ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಾ ತೀರದಲ್ಲಿ ಹೆಚ್ಚಿದ ಮರಳು ಮಾಫಿಯಾ!

Last Updated 29 ಆಗಸ್ಟ್ 2019, 14:34 IST
ಅಕ್ಷರ ಗಾತ್ರ

ಗುತ್ತಲ: ತುಂಗಭದ್ರಾ ನದಿಯಲ್ಲಿ ನೀರಿವು ಹರಿವು ಇಳಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪುನರಾರಂಭವಾಗಿದೆ. ಸಚಿವರು, ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೆರೆಪೀಡಿತ ಪ್ರದೇಶಗಳ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರೆ, ದುರುಳರು ಹಗಲು ರಾತ್ರಿ ಎನ್ನದೇ ಮರಳು ಸಾಗಣೆ ಮಾಡುತ್ತಿದ್ದಾರೆ.

ಹಾವೇರಿ ತಾಲ್ಲೂಕಿನ ಹಾವನೂರು–ಶಾಕಾರ ಗ್ರಾಮಗಳ ನಡುವಿನ ತುಂಗಭದ್ರಾ ನದಿ ದಂಡೆ ಮೇಲೆ ಭಾರೀ ಪ್ರಮಾಣದ ಮರಳನ್ನು ಸಂಗ್ರಹಿಸಲಾಗಿದೆ. ‘ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿದ್ದರೂ ಯಾವ ಅಧಿಕಾರಿಗಳೂ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ನದಿಯ ದಡದಲ್ಲಿ ಉಚಿತವಾಗಿ ಸಿಗುವ ಮರಳನ್ನು ಹಾವೇರಿಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೂ ಸಾಗಣೆ ಮಾಡಲಾಗುತ್ತಿದೆ. ಒಂದು ಲೋಡ್ ಮರಳನ್ನು ₹ 30 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರ ಸ್ಥಳೀಯ ಪೊಲೀಸರಿಗೆ ಗೊತ್ತಿದ್ದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದೂ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಲಾರಿ ವೇಗದ ಮಿತಿ ಇಲ್ಲ: ಮರಳು ತುಂಬಿಕೊಂಡು ಹೋಗುವ ಲಾರಿಗಳಿಗೆ ವೇಗಕ್ಕೆ ಮಿತಿಯೆ ಇಲ್ಲ. ಪೊಲೀಸರು ಆ ವಾಹನಗಳನ್ನು ತಡೆಯುವ ಗೋಜಿಗೂ ಹೋಗುವುದಿಲ್ಲ. ಐದು ವರ್ಷಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮರಳು ಲಾರಿಗೇ ಸಿಲುಕಿ ಮೃತಪಟ್ಟಿದ್ದಾರೆ. ಆದರೂ, ಈ ವಿಷಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ.

ಇತ್ತೀಚೆಗೆ ಮೈಲಾರ ಕ್ರಾಸ್ ಬಳಿ ಮರಳು ಲಾರಿ ಹರಿದು ಕುರಿಗಾಹಿ ಹಾಗೂ 15ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮರಣ ಹೊಂದಿದ್ದವು. ನಿತ್ಯ 2–3 ನಾಯಿಗಳು, ಕುದುರೆಗಳು, ಬಿಡಾಡಿ ದನಗಳು ಈ ಲಾರಿಗಳಿಗೆ ಬಲಿಯಾಗುತ್ತಿವೆ ಎಂದು ಪೊಲೀಸರೇ ಹೇಳುತ್ತಾರೆ.

ನದಿಯ ಒಡಲಿಗೆ ಕುತ್ತು:‘ಅಕ್ರಮ ಮರಳು ಗಣಿಗಾರಿಕೆ ನಡೆಸುವವರು, ನದಿಯ ದಡದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ನಿರ್ಮಿಸಿ ಮರಳು ತೆಗೆಯುತ್ತಾರೆ. ನೀರಿನ ಹರಿವು ಹೆಚ್ಚಾದಾಗ ಆ ಗುಂಡಿಗಳಿಗೂ ನೀರು ತುಂಬಿಕೊಳ್ಳುತ್ತದೆ. ಆ ಗುಂಡಿಗಳಿಗೆ ಬಿದ್ದು ಮಕ್ಕಳು ಮೃತಪಟ್ಟಿರುವ ನಿದರ್ಶನಗಳೂ ಇವೆ’ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೆ.ಶ್ರೀವಾಸ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT