾಣುತ್ತಿತ್ತು. ಇದೀಗ ಎರಡು ದಿನಗಳಿಂದ ಬಿಡುವು ಕೊಡುತ್ತಲೇ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯ ನಿರೀಕ್ಷೆ ಇದೆ.

ಹಾನಗಲ್ ರಸ್ತೆ, ಕಾಗಿನೆಲೆ ರಸ್ತೆ, ಗುತ್ತಲ ರಸ್ತೆ, ಅಶ್ವಿನಿ ನಗರ, ವಿದ್ಯಾನಗರ, ಬಸವೇಶ್ವರ ನಗರ, ನಾಗೇಂದ್ರನಮಟ್ಟಿ, ಮಾರುಕಟ್ಟೆ ಪ್ರದೇಶ, ಸುಭಾಷ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಯಿತು. ಸೋಮವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆ ಮೋಡ ಮುಸುಕಿದ ವಾತಾವರಣ ಕಂಡುಬಂತು. ಬಿಟ್ಟು ಬಿಟ್ಟು ಮಳೆ ಸುರಿಯಿತು.

ಭಾನುವಾರ ನಗರದಲ್ಲಿ ಸಂತೆ ದಿನವಾಗಿದ್ದರಿಂದ ನೆಹರು ಮಾರುಕಟ್ಟೆ, ದೊಡ್ಡಪೇಟೆ ತರಕಾರಿ ಮಾರುಕಟ್ಟೆ ಮತ್ತು ಎ.ಪಿ.ಎಂ.ಸಿ ಹಳೇ ತರಕಾರಿ ಮಾರುಕಟ್ಟೆಯಲ್ಲಿ ಮಳೆಯಲ್ಲಿಯೇ ವ್ಯಾಪಾರ ನಡೆಯಿತು. ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಮುಂಗಾರು ಹಂಗಾಮಿಗೆ ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು, ಮಳೆ ಆಗುತ್ತಿರುವುದಕ್ಕೆ ಸಂತಸಪಡುತ್ತಿದ್ದಾರೆ.

ಹಾನಗಲ್: ಪಟ್ಟಣ ಹಾಗೂ ತಾಲ್ಲೂಕಿನ ಹಲವೆಡೆ ಭಾನುವಾರ ಮಳೆ ಸುರಿಯಿತು. ಬೆಳಗಾಲಪೇಟೆ, ತಿಳಿವಳ್ಳಿ, ಅಕ್ಕಿಆಲೂರು, ಆಡೂರು, ಬೊಮ್ಮನಹಳ್ಳಿ, ಮಂತಗಿ ಹಾಗೂ ಸುತ್ತಮುತ್ತ ಉತ್ತಮ ಮಳೆ ಆಯಿತು. ನಿರಂತರ ಮಳೆಯಿಂದ ರೈತರು ಸಂಭ್ರಮಪಡುತ್ತಿದ್ದಾರೆ.

ಹಿರೇಕೆರೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಉತ್ತಮ ಮಳೆ ಆಯಿತು. ಬಿಟ್ಟು ಬಿಟ್ಟು ತುಂತುರು ಮಳೆ ಸುರಿಯಿತು.

ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇತ್ತು. ಕೊಂಚ ಕಾಲದ ಬಿಡುವಿನ ನಂತರ ಶುರುವಾದ ಜಿಟಿ ಜಿಟಿ ಮಳೆ ಹಾಗೆಯೇ ಇತ್ತು. ಆಗೊಮ್ಮೆ, ಈಗೊಮ್ಮೆ ಜೋರು ಮಳೆ ಸುರಿಯಿತು. ಮಲೆನಾಡಿನಂತೆ ಹಿರೇಕೆರೂರು ಪಟ್ಟಣ ಗೋಚರವಾಯಿತು. ದಿನವಿಡೀ ಮೋಡ ಕವಿದ ವಾತಾವರಣವಿತ್ತು.

ರಟ್ಟೀಹಳ್ಳಿ: ತಾಲ್ಲೂಕಿನ ಹಲವೆಡೆ ಭಾನುವಾರ ಬೆಳಿಗ್ಗೆಯಿಂದಲೇ ಬಿಡುವು ಕೊಡುತ್ತ ಮಳೆ ಸುರಿಯಿತು. ಜಿಟಿ ಜಿಟಿ ಮಳೆ ನಿರಂತರವಾಗಿತ್ತು. ಮಧ್ಯಾಹ್ನ ಸ್ವಲ್ಪ ಬಿಡುವು ಕೊಟ್ಟ ಮಳೆ, ಸಂಜೆ ಪುನಃ ಸುರಿಯಿತು. ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಮೆಕ್ಕೆಜೋಳ, ಹತ್ತಿ, ಶೇಂಗಾ ಬಿತ್ತನೆ ರೈತರಿಗೆ ಮಳೆ ಖುಷಿ ತರುತ್ತಿದೆ.

ಬ್ಯಾಡಗಿ, ಶಿಗ್ಗಾವಿ, ಸವಣೂರು, ಹಂಸಭಾವಿ, ಗುತ್ತಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT