ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೌರ ವಿವಾದ’ ಇನ್ನೂ ಬೂದಿ ಮುಚ್ಚಿದ ಕೆಂಡ

ಭರಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ, ಗ್ರಾಮಕ್ಕೇ ಗಂಡಾಂತರ; ಡಿವೈಎಸ್ಪಿ
Last Updated 25 ಅಕ್ಟೋಬರ್ 2019, 6:39 IST
ಅಕ್ಷರ ಗಾತ್ರ

ಹಾವೇರಿ:ಪರಿಶಿಷ್ಟ ಜಾತಿಯವರಿಗೆ ಕ್ಷೌರ ಮಾಡುವ ವಿಚಾರಕ್ಕೆ ಇಲ್ಲಿನ ಭರಡಿ ಗ್ರಾಮದಲ್ಲಿಉಲ್ಬಣಗೊಂಡಿರುವ ವಿವಾದ, ಗುರುವಾರಇನ್ನಷ್ಟುಗಂಭೀರ ಸ್ವರೂಪ ಪಡೆದುಕೊಂಡಿತು. ಎರಡೂ ವರ್ಗಗಳ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು, ಪರಿಸ್ಥಿತಿ‌ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಯಿತು.

ಈ ವೇಳೆಮಧ್ಯಪ್ರವೇಶಿಸಿದ ಡಿವೈಎಸ್ಪಿ ವಿಜಯಕುಮಾರ್ ಎಂ.ಸಂತೋಷ, ‘ಇದೇ ರೀತಿ ಅಸ್ಪೃಶ್ಯತೆ ಮುಂದುವರಿಸಿಕೊಂಡು ಹೋದರೆ, ಗ್ರಾಮಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ. ನಾವೂ ಸಂಧಾನ ಬಿಟ್ಟು ಎಲ್ಲರ ವಿರುದ್ಧಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿಮೂರು ತಿಂಗಳಿನಿಂದ ಸೃಷ್ಟಿಯಾಗಿರುವ ‘ಕ್ಷೌರ ವಿವಾದ’ವನ್ನುಇತ್ಯರ್ಥಪಡಿಸಲು ಪೊಲೀಸರು, ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗುರುವಾರ ಮೂರು ಶಾಂತಿ ಸಭೆಗಳನ್ನು ನಡೆಸಿದರು. ಆದರೆ, ಎರಡೂ ಬಣಗಳ ನಡುವೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಕಾರಣ, ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.

ಗ್ರಾಮದಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಡಿವೈಎಸ್ಪಿ, ‘ಗ್ರಾಮ ಎಂದರೆ ಎಲ್ಲ ಜನಾಂಗದವರೂ ಕೂಡಿ ಬಾಳಬೇಕು. ಪೂರ್ವಜರ ಕಾಲದ ದಡ್ಡತನದ ವ್ಯವಸ್ಥೆಗಳನ್ನು ಮರೆತುಬಿಡಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರ ರಕ್ಷಣೆಗೆ ಕಾಯ್ದೆಗಳು ಬಂದಿವೆ. ಯಾರೂ ಇಂತಹ ಮೌಢ್ಯಗಳನ್ನು ಬೆಂಬಲಿಸುತ್ತಾರೋ ಅವರಿಗೆಲ್ಲ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ’‍ ಎಂದು ಎಚ್ಚರಿಕೆ ನೀಡಿದರು.

ಬಿಸಿಯೂಟಕ್ಕೂ ದಲಿತರಿಲ್ಲ!

‘ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಕೆಲಸಕ್ಕೆ ದಲಿತರನ್ನು ನೇಮಕ ಮಾಡಿಲ್ಲ ಎಂಬ ದೂರುಗಳೂ ಇವೆ. ಇಂತಹ ಕೆಟ್ಟ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋದರೆ, ಜೈಲು ಶಿಕ್ಷೆ ಕಾಯಂ. ಇನ್ನಾದರೂ ಎಲ್ಲಾದರೂ ಬದಲಾಗಿ’ ಎಂದು ಪೊಲೀಸರು ಬುದ್ಧಿಮಾತು ಹೇಳಿದರು.

‘ಎಲ್ಲ ಜಾತಿಯವರಲ್ಲೂ ಹರಿಯುತ್ತಿರುವುದು ಒಂದೇ ಬಣ್ಣದ ರಕ್ತ ಎಂದ ಮೇಲೆ, ಭಿನ್ನ ಆಲೋಚನೆಗಳನ್ನೇಕೆ ಮಾಡುತ್ತೀರಿ?ಗ್ರಾಮಕ್ಕೆ ಯಾರೇ ಕ್ಷೌರ ಮಾಡುವವರೂ ಬಂದರೂ, ಎಲ್ಲರೂ ಹೊಂದಾಣಿಕೆಯಿಂದ ಅವರನ್ನು ಬಳಸಿಕೊಳ್ಳಿ’ ಎಂದೂ ಸಲಹೆ ನೀಡಿದರು.

ಕೊಡ, ನಳ ಮುಟ್ಟಂಗಿಲ್ರೀ..

‘ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಮುದಾಯದವರ ಸಭೆಯೂ ನಡೆಯಿತು. ಅಲ್ಲಿ ಮಹಿಳೆಯೊಬ್ಬರು, ‘ನಾವು ನೀರು ಹಿಡಿಯಲಿಕ್ಕೆ ಹೋದರೆ ಮೇಲ್ಜಾತಿಯವರು ಬಾಯಿಗೆ ಬಂದಂತೆ ಬಯ್ಯುತ್ತಾರೆ. ಅವರ ಕೊಡ, ನಳ ಮುಟ್ಟದಂತೆ ಎಚ್ಚರಿಸುತ್ತಾರೆ. ನಮಗೆ ಊರಿನ ದೇವಸ್ಥಾನ, ಹೋಟೆಲ್‌ಗಳಲ್ಲೂ ಪ್ರವೇಶವಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT