ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | 24x7 ಹೆರಿಗೆ: ಜಿಲ್ಲೆಯಲ್ಲಿ ಹೆಸರಿಗಷ್ಟೇ ಸೌಲಭ್ಯ!

ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಸಿಗದ ಉತ್ತಮ ಸೇವೆ: ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ರೋಗಿಗಳ ಪರದಾಟ
Last Updated 11 ಜುಲೈ 2022, 7:40 IST
ಅಕ್ಷರ ಗಾತ್ರ

ಹಾವೇರಿ: ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಸ್ಥಾಪಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಲ್ಲಿ ಉತ್ತಮ ಸೇವೆ ಸಿಗುತ್ತಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಹಾವೇರಿ ಜಿಲ್ಲೆಯಲ್ಲಿ ಒಟ್ಟು 67 ಪಿಎಚ್‌ಸಿಗಳಿದ್ದು, ಇವುಗಳ ಪೈಕಿ 37 ಪಿಎಚ್‌ಸಿ ಮತ್ತು 5 ಸಿಎಚ್‌ಸಿಗಳಲ್ಲಿ24X7 ಹೆರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ದಿನದ 24 ಗಂಟೆಯೂ ಸೇವೆ ಎಂಬುದು ಹೆಸರಿಗಷ್ಟೇ ಎಂಬಂತಿದೆ. ಕೆಲವರಿಗೆ ಮಾತ್ರ ಸಹಜ ಹೆರಿಗೆ ಮಾಡಿಸುವ ಇಲ್ಲಿನ ವೈದ್ಯಕೀಯ ಸಿಬ್ಬಂದಿ, ಬಹುತೇಕ ಗರ್ಭೀಣಿಯರನ್ನು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳತ್ತ ಸಾಗ ಹಾಕುತ್ತಾರೆ. ಕಾರಣ ಕೇಳಿದರೆ, ಗಂಭೀರ ಮತ್ತು ಸಮಸ್ಯಾತ್ಮಕ ಪ್ರಕರಣಗಳ ಹೆರಿಗೆ ಮಾಡಿಸಲು ಅರಿವಳಿಕೆ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಕೊರತೆಯಿದೆ ಎನ್ನುತ್ತಾರೆ ಶುಶ್ರೂಷಕಿಯರು.

ರಾತ್ರಿ ವೇಳೆಯೂ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಸಿಗಲಿ ಎಂದು ವಸತಿಗೃಹಗಳನ್ನು ಕಟ್ಟಿಸಿದ್ದರೂ, ಬಹುತೇಕ ವೈದ್ಯಕೀಯ ಸಿಬ್ಬಂದಿ ಪಟ್ಟಣ ಮತ್ತು ನಗರಗಳಿಂದ ಓಡಾಡುತ್ತಾರೆ. ಹೀಗಾಗಿ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡರೆ, ಹಳ್ಳಿಗಳಿಂದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಿಗೆ ಬರುವುದು ಅನಿವಾರ್ಯವಾಗುತ್ತದೆ. ರಾತ್ರಿ ವೇಳೆ ವಾಹನ ಕೊರತೆಯಿಂದ ಗರ್ಭಿಣಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಅರಿವಳಿಕೆ ತಜ್ಞ ವೈದ್ಯರಿಲ್ಲ

ಹಾನಗಲ್: ಇಲ್ಲಿಯ ಸಾರ್ವಜನಿಕ ಆಸ್ಪತ್ರೆ ಮತ್ತು ಅಕ್ಕಿಆಲೂರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಜೇರಿಯನ್‌ ಸೌಲಭ್ಯಗಳನ್ನು ಹೊರತುಪಡಿಸಿ, ತಾಲ್ಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಜ ಹೆರಿಗೆಗೆ ಮಾತ್ರ ಅವಕಾಶವಿದೆ.

ಹಾನಗಲ್‌ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಿದ್ದಾರೆ. ಆದರೆ ಅರಿವಳಿಕೆ ತಜ್ಞ ವೈದ್ಯರಿಲ್ಲ. ಇರುವುದು ಒಂದೇ ಓ.ಟಿ (ಶಸ್ತ್ರಚಿಕಿತ್ಸೆ ಕೊಠಡಿ). ಅಕ್ಕಿಆಲೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರಿವಳಿಕೆ ತಜ್ಞರಿದ್ದಾರೆ. ಆದರೆ ಸ್ತ್ರೀರೋಗ ತಜ್ಞರ ಕೊರತೆ ಇದೆ. ಹೀಗಾಗಿ ಎರಡೂ ಆಸ್ಪತ್ರೆಗಳಲ್ಲಿ 24X7 ಹೆರಿಗೆ ಸೇವೆ ಸಾಧ್ಯವಾಗುತ್ತಿಲ್ಲ.

‘ತಾಲ್ಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವ್ಯವಸ್ಥೆ ಒದಗಿಸಲಾಗಿದೆ. ಆದರೆ, ಸಿಜೇರಿಯನ್‌ ಹೆರಿಗೆಗಳನ್ನು ಹಾನಗಲ್ ಇಲ್ಲವೇ, ಅಕ್ಕಿಆಲೂರ ಆಸ್ಪತ್ರೆಯಲ್ಲಿ ಮಾಡಿಸಲಾಗುತ್ತದೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ನಡುವೆಯೂ ಸೇವೆಗೆ ಸಿದ್ಧರಾಗಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ್‌ ತಿಳಿಸಿದ್ದಾರೆ.

ಸೌಲಭ್ಯ ಮರೀಚಿಕೆ: ಖಾಸಗಿ ಲ್ಯಾಬ್‌ಗಳೇ ದಿಕ್ಕು

ರಾಣೆಬೆನ್ನೂರು:ನಗರದ ಹೆರಿಗೆ ಆಸ್ಪತ್ರೆಯಲ್ಲಿ ಹಾಗೂ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯಿಂದ ಹಿಡಿದು ಹೆರಿಗೆ ಮಾಡುವವರೆಗೂ ಎಲ್ಲದಕ್ಕೂ ಲಂಚ ಕೊಡಬೇಕು. ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಎಕ್ಸರೇ ಹೀಗೆ ಎಲ್ಲವೂ ಖಾಸಗಿ ಲ್ಯಾಬ್‌ಗಳಲ್ಲಿ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ತಾಲ್ಲೂಕಿನಲ್ಲಿ ಒಟ್ಟು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ಹೆರಿಗೆ ಮಾಡಿಸಲಾಗುತ್ತಿದೆ.ನಗರದ ಹೆರಿಗೆ ಆಸ್ಪತ್ರೆಯಲ್ಲಿ ತಿಂಗಳಿಗೆ ಪ್ರತೀ ತಿಂಗಳು ಇಲ್ಲಿ 150ರಿಂದ 180ಕ್ಕೂ ಜಾಸ್ತಿ ಹೆರಿಗೆ ಪ್ರಕರಣಗಳು ದಾಖಲಾಗುತ್ತವೆ.

‘ತಾಲ್ಲೂಕಿನಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳು ಇಲ್ಲ. ಹರನಗಿರಿ, ಆರೇಮಲ್ಲಾಪರ ಹಾಗೂ ಮಾಕನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಸದ್ಯ ಆಯುಷ್‌ ಇಲಾಖೆಯ ವೈದ್ಯರನ್ನು ನೇಮಿಸಲಾಗಿದೆ. ನಗರದ ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 4 ಕ್ಯಾಸುಯಲ್ಟಿ ಮೆಡಿಕಲ್‌ ಆಫೀಸರ್‌ ಹುದ್ದೆಗಳು ಖಾಲಿ ಇವೆ’ ಎನ್ನುತ್ತಾರೆ ಆರೋಗ್ಯ ಅಧಿಕಾರಿ ಡಾ.ಕಾಂತೇಶ ಭಜಂತ್ರಿ.

ಚಿಕಿತ್ಸೆ ಬಗ್ಗೆ ಅಸಮಾಧಾನ

ರಟ್ಟೀಹಳ್ಳಿ:‘ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭ ಬಂದರೆ ಇಲ್ಲಿ ಅರಿವಳಿಕೆ ತಜ್ಞ ಹಾಗೂ ಸೀನಿಯರ್ ಮೆಡಿಕಲ್ ಆಫೀಸಿರ್‌ ಇರುವುದಿಲ್ಲ ಎನ್ನುತ್ತಾರೆ’ ಇಲ್ಲಿನ ಮಹಿಳಾ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಾ ಬಣಗಾರ.

‘ರಟ್ಟೀಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕಿನ ಸುತ್ತಮುತ್ತಲಿನಿಂದ ಬಡ ಹೆಣ್ಣುಮಕ್ಕಳು ಹೆರಿಗೆಗಾಗಿ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಸಂಜೆ ನಂತರ ಹಾಗೂ ರಾತ್ರಿ ಸಮಯದಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಇಲ್ಲಿನ ವೈದ್ಯರು ರೋಗಿಗಳನ್ನು ಮುಟ್ಟಿ ಪರೀಕ್ಷಿಸುವುದಿಲ್ಲ. ದೂರದಿಂದಲೇ ಏನು ತೊಂದರೆ ಅಂತಾ ಕೇಳಿ ಔಷಧಿ ಬರೆದು ಕೊಡುತ್ತಾರೆ. ಇದರಿಂದ ರೋಗಿಗಳಿಗೆ ವೈದ್ಯರ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ’ ಎಂದು ಕುಮದ್ವತಿ ಮಹಿಳಾ ಬ್ಯಾಂಕ್‌ ಅಧ್ಯಕ್ಷೆ ರೂಪಾ ಅಂಬ್ಲೇರ.

***

ರಾತ್ರಿ ವೇಳೆ ಸಿಬ್ಬಂದಿ ನಾಪತ್ತೆ!

ಬ್ಯಾಡಗಿ:ಶಂಕ್ರಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಹಾಗೂ ಸ್ಟಾಫ್‌ ನರ್ಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಜೆ ಯಾರೂ ಆಸ್ಪತ್ರೆಯಲ್ಲಿ ಲಭ್ಯವಾಗುವುದಿಲ್ಲ. ಇದರಿಂದ ಗರ್ಭಿಣಿಯರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆ ಇದ್ದರೂ ವೈದ್ಯರಿಲ್ಲದೆ ಸುತ್ತಲಿನ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಅಲ್ಲಿ ವೈದ್ಯರು 24 ಗಂಟೆ ಲಭ್ಯವಾಗುವಂತಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

‘ಶಂಕ್ರಿಪುರ ಹೊರತುಪಡಿಸಿ ಉಳಿದ 3 ಪಿಎಚ್‌ಸಿಗಳಲ್ಲಿ ತಲಾ ಇಬ್ಬರು ವೈದ್ಯರು ಹಾಗೂ ಮೂವರು ಸ್ಟಾಫ್‌ ನರ್ಸ್ ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಾಸೂರ ಕೇಂದ್ರದಲ್ಲಿ ಮಾತ್ರ ಒಬ್ಬರು ಸ್ಟಾಫ್‌ ನರ್ಸ್ ಕಾರ್ಯ ನಿರ್ವಹಿಸುತ್ತಿದ್ದು ದಿನದ 24 ಗಂಟೆ ಸೇವೆ ಲಭ್ಯವಿದೆ. ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯಲ್ಲಿಯೂ ಸೇವೆ ಲಭ್ಯವಿದೆ. ತುರ್ತು ಸಂದರ್ಭಗಳಲ್ಲಿ 108 ವಾಹನ ಲಭ್ಯವಿದ್ದು, ಅವುಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸುಹಿಲ್ ಹರವಿ ತಿಳಿಸಿದರು.

***

ಹೆರಿಗೆ ಮಾಡಿಸಲು ಲಂಚ: ಆರೋಪ

ಸವಣೂರು: ‘ಪ್ರತಿಯೊಂದು ಹೆರಿಗೆಗೆ ₹5ರಿಂದ ₹8 ಸಾವಿರದವರೆಗೂ ಲಂಚ ಪಡೆಯುತ್ತಿದ್ದಾರೆ. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗದೇ ಇರುವುದರಿಂದ ಸವಣೂರು ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿ ಕೂಡ ಅವರು ಕೇಳಿದಷ್ಟು ಹಣವನ್ನು ನೀಡಿ ಹೆರಿಗೆ ಮಾಡಿಸುವಂತಾಗಿದೆ’ ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 7ಪಿಎಚ್‌ಸಿ ಮತ್ತು ಒಂದು ತಾಲ್ಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು 8 ಆಸ್ಪತ್ರೆಗಳಿವೆ. ತಾಲ್ಲೂಕಿನ 8 ಆಸ್ಪತ್ರೆಗಳಿಗೆ ಆರೋಗ್ಯ ವೈದ್ಯಾಧಿಕಾರಿಗಳು 7, ಪ್ರಾಥಮಿಕ ಆರೋಗ್ಯ ಸಮುದಾಯ ಅಧಿಕಾರಿಗಳು 32, ಆರೋಗ್ಯ ನಿರೀಕ್ಷಣಾಧಿಕಾರಿಗಳು 11, ಸಮುದಾಯ ಆರೋಗ್ಯ ಅಧಿಕಾರಿಗಳು 21, ಆಯುಷ್ಯ ವೈದ್ಯಾಧಿಕಾರಿಗಳು 3, ಲ್ಯಾಬ್ ಟೆಕ್ನಿಷಿಯನ್ 6 ಹುದ್ದೆಗಳ ಅವಶ್ಯವಿದೆ.

‘ಸವಣೂರು ತಾಲ್ಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಇದುವರೆಗೂ ಇಲ್ಲ. ಆದರೆ, ಪ್ರಸಕ್ತವಾಗಿ ಯಲವಗಿ ಗ್ರಾಮಕ್ಕೆ ಜಾರಿಯಾಗಿದ್ದು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ಮುಗಿದ ನಂತರ ಆಸ್ಪತ್ರೆಯನ್ನು ಆರಂಭಿಸಿ ಸಾರ್ವಜನಿಕರಿಗೆ ಸೇವೆ ನೀಡಲಾಗುವುದು’ ಎನ್ನುತ್ತಾರೆ ಟಿಎಚ್‌ಒ ಚಂದ್ರಕಲಾ ಜೆ.

***

ಕಾಡುತ್ತಿರುವ ತಜ್ಞವೈದ್ಯರ ಕೊರತೆ

ಶಿಗ್ಗಾವಿ: ತಾಲ್ಲೂಕಿನಲ್ಲಿರುವ ಪ್ರಾಥಮಿಕ ಮತ್ತುಸಮುದಾಯ ಆರೋಗ್ಯ ಕೇಂದ್ರಗಳು ಸಿಬ್ಬಂದಿ ಕೊರತೆಯಿಂದ ಕುಂಟುತ್ತಾ ಸಾಗುತ್ತಿವೆ.

ತಾಲ್ಲೂಕು ಕೇಂದ್ರದಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಗ್ರಾಮೀಣ ಮಟ್ಟದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದ ವಿವಿಧ ವಿಭಾಗಗಳನ್ನು ಲಭ್ಯವಿರುವ ಸಿಬ್ಬಂದಿಯೇ ನಿಭಾಯಿಸುತ್ತಿದ್ದಾರೆ. ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವಿಭಾಗಗಳಿದ್ದು, ರಾತ್ರಿ, ಹಗಲು ವೇಳೆ ಸರತಿಯಂತೆ ಹೆರಿಗೆ ಮಾಡುವ ಸೇವೆ ನೀಡಲಾಗುತ್ತಿದೆ. ಆದರೆ, ತಜ್ಞವೈದ್ಯರ ಕೊರತೆ ಕೆಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾಡುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ಎಚ್.ಹನುಮಂತಪ್ಪ ಹೇಳಿದರು.

‘ಕೋಣನಕೇರಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಇಲ್ಲಿ ಹೆರಿಗೆ ಸೌಲಭ್ಯವಿಲ್ಲ. ಹೀಗಾಗಿ ಸುತ್ತಲಿನ ಗ್ರಾಮಸ್ಥರು ದೂರದ ಶಿಗ್ಗಾವಿ, ದುಂಢಸಿ, ಬಂಕಾಪುರ ಆಸ್ಪತ್ರೆಗೆ ಹೋಗಬೇಕಾಗಿದೆ. ಸರ್ಕಾರ ಪಿಎಚ್‌ಸಿಯನ್ನು ಮೇಲ್ದರ್ಜೆಗೆ ಏರಿಸಿ, ಇಲ್ಲಿ ಹೆರಿಗೆ ಸೌಲಭ್ಯ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ದೂರುತ್ತಾರೆ.
***

ರಾತ್ರಿ ವೇಳೆ ವೈದ್ಯರು ಸಿಗಲ್ಲ. ಈ ಕಾರಣಕ್ಕಾಗಿ ಹಾವೇರಿ ಅಥವಾ ಶಿರಸಿ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಜನರು ಹೋಗುವಂತಾಗಿದೆ
- ಮಾಲತೇಶ ಬಿ, ಹಾನಗಲ್‌ ನಿವಾಸಿ

***

ತಿಂಗಳಿಗೆ 40ರಿಂದ 50 ಹೆರಿಗೆ ಮಾಡಿಸುತ್ತೇವೆ. ಗಂಭೀರ ಮತ್ತು ಸಮಸ್ಯಾತ್ಮಕ ಹೆರಿಗೆಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ರೆಫರ್‌ ಮಾಡುತ್ತೇವೆ
- ಡಾ.ಮಾರುತಿ ಚಿಕ್ಕಣ್ಣನವರ, ವೈದ್ಯಾಧಿಕಾರಿ, ಹಾನಗಲ್‌
***

ಔಷಧಿ ಹಾಗೂ ಇತರೆ ಸಾಮಗ್ರಿಗಳನ್ನು ತರಲು ಎಲ್ಲದಕ್ಕೂ ಹೊರಗಡೆ ಚೀಟಿ ಬರೆದು ಕಳಿಸುತ್ತಾರೆ. ಪಿಎಚ್‌ಸಿಗಳೂ ಇದ್ದೂ ಇಲ್ಲದಂತಾಗಿವೆ
- ರವೀಂದ್ರಗೌಡ ಪಾಟೀಲ, ಮುಷ್ಟೂರು

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT